ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷ ಶೈತ್ಯಾಗಾರ ಸರಣಿ ಜಾಲದ ಅಗತ್ಯ

ಅಕ್ಷರ ಗಾತ್ರ

ಉತ್ತಮ ಪ್ರಗತಿ ಸಾಧಿಸುತ್ತಿರುವ ಕ್ಷೇತ್ರಗಳಲ್ಲಿ ಆಹಾರ ಮತ್ತು ತಂಪು ಪಾನೀಯ ತಯಾರಿಕಾ ಕ್ಷೇತ್ರವೂ ಒಂದಾಗಿದೆ. ಇದೇ ಕಾರಣಕ್ಕೆ ಈ ವಲಯವು ವಿದೇಶಿ ಬಂಡವಾಳವನ್ನು ಗಮನಾರ್ಹವಾಗಿ ಆಕರ್ಷಿಸುತ್ತಿದೆ. ವಿವಿಧ ದೇಶಗಳ ಹಲವಾರು ಕಂಪನಿಗಳು ಭಾರತಕ್ಕೆ ಲಗ್ಗೆ ಇಟ್ಟಿವೆ.ದಶಕದ ಅವಧಿಯಲ್ಲಿ ಮ್ಯಾಕ್ ಡೊನಾಲ್ಡ್‌, ಪಿಜ್ಜಾ ಹಟ್, ಡೊಮಿನೊಸ್, ಸಬ್ ವೇ, ಕೆಎಫ್‌ಸಿ, ಸ್ಟಾರ್ ಬಕ್ಸ್, ಡಂಕಿನ್ ಡೋನಟ್ಸ್ ನಂತಹ ವಿದೇಶದ ಹಲವಾರು ಕಂಪನಿಗಳು ಭಾರತದಾದ್ಯಂತ ತಮ್ಮ ವ್ಯಾಪಾರ ಮಳಿಗೆಗಳನ್ನು ತೆರೆದಿವೆ.

ಇಂತಹ ಸಂಸ್ಥೆಗಳಿಂದ ವಿದೇಶಿ ಬಂಡವಾಳದ ಜತೆಗೆ, ಆಹಾರ ಪದಾರ್ಥಗಳ ಮಾರುಕಟ್ಟೆ, ತಂಪು ಪಾನೀಯ ಮತ್ತು ಆಹಾರ ಪೂರೈಸುವ ಸಾಗಾಣಿಕಾ ವ್ಯವಸ್ಥೆ, ಅಡುಗೆ ಉಪಕರಣಗಳ ತಯಾರಿಕಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಾಗುತ್ತದೆ. ಸದ್ಯಕ್ಕೆ ಹೈನೋದ್ಯಮದ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಆಹಾರ ಮತ್ತು ಪಾನೀಯ ಕ್ಷೇತ್ರದಲ್ಲಿ ಸರಕು ಸಾಗಾಣಿಕೆ ವಲಯವು ಗಮನಾರ್ಹ ಪ್ರಗತಿ ಕಾಣುತ್ತಿದೆ. ಕ್ರಿಸಿಲ್ ಸಂಶೋಧನಾ ವರದಿ ಪ್ರಕಾರ, ಮುಂದಿನ 5 ವರ್ಷಗಳಲ್ಲಿ ದೇಶದ ಈ ಕ್ಷೇತ್ರ ಶೇ 13ರಿಂದ 15ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ. ಹೆಚ್ಚುತ್ತಿರುವ ಮಾಂಸ ಮತ್ತು ಸಾಗರ ಉತ್ಪನ್ನಗಳ ಬಳಕೆಯೂ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪಾಲು ನೀಡುತ್ತಿದೆ. ಆಹಾರ ಕೊರತೆ ನೀಗಿಸಲು ಮತ್ತು ಆಹಾರ ಭದ್ರತೆಗೂ ಈ ಕ್ಷೇತ್ರದ ಅಭಿವೃದ್ಧಿ ನೆರವಾಗಲಿದೆ.

ಎಮರ್‌ಸನ್‌ ಕ್ಲೈಮೇಟ್ ಚೇಂಜ್ ಟೆಕ್ನಾಲಜೀಸ್ ಸಂಸ್ಥೆಯ ವರದಿ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು ₹ 1.33 ಲಕ್ಷ ಕೋಟಿ ಮೌಲ್ಯದ ಆಹಾರ ಪದಾರ್ಥಗಳು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮತ್ತು ಸಾರಿಗೆ ಸೌಲಭ್ಯ ಇಲ್ಲದೇ ಇರುವುದರಿಂದ ವ್ಯರ್ಥವಾಗುತ್ತಿವೆ. ಇದೇ ಕಾರಣದಿಂದ ಶೇ 35ರಿಂದ 40ರಷ್ಟು ತೋಟಗಾರಿಕಾ ಉತ್ಪನ್ನಗಳು ಕೂಡ ಪೋಲಾಗುತ್ತಿವೆ.

ಆಹಾರ ಪದಾರ್ಥಗಳನ್ನು ಕೆಡದಂತೆ ಇಡುವುದಕ್ಕೆ ನೆರವಾಗುವ ಶೈತ್ಯಾಗಾರಗಳು (ಕೋಲ್ಡ್ ಸ್ಟೋರೇಜ್ ಘಟಕ) ಮತ್ತು ತ್ವರಿತವಾಗಿ ಮಾರುಕಟ್ಟೆಗೆ ಪೂರೈಸಲು ಸಾರಿಗೆ ವ್ಯವಸ್ಥೆ ರೂಪಿಸಿದರೆ, ಆಹಾರ ಮತ್ತು ಪಾನೀಯ ತಯಾರಿಕಾ ಕ್ಷೇತ್ರದ ಪ್ರಗತಿ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ. ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸಿ ಗ್ರಾಹಕರ ಗಮನ ಸೆಳೆಯುವ ರೆಸ್ಟೊರೆಂಟ್‌ಗಳು ಕೂಡ ಈ ಕ್ಷೇತ್ರದ ಪ್ರಗತಿಯನ್ನೇ ಆಧರಿಸಿವೆ.

ಇಂತಹ ಹತ್ತು ಹಲವು ಕಾರಣಗಳು, ಭಾರತದ ಆಹಾರ ಉದ್ಯಮ ಅಭಿವೃದ್ಧಿ ಪಡಿಸುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತಿವೆ. ಹೀಗಾಗಿಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.

ಶೈತ್ಯಾಗಾರಗಳ ಸರಣಿ ಘಟಕಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಬೇಗ ಕೆಡುವಂತಹ ಆಹಾರ ಪದಾರ್ಥಗಳನ್ನೂ ಕೆಲವು ದಿನಗಳ ವರೆಗೆ ಸಂಗ್ರಹಿಸಿ ಇಟ್ಟು ಪೂರೈಸಲು ಸಾಧ್ಯವಾಗುತ್ತದೆ. ಇದರಿಂತ ಬಳಕೆಯಾಗದೆ ವ್ಯರ್ಥವಾಗುವಂತಹ ಆಹಾರ ತ್ಯಾಜ್ಯದ ಪ್ರಮಾಣವೂ ಕಡಿಮೆಯಾಗುತ್ತದೆ.

ಸುಧಾರಣೆಗಳೂ ಆಗಿವೆ: ಕೆಲವು ವರ್ಷಗಳಿಂದ ಈ ಕ್ಷೇತ್ರದೆಡೆಗೆ ಖಾಸಗಿ ಸಂಸ್ಥೆಗಳು ಹೆಚ್ಚಿನ ಕಾಳಜಿ ತೋರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಈ ಸಂಸ್ಥೆಗಳು ನಿರ್ಮಿಸುತ್ತಿರುವ ಹಲವು ಕೋಲ್ಟ್ ಸ್ಟೋರೇಜ್ ಘಟಕಗಳು ವಿವಿಧ ರೂಪದಲ್ಲಿ ಬಳಸಿಕೊಳ್ಳುವುದಕ್ಕೆ ನೆರವಾಗುತ್ತಿವೆ. ಈ ರೀತಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪರಿಪಾಠ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಇದರಿಂದ ತೋಟಗಾರಿಕಾ ಉತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಇದು ಕೂಡ ದೇಶದ ಆಹಾರ ಉತ್ಪನ್ನಗಳ ತಯಾರಿಕಾ ವಲಯದ ಪ್ರಗತಿಗೆ ಗಣನೀಯ ಕೊಡುಗೆ ನೀಡಲಿದೆ.

ವ್ಯವಸ್ಥೆ ಸರಿಪಡಿಸಬೇಕು: ದೇಶದಲ್ಲಿ ಆಹಾರ ಪದಾರ್ಥ ಮತ್ತು ತಂಪು ಪಾನೀಯಗಳ ಪೂರೈಕೆ ವ್ಯವಸ್ಥೆ ಉತ್ತಮವಾಗಿಲ್ಲ. ಕೆಲವು ವ್ಯಾಪಾರಿಗಳು ಮಾತ್ರ ವ್ಯವಸ್ಥಿತವಾಗಿ ತಮ್ಮ ಉತ್ಪನ್ನಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಾ ಮಾರುಕಟ್ಟೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣ ಇಟ್ಟುಕೊಂಡಿದ್ದಾರೆ. ಆದರೆ, ಅನೇಕ ವರ್ತಕರು ತಮ್ಮ ಉತ್ಪನ್ನಗಳನ್ನು ಪೂರೈಸುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ.

ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದಾಗಿ ಇವರು ತಮ್ಮ ಉತ್ಪನ್ನಗಳು ಮಾರುಕಟ್ಟೆಗೆ ತಲುಪಿಸುವುದಕ್ಕೆ ಆಗುತ್ತಿಲ್ಲ. ಅನೇಕ ಕೋಲ್ಡ್‌ ಸ್ಟೋರೇಜ್ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಉತ್ಪನ್ನಗಳನ್ನು ಹೆಚ್ಚು ದಿನಗಳ ಕಾಲ ಸಂಗ್ರಹಿಸಿ ಇಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ವರ್ತಕರು ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕೆ ಹಿಂಜರಿಯುತ್ತಿದ್ದಾರೆ.

ಹೀಗಾಗಿ ಸುಧಾರಿತ ಮತ್ತು ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿಕೊಂಡರೆ, ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆ ಸಾರಿಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿದ್ದರೆ ಶೇ 60ರಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ.

ತಾಪಮಾನ ದೃಷ್ಟಿಯಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಆಹಾರ ಪದಾರ್ಥಗಳ ರಕ್ಷಣೆ ಮಾಡುವಂತಹ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ. ತ್ವರಿತವಾಗಿ ಪೂರೈಸುವಂತಹ ವ್ಯವಸ್ಥೆ ಬಲಪಡಿಸಬೇಕಾಗಿದೆ.ನಿಗದಿತ ಸಮಯಕ್ಕೆ ಸರಿಯಾಗಿ ಪೂರೈಸಲು ದೂರದ ಪ್ರದೇಶಗಳಿಗೆ ರವಾನಿಸುವಾಗ ಎಚ್ಚರವಹಿಸಬೇಕು. ಇದು ದಕ್ಷ ಸಂಪರ್ಕ ಜಾಲ ಮತ್ತು ಸುಧಾರಿತ ತಂತ್ರಜ್ಞಾನ ಒಳಗೊಂಡಿರಬೇಕು. ಸರಕು ಸಾಗಾಣಿಕೆ ಪೂರೈಕೆ ಮೇಲೆ ನಿಗಾ ಇಡುವುದಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೆರವೂ ಇರಬೇಕು.

ಹೊಸ ವ್ಯವಸ್ಥೆ: ಗುಣಮಟ್ಟದ ವ್ಯವಸ್ಥೆ, ಸುರಕ್ಷತೆಯ ಖಾತರಿ, ನಿಗದಿತ ಸಮಯಕ್ಕೆ ಸರಿಯಾಗಿ ಪೂರೈಕೆ, ವ್ಯವಸ್ಥೆ ಮೇಲೆ ಗಮನ ಮತ್ತು ನಿಯಂತ್ರಣ, ಸುಧಾರಿತ ತಂತ್ರಜ್ಞಾನದ ಬಳಕೆ, ಪದಾರ್ಥಗಳು ಕೆಡದಂತೆ ತ್ವರಿತವಾಗಿ ಪೂರೈಸುವುದು. ಈ ಉದ್ದೇಶ ಸಾಧಿಸಲು ಹಲವರು ಕೈಜೋಡಿಸಬೇಕಾಗುತ್ತದೆ. ಇದರಿಂದ ಇಂತಹ ಸೇವೆ ಒದಗಿಸುವ ಸಂಸ್ಥೆಗಳ ಮೇಲಿನ ವಿಶ್ವಾಸವೂ ಹೆಚ್ಚಾಗುತ್ತದೆ. ಆಹಾರ ಮತ್ತು ತಂಪು ಪಾನೀಯ ಹಾಗೂ ಸರಕು ಸಾಗಣೆ ಕ್ಷೇತ್ರವು ಒಟ್ಟಾಗಿ ಕೆಲಸ ಮಾಡಿದರೆ ಎಲ್ಲ ಭಾಗಿದಾರರಿಗೂ ಪ್ರಯೋಜನ ದೊರೆಯಲಿದೆ.

(ಲೇಖಕ; ಡಿಎಚ್‌ಎಲ್ ಸ್ಮಾರ್‌ಟ್ರಕ್ಕಿಂಗ್ ಕೋಲ್ಡ್‌ಚೇನ್‌ ಮಾರಾಟ ವಿಭಾಗದ ಅಧಿಕಾರಿ)​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT