ನವದೆಹಲಿ: ದೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು, ಗುರುವಾರ ‘ಶ್ವೇತ ಕ್ರಾಂತಿ 2.0’ಕ್ಕೆ ಚಾಲನೆ ನೀಡಿದ್ದಾರೆ.
ಕೃಷಿಕ ಮಹಿಳೆಯರ ಸಬಲೀಕರಣ, ಸ್ಥಳೀಯವಾಗಿ ಹಾಲು ಉತ್ಪಾದನೆ ಹೆಚ್ಚಳ, ಹೈನುಗಾರಿಕೆಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೈನು ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ. ಹೈನೋದ್ಯಮದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶವಿದೆ.
ಇದೇ ವೇಳೆ ಅವರು ಹೈನು ಕೃಷಿಕರಿಗೆ ಅನುಕೂಲ ಕಲ್ಪಿಸಲು ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮೈಕ್ರೊ ಎಟಿಎಂ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಿದರು. ‘ಶ್ವೇತ ಕ್ರಾಂತಿ 2.0’ ಅಡಿ ಮುಂದಿನ ಐದು ವರ್ಷದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಸಂಗ್ರಹ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಅಮಿತ್ ಶಾ ಮಾತನಾಡಿ, ‘ಗುಜರಾತ್‌ನ ಹೈನೋದ್ಯಮದಲ್ಲಿ ಮಹಿಳೆಯರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದು, ₹60 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಮಹಿಳೆಯರ ಸಶಸ್ತೀಕರಣದ ಜೊತೆಗೆ, ಅಪೌಷ್ಟಿಕತೆ ವಿರುದ್ಧದ ಅಭಿಯಾನ ನಡೆಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.