ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಹಣ ನಿರ್ವಹಣೆಗೆ ಪಂಚ ಸೂತ್ರಗಳು

Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಉಳಿತಾಯ ಮತ್ತು ಹೂಡಿಕೆಯನ್ನು ಉತ್ತಮ ರೀತಿಯಲ್ಲಿ ಮಾಡಲು ಹಣಕಾಸು ನಿರ್ವಹಣೆಯ ಕೆಲ ಮೂಲ ತತ್ವಗಳನ್ನು ಅನುಸರಿಸಬೇಕು. ಹೀಗೆ ಮಾಡಿದಾಗ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಸಾಧ್ಯವಾಗುತ್ತದೆ. ಕುಟುಂಬದ ಒಟ್ಟಾರೆ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಬನ್ನಿ ವೈಯಕ್ತಿಕ ಹಣಕಾಸು ನಿರ್ವಹಣೆಯ ಐದು ಪ್ರಮುಖ ಸೂತ್ರಗಳ ಬಗ್ಗೆ ತಿಳಿಯೋಣ.

1. ರೂಲ್ ಆಫ್ 70: ಬೆಲೆ ಏರಿಕೆಯಿಂದಾಗಿ ಎಷ್ಟು ವರ್ಷಗಳಿಗೊಮ್ಮೆ ಹಣದ ಮೌಲ್ಯ ಕುಸಿತಗೊಳ್ಳಲಿದೆ
ಎನ್ನುವುದನ್ನು ‘ರೂಲ್ ಆಫ್ 70’ ತಿಳಿಸುತ್ತದೆ. 70ರ ಜತೆ ಪ್ರಸುತ ಬೆಲೆ ಏರಿಕೆ ದರವನ್ನು ಭಾಗಿಸಿದಾಗ ಎಷ್ಟು ವರ್ಷಗಳಿಗೊಮ್ಮೆ ನಿಮ್ಮ ದುಡ್ಡಿನ ಮೌಲ್ಯ ಅರ್ಧಕ್ಕೆ ಇಳಿಯಲಿದೆ ಎನ್ನುವುದು ಗೊತ್ತಾಗುತ್ತದೆ. ಉದಾಹರಣೆಗೆ ಪ್ರಸ್ತುತ ಹಣದುಬ್ಬರ ದರ ಶೇ 7ರಷ್ಟಿದೆ ಎಂದುಕೊಳ್ಳೋಣ. 70ರ ಜೊತೆ 7 ಅನ್ನು ಭಾಗಿಸಿದಾಗ 10 ವರ್ಷಗಳಿಗೊಮ್ಮೆ ನಿಮ್ಮ ದುಡ್ಡು ಅರ್ಧದಷ್ಟು ಮೌಲ್ಯ ಕಳೆದುಕೊಳ್ಳಲಿದೆ ಎಂದು ತಿಳಿಯುತ್ತದೆ. ಅಂದರೆ ಇವತ್ತು ನಿಮ್ಮ ಬಳಿ ಇರುವ ₹5 ಸಾವಿರ 10 ವರ್ಷಗಳ ಬಳಿಕ ₹2,500ರ ಮೌಲ್ಯವನ್ನು ಮಾತ್ರ ಹೊಂದಿರಲಿದೆ. ಹಾಗಾಗಿಯೇ ನಾವು ಹೂಡಿಕೆ ಮ ಡುವಾಗ ಬೆಲೆ ಏರಿಕೆಯನ್ನು ಮೀರಿ ಲಾಭ ತಂದುಕೊಡುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

2. 40% ಇಎಂಐ ನಿಯಮ: ನಿಮ್ಮ ಮಾಸಿಕ ಸಾಲದ ಕಂತು ತಿಂಗಳ ಆದಾಯದ ಶೇ 40ಕ್ಕಿಂತ ಹೆಚ್ಚಿಗೆ ಇರಬಾರದು ಎನ್ನುವುದನ್ನು 40% ಇಎಂಐ ನಿಯಮ ಹೇಳುತ್ತದೆ. ಉದಾಹರಣೆಗೆ ನಿಮ್ಮ ಮಾಸಿಕ ಆದಾಯ ₹1 ಲಕ್ಷ ಇದ್ದರೆ ನಿಮ್ಮ ಎಲ್ಲ ಸಾಲಗಳ (ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ, ಇತರೆ) ಒಟ್ಟು ಮಾಸಿಕ ಕಂತು ₹40 ಸಾವಿರ ದಾಟಬಾರದು. ಸಾಲದ ಕಂತು ಆದಾಯದ ಶೇ 40ಕ್ಕಿಂತ ಹೆಚ್ಚಿಗೆ ಇದ್ದರೆ ಭವಿಷ್ಯದ ಹೂಡಿಕೆ ಮೇಲೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದಾಯದಲ್ಲಿ ಹೆಚ್ಚಿನ ಪಾಲು ಸಾಲಕ್ಕೆ ಹೋದರೆ ನಿವೃತ್ತಿಗಾಗಿ ಹೂಡಿಕೆ, ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಕಷ್ಟವಾಗುತ್ತದೆ.


3. 30 ದಿನಗಳ ನಿಯಮ: ಆಸೆಬುರುಕತನದಿಂದ ಅಥವಾ ಕೊಳ್ಳುಬಾಕತನದಿಂದ ಕೆಲವು ಖರೀದಿಗೆ ನಾವು
ಮುಂದಾಗುತ್ತೇವೆ. ಅದನ್ನು ನಿಯಂತ್ರಿಸಲು 30 ದಿನಗಳ ನಿಯಮ ನೆರವಿಗೆ ಬರುತ್ತದೆ. ಉದಾಹರಣೆಗೆ ನೀವು ಯಾವುದೋ ವಸ್ತುವನ್ನು ನೋಡುತ್ತೀರಿ. ಅದನ್ನು ಖರೀದಿಸಬೇಕು ಎನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಆ ವಸ್ತುವನ್ನು ತಕ್ಷಣ ಕೊಳ್ಳಲು ಹೋಗಬೇಡಿ. 30 ದಿನ ಆ ಖರೀದಿಯನ್ನು ಮುಂದೂಡಿ. ಅದಾದ ಮೇಲೂ ವಸ್ತು ಕೊಳ್ಳುವ ಅಗತ್ಯವಿದೆ ಎನಿಸಿದರೆ ಖರೀದಿಸಿ. ಹೀಗೆ ಮಾಡುವುದರಿಂದ ಧುತ್ತೆಂದು ಅನಗತ್ಯ ವಸ್ತುಗಳ ಬಿಕರಿಯಿಂದ ದೂರ ಉಳಿಯಬಹುದು.


4. 6X ಎಮರ್ಜೆನ್ಸಿ ಫಂಡ್ ರೂಲ್: ದಿಢೀರ್ ಎಂದು ಬರುವ ಹಣಕಾಸಿನ ಕೊರತೆಗಳನ್ನು ನೀಗಿಸಿಕೊಳ್ಳಲು ನಮ್ಮ ಮಾಸಿಕ ಖರ್ಚು- ವೆಚ್ಚದ ಕನಿಷ್ಠ 6 ಪಟ್ಟು ಹಣವನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳಬೇಕು ಎಂದು 6X ಎಮರ್ಜೆನ್ಸಿ ಫಂಡ್ ರೂಲ್ ಹೇಳುತ್ತದೆ. ತುರ್ತು ನಿಧಿ ಆಪತ್ಕಾಲದ ಆಪ್ತಮಿತ್ರ. ಕೆಲಸ ಕಳೆದುಕೊಂಡಾಗ, ಮನೆಯಲ್ಲಿ ಯಾರಿಗೋ ಅನಾರೋಗ್ಯ ಕಾಡಿದಾಗ, ಅನಿರೀಕ್ಷಿತ ಖರ್ಚುಗಳು ಬಂದಾಗ 6X ಎಮರ್ಜೆನ್ಸಿ ಫಂಡ್ ನಿಮ್ಮ ನೆರವಿಗೆ ನಿಲ್ಲುತ್ತದೆ. ತುರ್ತು ನಿಧಿಯನ್ನು ಲಿಕ್ವಿಡ್ ಫಂಡ್ಸ್, ಸ್ವೀಪ್ ಇನ್ ಎಫ್.ಡಿ ಅಥವಾ ಉಳಿತಾಯ ಖಾತೆಯಲ್ಲಿ ಇಡುವುದು ಸೂಕ್ತ.


5. ರೂಲ್ ಆಫ್ 72: ನಾವು ಹೂಡಿಕೆ ಮಾಡುವ ಹಣ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ಹೀಗೊಂದು ಪ್ರಶ್ನೆ
ನಿಮಗೂ ಬಂದಿರಬಹುದು. ಈ ಪ್ರಶ್ನೆಗೆ ಉತ್ತರ ಕೂಡುವ ಸೂತ್ರವೇ ‘ರೂಲ್ ಆಫ್ 72.’ ಹೂಡಿಕೆ ಮೊತ್ತದ
ಮೇಲೆ ಪ್ರತಿ ವರ್ಷ ಪಡೆಯುವ ಬಡ್ಡಿ ಲಾಭವನ್ನು 72ರ ಜೊತೆ ಭಾಗಿಸಿದಾಗ ನಿಮ್ಮ ಹೂಡಿಕೆ ಎಷ್ಟು ವರ್ಷಗಳಲ್ಲಿ
ದ್ವಿಗುಣಗೊಳ್ಳಲಿದೆ ಎನ್ನುವುದು ತಿಳಿಯುತ್ತದೆ. ಉದಾಹರಣೆಗೆ ನೀವು ₹1 ಲಕ್ಷ ಹೂಡಿಕೆ ಮಾಡಿದ್ದು ಶೇ 7.2ರ ಬಡ್ಡಿ ಲಾಭ ಸಿಗುತ್ತಿದೆ ಎಂದುಕೊಳ್ಳಿ. ಈ ಲೆಕ್ಕಾಚಾರದಲ್ಲಿ ಒಂದು ಲಕ್ಷ 2 ಲಕ್ಷವಾಗಲು 10 ವರ್ಷಗಳು
ಬೇಕಾಗುತ್ತವೆ. ಹೀಗೆ ಲೆಕ್ಕಾಚಾರ ಮಾಡಿ ನೋಡಿ (72/7.2=10 ವರ್ಷಗಳು)

ಮತ್ತಷ್ಟು ಜಿಗಿದ ಷೇರುಪೇಟೆ ಸೂಚ್ಯಂಕಗಳು

ಫೆಬ್ರುವರಿ 23ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಜಿಗಿತ ಕಂಡಿವೆ. 73,142 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1ರಷ್ಟು ಗಳಿಸಿಕೊಂಡಿದೆ. 22,212 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.78 ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ತೈಲ ಬೆಲೆ ಏರಿಕೆಯನ್ನು ಹೂಡಿಕೆದಾರರು ಪರಿಗಣಿಸದೇ ಇದ್ದದ್ದು, ದೇಶಿಯ ಹೂಡಿಕೆದಾರರ ಖರೀದಿ ಉತ್ಸಾಹ ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ.


ವಲಯವಾರು ಪ್ರಗತಿಯಲ್ಲಿ ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4, ಟೆಲಿಕಾಂ ಸೂಚ್ಯಂಕ ಶೇ 3.8, ಬಿಎಸ್ಇ ಎಫ್ಎಂಸಿಜಿ ಮತ್ತು ಪವರ್ ಸೂಚ್ಯಂಕ ತಲಾ ಶೇ 1.5ರಷ್ಟು ಗಳಿಸಿಕೊಂಡಿವೆ. ಮತ್ತೊಂದೆಡೆ ಬಿಎಸ್ಇ ಅನಿಲ ಮತ್ತು ತೈಲ ಸೂಚ್ಯಂಕ ಶೇ 2ರಷ್ಟು ಮತ್ತು ಬಿಎಸ್ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 1ರಷ್ಟು ಕುಸಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,939.40 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹3,532.82 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಪೇಟಿಎಂ, ಎಬಿಬಿ ಇಂಡಿಯಾ, ಅದಾನಿ ವಿಲ್ಮಾರ್, ಭಾರತ್ ಇಲೆಕ್ಟ್ರಾನಿಕ್ಸ್, ಇಂಡಸ್ ಟವರ್ಸ್, ವರುಣ್ ಬಿವರೇಜಸ್, ಮಹೀಂದ್ರ ಆ್ಯಂಡ್‌ ಮಹೀಂದ್ರ ಜಿಗಿತ ಕಂಡಿವೆ. ಹಿರೋ ಮೋಟೋ ಕಾರ್ಪ್, ಕೋಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಕುಸಿದಿವೆ.

ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಮೌಲ್ಯ ಹೆಚ್ಚಿಸಿಕೊಂಡಿದೆ. ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಮಹೀಂದ್ರ ಆ್ಯಂಡ್‌ ಮಹೀಂದ್ರ ಕೂಡ ಮೌಲ್ಯ ಹೆಚ್ಚಿಸಿಕೊಂಡಿವೆ. ಮತ್ತೊಂದೆಡೆ ಟಿಸಿಎಸ್, ಇನ್ಫೊಸಿಸ್ ಮತ್ತು ವಿಪ್ರೋ ಮೌರುಕಟ್ಟೆ ಮೌಲ್ಯ ತಗ್ಗಿದೆ.


ಮುನ್ನೋಟ: ಈ ವಾರ ಸ್ಟೋವೆಕ್ ಇಂಡಸ್ಟ್ರೀಸ್, ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ., ಕೆಎಸ್‌ಬಿ ಲಿ., ಮಾರ್ಬಲ್ ಸಿಟಿ ಇಂಡಿಯಾ ಲಿ., ಕೆ ಆ್ಯಂಡ್‌ ಆರ್ ರೇಲ್ ಎಂಜಿನಿಯರಿಂಗ್ ಲಿ., ಮತ್ತು ರಾಶಿ ಫೆರಿಫೆರಲ್ಸ್ ಲಿ., ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT