ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ಬ್ಯಾಂಕಿಂಗ್ ತಜ್ಞ ಯು.ಪಿ. ಪುರಾಣಿಕ್

Last Updated 26 ಅಕ್ಟೋಬರ್ 2021, 21:05 IST
ಅಕ್ಷರ ಗಾತ್ರ

ಶಂಕರೇಗೌಡ,ಕನಕಪುರ

lಪ್ರಶ್ನೆ: ನನ್ನೊಡನೆ ಇರುವ 21 ಎಕರೆ ಕೃಷಿ ಜಮೀನಲ್ಲಿ 12 ಎಕರೆ ಜಮೀನನ್ನು ಒಂದು ಕಂಪನಿಗೆ ಮಾರಾಟ ಮಾಡಬೇಕೆಂದಿದ್ದೇನೆ. ಇದರಿಂದ ಸುಮಾರು ₹ 3 ಕೋಟಿ ಬರಬಹುದು. ಇದು ಪಿತ್ರಾರ್ಜಿತ ಆಸ್ತಿ. ನನಗೆ ನಾಲ್ಕು ಜನ ಮಕ್ಕಳಿದ್ದಾರೆ. ಕೃಷಿ ಜಮೀನು ಮಾರಾಟ ಮಾಡಿದಾಗ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ ಅಂತ ಕೇಳಿದ್ದೇನೆ. ತೆರಿಗೆ ಬರುತ್ತದೆ ಎಂದಾದರೆ, ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ. ಹೀಗೆ ಮಾರಾಟ ಮಾಡಿ ಬರುವ ಹಣ ಮಕ್ಕಳ ಮದುವೆಗೆ ವಿನಿಯೋಗಿಸಬಹುದೇ?

ಉತ್ತರ: ನಿಮ್ಮ ಕೃಷಿ ಜಮೀನು ಕನಕಪುರಕ್ಕೆ ಸಮೀಪ ಇರುವುದರಿಂದ ಮಾರಾಟ ಮಾಡಿ ಬರುವ ಹಣಕ್ಕೆ ಬಂಡವಾಳ ವೃದ್ಧಿ ತೆರಿಗೆ ಬಂದೇ ಬರುತ್ತದೆ. ಇದೇ ವೇಳೆ, 2001ರ ಏಪ್ರಿಲ್‌ 1ರಂದು ನಿಮ್ಮ ಜಮೀನಿನ ಸರ್ಕಾರಿ ಬೆಲೆ ತಿಳಿದು ಮಾರಾಟ ಮಾಡುವ ವರ್ಷದವರೆಗಿನ ಹಣದುಬ್ಬರದ ಲೆಕ್ಕಾಚಾರ ಮಾಡಿ. ಈ ಹಣದುಬ್ಬರದಿಂದ ಬರುವ ಹಣಕ್ಕೆ ಬಂಡವಾಳ ವೃದ್ಧಿ ತೆರಿಗೆ ಕೊಡದೆ, ನಿಮ್ಮ ಮಕ್ಕಳ ಮದುವೆ ಅಥವಾ ಇತರ ಖರ್ಚುಗಳಿಗೆ ವಿನಿಯೋಗಿಸಬಹುದು. ನಿಮ್ಮದು ಪಿತ್ರಾರ್ಜಿತ ಆಸ್ತಿ ಆಗಿರುವುದರಿಂದ ಕುಟುಂಬದ ಎಲ್ಲ ವ್ಯಕ್ತಿಗಳಿಗೆ ಈ ಆಸ್ತಿಯಲ್ಲಿ ಹಕ್ಕು ಬರುತ್ತದೆ. ಆಸ್ತಿ ಮಾರಾಟ ಮಾಡುವಾಗ ಬರುವ ಹಣವನ್ನು ಕುಟುಂಬದ ಎಲ್ಲರ ಹೆಸರಿನಲ್ಲಿ ಪ್ರತ್ಯೇಕವಾಗಿ ಚೆಕ್‌ ಮುಖಾಂತರ ಪಡೆಯಿರಿ. ಹೀಗೆ ಮಾಡಿದಲ್ಲಿ ತೆರಿಗೆ ಉಳಿಸಲು ಸೆಕ್ಷನ್‌ 54ಇಸಿ ಆಧಾರದ ಮೇಲೆ ಎನ್‌ಎಚ್‌ಎಐ–ಆರ್‌ಇಸಿ ಬಾಂಡ್‌ಗಳಲ್ಲಿ ಪ್ರತ್ಯೇಕವಾಗಿ ಎಲ್ಲರ ಹೆಸರಿನಲ್ಲಿ ಹಣ ತೊಡಗಿಸಬಹುದು. ಜಮೀನು ಮಾರಾಟ ಮಾಡಿ ಬರುವ ಹಣದಿಂದ ಬೇರೊಂದು ಮನೆ ಕೂಡಾ ಕೊಳ್ಳಬಹುದು.

ಶಂಕರಪ್ಪ,ಮೈಸೂರು

lಪ್ರಶ್ನೆ: ನಾನು ನಿವೃತ್ತ ಸರ್ಕಾರಿ ಅಧಿಕಾರಿ. ವಯಸ್ಸು 82 ವರ್ಷ. ಸ್ವಂತ ಮನೆ ಇದೆ. ತಿಂಗಳ ಪಿಂಚಣಿ ₹ 36 ಸಾವಿರ. ಠೇವಣಿ ಮೇಲಿನ ವಾರ್ಷಿಕ ಬಡ್ಡಿ ₹ 1,75,352. ನನ್ನ ಹೆಂಡತಿ ಮೃತಳಾಗಿದ್ದಾಳೆ. ನನ್ನ ಆದಾಯಕ್ಕೆ ತೆರಿಗೆ ಬರುವಲ್ಲಿ ತೆರಿಗೆ ಉಳಿಸಲು ಆದಾಯ ತೆರಿಗೆ ಸೆಕ್ಷನ್‌ ಹಾಗೂ ಉಳಿಸಬಹುದಾದ ಮೊತ್ತ ತಿಳಿಸಿರಿ. ನನ್ನ ಆರೋಗ್ಯ ಹದಗೆಡುತ್ತಿದೆ. ನನ್ನ ಸಹಾಯಕ್ಕೆ ನಂಬಿಕೆಗೆ ಅರ್ಹರಾದ ನರ್ಸ್‌ ತರಹದ ವ್ಯಕ್ತಿ ಬೇಕಾಗಿದ್ದಾರೆ. ಈ ವಿಚಾರದಲ್ಲಿ ಯೋಗ್ಯ ಕಂಪನಿ ಅಥವಾ ಸಂಸ್ಥೆ ಗೊತ್ತಿದ್ದರೆ ತಿಳಿಸಿರಿ.

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 4.32 ಲಕ್ಷ. ವಾರ್ಷಿಕ ಬಡ್ಡಿ ಆದಾಯ ₹ 1,75,352. ಇವೆರಡರಿಂದ ಬರುವ ಮೊತ್ತ ₹ 6,07,352. ಇದರಲ್ಲಿ ಸೆಕ್ಷನ್‌ 16 (1ಎ) ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ ಹಾಗೂ ಸೆಕ್ಷನ್‌ 80ಟಿಟಿಬಿ ಬಡ್ಡಿ ಆದಾಯ ₹ 50 ಸಾವಿರ ಕಳೆದರೆ ನಿವ್ವಳ ಆದಾಯ ₹ 5,07,352 ಆಗುತ್ತದೆ. ನೀವು ಅತೀ ಹಿರಿಯ ನಾಗರಿಕರಾದ್ದರಿಂದ ₹ 7,352ಕ್ಕೆ ಮಾತ್ರ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಸಂಪೂರ್ಣ ತೆರಿಗೆ ಉಳಿಸಲು ಸೆಕ್ಷನ್‌ 80ಸಿ ಆಧಾರದ ಮೇಲೆ ₹ 10 ಸಾವಿರ ಮೊತ್ತವನ್ನು 5 ವರ್ಷಗಳ ಅವಧಿಗೆ ಬ್ಯಾಂಕ್‌ ಠೇವಣಿ ಮಾಡಬಹುದು. ‌‌ನಿಮ್ಮ ಆರೋಗ್ಯ ನೋಡಿಕೊಳ್ಳಲು ‘Carewise Support and services (P) LTD Mysore’, (ದೂರವಾಣಿ: 7090632797) ಇಲ್ಲಿ ವಿಚಾರಿಸಿ. ನೀವು ಇನ್ನುಮುಂದೆ ಪ್ರಶ್ನೆ ಕಳಿಸುವುದು ಬೇಡ. ನನಗೆ ನೇರವಾಗಿ ಕರೆ ಮಾಡಿ.

ರಾಮಣ್ಣ,ತರೀಕೆರೆ

lಪ್ರಶ್ನೆ: ನಾನು ಕೃಷಿಕ. ಕೃಷಿ ಆದಾಯ ಹೊರತುಪಡಿಸಿ ಬೇರೆ ಆದಾಯ ಇಲ್ಲ. ನಾನು ಬ್ಯಾಂಕ್‌ನಲ್ಲಿ ₹ 20 ಲಕ್ಷ ಠೇವಣಿ ಇರಿಸಿದ್ದೇನೆ. ಈ ಠೇವಣಿಗೆ ನನ್ನ ಹೆಂಡತಿಯನ್ನು ನಾಮನಿರ್ದೇಶನ ಮಾಡಿದ್ದೇನೆ. ಕೆಲವು ತಿಂಗಳಿಂದ ನನ್ನ ಹೆಂಡತಿಯ ಆರೋಗ್ಯ ಹದಗೆಡುತ್ತಿದೆ. ಒಂದು ವೇಳೆ ನನ್ನ ಹೆಂಡತಿ ಮೃತಪಟ್ಟಲ್ಲಿ, ಬ್ಯಾಂಕ್‌ನಿಂದ ಹಣ ಪಡೆಯಲು ತೊಂದರೆ ಆಗಬಹುದು ಎನ್ನುವ ಭಯ ಕಾಡುತ್ತಿದೆ. ಹೆಂಡತಿಯ ನಾಮ ನಿರ್ದೇಶನ ತೆಗೆದು ಮಗನ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಲು ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ನಿಮ್ಮ ಹೆಂಡತಿ ಆರೋಗ್ಯ ಸರಿ ಇಲ್ಲ ಎನ್ನುವ ಒಂದೇ ಕಾರಣಕ್ಕೆ ನೀವು ಆಕೆಯ ನಾಮ ನಿರ್ದೆಶನ ರದ್ದುಪಡಿಸಿ ಮಗನ ಹೆಸರಿಗೆ ನಾಮ ನಿರ್ದೇಶನ ಮಾಡುವ ಅಗತ್ಯ ಇಲ್ಲ. ಒಂದು ವೇಳೆ ಆಕೆ ತೀರಿಕೊಂಡಲ್ಲಿ ನೀವು ಮಗನ ಹೆಸರಿಗೆ ನಾಮ ನಿರ್ದೇಶನ ಮಾಡಬಹುದು. ಜೀವಿತಕಾಲದಲ್ಲಿ ತಾನು ಇರಿಸುವ ಬ್ಯಾಂಕ್‌ ಠೇವಣಿ ಮೇಲಿನ ನಾಮ ನಿರ್ದೇಶನವನ್ನು ಬದಲಾಯಿಸುವ ಹಕ್ಕು ಠೇವಣಿದಾರನಿಗೆ ಇರುತ್ತದೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಸದಸ್ಯರು ಇರುವುದು ಸಹಜ. ಇಂತಹ ಸಂದರ್ಭದಲ್ಲಿ, ಉದಾಹರಣೆಗೆ ಒಂದು ಕುಟಂಬದಲ್ಲಿ ನಾಲ್ಕು ಜನರಿದ್ದಲ್ಲಿ, ಠೇವಣಿ ಮೊತ್ತ ₹ 10 ಲಕ್ಷ ಇದ್ದರೆ, ಬ್ಯಾಂಕ್‌ನಿಂದ ₹ 2.5 ಲಕ್ಷದ ನಾಲ್ಕು ಠೇವಣಿ ರಶೀದಿ ಪಡೆದು ನಾಲ್ಕೂ ಜನರ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಬಹುದು. ಎಲ್ಲದಕ್ಕೂ ಮುಖ್ಯವಾಗಿ, ಠೇವಣಿದಾರನಿಗಿಂತಲೂ ಮೊದಲೇ ನಾಮ ನಿರ್ದೇಶನ ಹೊಂದಿದ ವ್ಯಕ್ತಿ ಮೃತಪಟ್ಟಾಗ ಬೇರೆಯವರನ್ನು ತಕ್ಷಣವೇ ನಾಮನಿರ್ದೇಶನ ಮಾಡಲು ಎಂದಿಗೂ ಮರೆಯಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT