ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಬಿ: ಭಾರತಕ್ಕೆ ₹16,500 ಕೋಟಿ ನೆರವಿನ ಘೋಷಣೆ

Last Updated 10 ಏಪ್ರಿಲ್ 2020, 20:31 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌–19’ ಪಿಡುಗಿನ ವಿರುದ್ಧದ ಸಮರದಲ್ಲಿ ಭಾರತಕ್ಕೆ ನೆರವಾಗಲು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ), ₹ 16,500 ಕೋಟಿ ಮೊತ್ತದ ನೆರವು ನೀಡುವುದಾಗಿ ಘೋಷಿಸಿದೆ.

‘ಎಡಿಬಿ‘ ಅಧ್ಯಕ್ಷ ಮಸತ್ಸುಗು ಅಸಕಾವಾ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈ ನೆರವಿನ ಭರವಸೆ ನೀಡಿದ್ದಾರೆ. ದೂರವಾಣಿ ಕರೆ ಮಾಡಿ ಮಾತನಾಡಿರುವ ಅವರು, ಭಾರತವು ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ ಕಾರ್ಯಕ್ರಮದ ಮೂಲಕ ಪಿಡುಗಿನ ವಿರುದ್ಧ ರಚನಾತ್ಮಕ ಕ್ರಮ ಕೈಗೊಂಡಿರುವುದನ್ನು ಶ್ಲಾಘಿಸಿದ್ದಾರೆ.

‘ಭಾರತದ ತುರ್ತು ಅಗತ್ಯಗಳಿಗೆ ನೆರವಾಗಲು ‘ಎಡಿಬಿ’ ಬದ್ಧವಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ನೆರವು ಒದಗಿಸಲು 2.2 ಶತಕೋಟಿ ಡಾಲರ್‌ನ ತುರ್ತು ನೆರವು ಒದಗಿಸಲಾಗುವುದು. ಕೊರೊನಾ ಪಿಡುಗಿನಿಂದ ತೀವ್ರವಾಗಿ ಬಾಧಿತರಾಗಿರುವ ಬಡವರು, ಅಸಂಘಟಿತ ವಲಯದ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಕಾರ್ಮಿಕರು, ಹಣಕಾಸು ವಲಯದ ಉದ್ಯೋಗಿಗಳಿಗೆ ಸಹಾಯ ಹಸ್ತ ಚಾಚಲು ಈ ನೆರವಿನ ಮೊತ್ತ ಬಳಸಿಕೊಳ್ಳಬಹುದಾಗಿದೆ‘ ಎಂದು ಹೇಳಿದ್ದಾರೆ.

‘ಅಗತ್ಯ ಬಿದ್ದರೆ ನೆರವಿನ ಪ್ರಮಾಣ ಹೆಚ್ಚಿಸಲಾಗುವುದು. ಭಾರತದ ಅಗತ್ಯಗಳನ್ನೆಲ್ಲ ಪೂರೈಸಲು ಲಭ್ಯ ಇರುವ ಹಣಕಾಸಿನ ಆಯ್ಕೆಗಳನ್ನೆಲ್ಲ ಪರಿಗಣಿಸಲಾಗುವುದು. ಇದರಲ್ಲಿ ತುರ್ತು ನೆರವು, ಸಾಲ ಮತ್ತು ಬಜೆಟ್‌ ನೆರವು ಒಳಗೊಂಡಿರಲಿದೆ. ಬ್ಯಾಂಕ್‌ನ ಹಣಕಾಸಿನ ನೆರವನ್ನೂ ತ್ವರಿತವಾಗಿ ಒದಗಿಸಲಾಗುವುದು‘ ಎಂದು ಭರವಸೆ ನೀಡಿದ್ದಾರೆ.

ಖಾಸಗಿ ವಲಯದ ಹಣಕಾಸು ಅಗತ್ಯಗಳನ್ನು ಈಡೇರಿಸಲೂ ಮಾತುಕತೆ ನಡೆಸಲಾಗುತ್ತಿದೆ ಎಂದು ಬ್ಯಾಂಕ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು ‘ಎಡಿಬಿ‘ಯು ಮಾರ್ಚ್‌ನಲ್ಲಿ ₹ 48,750 ಕೋಟಿ ಮೊತ್ತದ ಆರಂಭಿಕ ಪರಿಹಾರ ಕೊಡುಗೆ ಪ್ರಕಟಿಸಿತ್ತು. ಅಗತ್ಯ ಬಿದ್ದರೆ ಹಣಕಾಸು ನೆರವು ಹೆಚ್ಚಿಸಲು ಮತ್ತು ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧವಿರುವುದಾಗಿ ತಿಳಿಸಿತ್ತು.

ಏಷ್ಯಾ ಪೆಸಿಫಿಕ್‌ ಪ್ರದೇಶದ ದೇಶಗಳು ಸಮೃದ್ಧ, ಅಭಿವೃದ್ಧಿಯ ಫಲವು ಎಲ್ಲರಿಗೂ ಒದಗಿಸುವ, ಸಂಕಷ್ಟದ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ಅಭಿವೃದ್ಧಿಗೊಳ್ಳಲು ಬೇಕಾದ ನೆರವು ನೀಡಲು ‘ಎಡಿಬಿ’ ಬದ್ಧವಾಗಿದೆ ಎಂದು ತಿಳಿಸಿದೆ. 1966ರಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಎಡಿಬಿ’ 68 ಸದಸ್ಯರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT