ದೇಶದಿಂದ ಪಲಾಯನಗೈದ 27 ಆರ್ಥಿಕ ಅಪರಾಧಿಗಳು

7
ಸಂಸತ್ತಿಗೆ ಮಾಹಿತಿ ನೀಡಿದ ಹಣಕಾಸು ರಾಜ್ಯ ಸಚಿವ

ದೇಶದಿಂದ ಪಲಾಯನಗೈದ 27 ಆರ್ಥಿಕ ಅಪರಾಧಿಗಳು

Published:
Updated:

ನವದೆಹಲಿ: ಆರ್ಥಿಕ ಅಪರಾಧ ಎಸಗಿದ ಮತ್ತು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದ 27 ಮಂದಿ ಉದ್ಯಮಿಗಳು ಐದು ವರ್ಷಗಳಲ್ಲಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

‘ಇವರ ಪೈಕಿ 20 ಅಪರಾಧಿಗಳ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ (ಆರ್‌ಸಿಎನ್‌) ಜಾರಿ ಮಾಡಲು ಇಂಟರ್‌ಪೋಲ್‌ಗೆ ಕೇಳಿಕೊಳ್ಳಲಾಗಿದೆ’ ಎಂದು ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ
ತಿಳಿಸಿದ್ದಾರೆ.

ಎಂಟು ಮಂದಿ ಅಪರಾಧಿಗಳ ವಿರುದ್ಧ ಇಂಟರ್‌ಪೋಲ್‌ ಈಗಾಗಲೇ ‘ಆರ್‌ಸಿಎನ್‌’ ಜಾರಿ ಮಾಡಿದೆ. ವಿಜಯ್‌ ಮಲ್ಯ ಸೇರಿದಂತೆ ಆರು ಮಂದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಮನವಿ ಮಾಡಿಕೊಳ್ಳಲಾಗಿದೆ.

₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆದ ಕಂಪನಿಯ ಪ್ರವರ್ತಕರು, ನಿರ್ದೇಶಕರು ಮತ್ತು ಇತರ ಉನ್ನತ ಅಧಿಕಾರಿಗಳ ‍ಪಾಸ್‌ಪೋರ್ಟ್‌ನ ಪ್ರಮಾಣೀಕೃತ ಪ್ರತಿ ಪಡೆದುಕೊಳ್ಳಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.

ಬ್ಯಾಂಕಿಂಗ್‌ ವಂಚನೆ ಪ್ರಕರಣ: ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ, ಭಾರತೀಯ ರಿಸರ್ವ್‌ ಬ್ಯಾಂಕ್‌ ಜತೆ ವ್ಯವಹರಿಸುತ್ತಿದೆ.

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌, ಎಟಿಂ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ವಂಚನೆ ಪ್ರಕರಣ ಭೇದಿಸಲು ಆರ್‌ಬಿಐ, ಬ್ಯಾಂಕ್‌ಗಳ ಜತೆ ಸಂಪರ್ಕದಲ್ಲಿ ಇದೆ.

‘ಹಣಕಾಸಿಗೆ ಸಂಬಂಧಿಸಿದ ಎಲ್ಲ ಬಗೆಯ ವಂಚನೆಗಳನ್ನು ತಡೆಗಟ್ಟಲು ದತ್ತಾಂಶ ಕದಿಯುವುದಕ್ಕೆ ಕಡಿವಾಣ ಹಾಕಲು ಹಣಕಾಸು ದತ್ತಾಂಶ ರಕ್ಷಿಸುವ ಕರಡು ಮಸೂದೆ ಸಿದ್ಧಪಡಿಸಲಾಗುತ್ತಿದೆ’ ಎಂದು ಐ.ಟಿ ಸಚಿವ ರವಿ ಶಂಕರ ಪ್ರಸಾದ್‌ ಅವರು
ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !