ಶನಿವಾರ, ಮೇ 21, 2022
20 °C

ಕೆನರಾ ಬ್ಯಾಂಕ್‌ ಲಾಭ ಹೆಚ್ಚಳ: ಷೇರುದಾರರಿಗೆ ಡಿವಿಡೆಂಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ/ಬೆಂಗಳೂರು: ಕೆನರಾ ಬ್ಯಾಂಕ್‌ 2021–22ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 1,666 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1,010 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇಕಡ 64.90ರಷ್ಟು ಹೆಚ್ಚಾಗಿದೆ.

ಒಟ್ಟು ವರಮಾನವು ₹ 21,040 ಕೋಟಿಯಿಂದ ₹ 22,323 ಕೋಟಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಬಡ್ಡಿ ವರಮಾನದಲ್ಲಿ ಹೆಚ್ಚಳ ಹಾಗೂ ಸುಸ್ತಿ ಸಾಲದಿಂದ ಆಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಇಳಿಕೆ ಆಗಿರುವುದರಿಂದ ಈ ಪ್ರಮಾಣದ ಲಾಭ ಸಾಧ್ಯವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. ನಿವ್ವಳ ಬಡ್ಡಿ ವರಮಾನ ಶೇ 25ರಷ್ಟು ಹೆಚ್ಚಾಗಿದ್ದು ₹ 7,005 ಕೋಟಿಗೆ ತಲುಪಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 8.93ರಿಂದ ಶೇ 7.51ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಶೇ 3.82ರಿಂದ ಶೇ 2.65ಕ್ಕೆ ಇಳಿಕೆ ಕಂಡಿದೆ.

2021–22ನೇ ಹಣಕಾಸು ವರ್ಷಕ್ಕೆ ಬ್ಯಾಂಕ್‌ನ ಒಟ್ಟು ಲಾಭವು ₹ 5,678 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಲಾಭವು ಎರಡು ಪಟ್ಟಿಗೂ ಹೆಚ್ಚು ಏರಿಕೆ ಆಗಿದೆ.

ಬ್ಯಾಂಕ್‌ನ ಷೇರುದಾರರಿಗೆ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ ₹ 6.50ರಷ್ಟು ಡಿವಿಡೆಂಡ್ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ. ಅಲ್ಲದೆ, 15 ದಿನಗಳ ವೇತನವನ್ನು ನೌಕರರಿಗೆ ಸಾಧನೆ ಆಧಾರಿತ ಉತ್ತೇಜನ ಕೊಡುಗೆಯಾಗಿ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು