ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ₹39 ಏರಿಕೆ ಮಾಡಿವೆ.
ಏಪ್ರಿಲ್‌ನಿಂದ ಜೂನ್‌ವರೆಗೆ ಸಿಲಿಂಡರ್ ಬೆಲೆಯನ್ನು ₹148 ಕಡಿತಗೊಳಿಸಿದ್ದ ತೈಲ ಕಂಪನಿಗಳು, ಆಗಸ್ಟ್‌ನಲ್ಲಿ ₹6.5 ಏರಿಕೆ ಮಾಡಿದ್ದವು.
ಸದ್ಯ ದೆಹಲಿಯಲ್ಲಿ ಸಿಲಿಂಡರ್ ಬೆಲೆ ₹1,691.50, ಮುಂಬೈನಲ್ಲಿ ₹1,644, ಕೋಲ್ಕತ್ತ ₹1,802.50 ಹಾಗೂ ಚೆನ್ನೈನಲ್ಲಿ ₹1,855 ಆಗಿದೆ. 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿಲ್ಲ. ಇದರ ಬೆಲೆ ಸದ್ಯ ₹803 ಇದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ಈ ದರ ಪರಿಷ್ಕರಣೆ ಮಾಡುತ್ತವೆ.
ಎಟಿಎಫ್ ದರ ಇಳಿಕೆ: ವಿಮಾನ ಇಂಧನ (ಎಟಿಎಫ್) ದರವನ್ನು ಶೇ 4.6ರಷ್ಟು ಕಡಿತಗೊಳಿಸಲಾಗಿದೆ. ಒಟ್ಟಾರೆ ಕಿಲೋ ಲೀಟರಿಗೆ ₹4,495 ಇಳಿಕೆ ಮಾಡಲಾಗಿದೆ (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್). ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್ ಬೆಲೆಯು ₹93,480ಕ್ಕೆ ಇಳಿಕೆಯಾಗಿದೆ.
ಕಳೆದ ಎರಡು ತಿಂಗಳಿನಲ್ಲಿ ಎಟಿಎಫ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು.
ಭಾನುವಾರ ಮುಂಬೈನಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋ ಲೀಟರ್‌ಗೆ ₹87,432 ಆಗಿದೆ. ರಾಜ್ಯದಿಂದ ರಾಜ್ಯಕ್ಕೆ ಈ ದರದಲ್ಲಿ ವ್ಯತ್ಯಾಸ ಇರುತ್ತದೆ.
ವಿಮಾನಗಳ ಕಾರ್ಯಾಚರಣೆಯಲ್ಲಿ ಶೇ 40ರಷ್ಟು ಹಣವು ಇಂಧನಕ್ಕೆ ವೆಚ್ಚವಾಗುತ್ತದೆ. ಹಾಗಾಗಿ, ಬೆಲೆ ಇಳಿಕೆಯು ಕಂಪನಿಗಳಿಗೆ ವರದಾನವಾಗಿದೆ.