ಬಜೆಟ್‌: ₹ 12 ಲಕ್ಷ ಕೋಟಿ ಕೃಷಿ ಸಾಲ ನಿಗದಿ?

7

ಬಜೆಟ್‌: ₹ 12 ಲಕ್ಷ ಕೋಟಿ ಕೃಷಿ ಸಾಲ ನಿಗದಿ?

Published:
Updated:
Prajavani

ನವದೆಹಲಿ: ಫೆಬ್ರುವರಿ 1ರಂದು ಮಂಡನೆಯಾಗಲಿರುವ 2019–20ನೆ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೃಷಿ ಸಾಲದ ಗುರಿಯನ್ನು ಶೇ 10ರಷ್ಟು ಹೆಚ್ಚಿಸಿ ₹12 ಲಕ್ಷ ಕೋಟಿಗೆ ನಿಗದಿಪಡಿಸುವ ಸಾಧ್ಯತೆ ಇದೆ.

ಪ್ರಸಕ್ತ (2018–19) ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ₹ 11 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಪ್ರತಿ ವರ್ಷವೂ ಸರ್ಕಾರ ಕೃಷಿ ವಲಯಕ್ಕೆ ನೀಡುವ ಸಾಲದ ಗುರಿಯನ್ನು ಹೆಚ್ಚಿಸುತ್ತಿದೆ. ಈ ಬಾರಿಯೂ ₹ 1 ಲಕ್ಷ ಕೋಟಿಯಷ್ಟು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ಗುರಿ ಮೀರಿ ಸಾಲ: ಇತ್ತೀಚಿನ ವರ್ಷಗಳಲ್ಲಿ ನಿಗದಿಪಡಿಸಿದ ಗುರಿ ಮೀರಿ ಸಾಲ ನೀಡಲಾಗುತ್ತ ಬರಲಾಗಿದೆ.

2017–18ರಲ್ಲಿ ₹ 10 ಲಕ್ಷ ಕೋಟಿಗಳ ಗುರಿ ನಿಗದಿ ಮಾಡಲಾಗಿತ್ತು. ಆ ವರ್ಷ ₹ 11.68 ಲಕ್ಷ ಕೋಟಿ ವಿತರಣೆ ಮಾಡಲಾಗಿತ್ತು. ಅದೇ ರೀತಿ 2016–17ರಲ್ಲಿ, ₹ 9 ಲಕ್ಷ ಕೋಟಿ ಗುರಿಗೆ ಬದಲಾಗಿ ₹ 10.66 ಲಕ್ಷ ಕೋಟಿಯಷ್ಟು ಬೆಳೆ ಸಾಲ ವಿತರಿಸಲಾಗಿತ್ತು.

ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಸಾಲವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಾಂಸ್ಥಿಕ ಮೂಲಗಳಿಂದ ರೈತರಿಗೆ ಅಗತ್ಯ ಇರುವ ಪ್ರಮಾಣದಲ್ಲಿ ಸಾಲ ವಿತರಿಸುವುದರಿಂದ ಅವರು ದುಬಾರಿ ಬಡ್ಡಿ ದರಕ್ಕೆ ಇತರ ಮೂಲಗಳಿಂದ ಸಾಲ ಪಡೆಯುವುದಕ್ಕೆ ಕಡಿವಾಣ ವಿಧಿಸಬಹುದು.

ರೈತಸ್ನೇಹಿ ಬಡ್ಡಿ ದರ: ಸಾಮಾನ್ಯವಾಗಿ ಕೃಷಿ ಸಾಲಕ್ಕೆ ಶೇ 9ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಸರ್ಕಾರ ಶೇ 2ರ ಬಡ್ಡಿ ಸಬ್ಸಿಡಿ ನೀತಿಯಡಿ ಕೈಗೆಟುಕುವ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ದೊರೆಯುವಂತೆ ಮಾಡುತ್ತದೆ. ಇದರಿಂದ ರೈತಾಪಿ ವರ್ಗಕ್ಕೆ ವಾರ್ಷಿಕ ಶೇ 7ರ ಬಡ್ಡಿ ದರದಲ್ಲಿ ₹ 3 ಲಕ್ಷದವರೆಗೆ  ಅಲ್ಪಾವಧಿ ಕೃಷಿ ಸಾಲ ದೊರೆಯುತ್ತದೆ.

ನಿಗದಿತ ಸಮಯದ ಒಳಗೆ ಸಾಲ ಮರುಪಾವತಿ ಮಾಡಿದವರಿಗೆ ಶೇ 3ರಷ್ಟು ರಿಯಾಯ್ತಿಯನ್ನೂ ನೀಡುತ್ತದೆ. ಹೀಗಾಗಿ ವಾಸ್ತವದಲ್ಲಿ
ಶೇ 4ರ ಬಡ್ಡಿ ದರದಲ್ಲಿ ಸಾಲ ವಿತರಿಸಿದಂತಾಗುತ್ತದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !