ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಅಧಿಪತ್ಯಕ್ಕೆ ಚೀನಾ ಅಂತ್ಯ

Published 2 ಮೇ 2024, 16:36 IST
Last Updated 2 ಮೇ 2024, 16:36 IST
ಅಕ್ಷರ ಗಾತ್ರ

ಚೆಂಗ್ಡು (ಚೀನಾ): ಹಾಲಿ ಚಾಂಪಿಯನ್ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ಎದುರು ಗುರುವಾರ 1–3 ಅಂತರದಲ್ಲಿ ಸೋಲನುಭವಿಸಿತು. 

ವಿಶ್ವದ 9ನೇ ಕ್ರಮಾಂಕದ ಎಚ್‌.ಎಸ್. ಪ್ರಣಯ್, 3ನೇ ಕ್ರಮಾಂಕದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಹಾಗೂ ಧ್ರುವ್ ಕಪಿಲ– ಸಾಯಿ ಪ್ರತೀಕ್ ತಮ್ಮ ಪಂದ್ಯಗಳಲ್ಲಿ ಮುಗ್ಗರಿಸಿದರು. ಲಕ್ಷ್ಯ ಸೇನ್‌ ಮಾತ್ರ ಗೆಲುವು ಸಾಧಿಸಿದ್ದರು.

ಭಾರತ ತಂಡ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಡೊನೇಷ್ಯಾ ಎದುರು ಬುಧವಾರ 1–4 ಅಂತರದಿಂದ ಸೋತು ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಈ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ 3–0 ಯಿಂದ ಇಂಡೊನೇಷ್ಯಾ ಮೇಲೆ ಜಯಗಳಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದಿತ್ತು. 

66 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಎಚ್.ಎಸ್. ಪ್ರಣಯ್ 21-15, 11-21, 14-21 ಅಂತರದಲ್ಲಿ 2ನೇ ಕ್ರಮಾಂಕದ ಶಿ ಯು ಕ್ವಿ ವಿರುದ್ಧ ಸೋಲನುಭವಿಸಿದರು. ಇದರೊಂದಿಗೆ ಚೀನಾ 1–0 ಮುನ್ನಡೆ ಸಾಧಿಸಿತು. 

ಸಾತ್ವಿಕ್ ಮತ್ತು ಚಿರಾಗ್ ಜೋಡಿ 15-21, 21-11, 12-21 ಅಂತರದಲ್ಲಿ ವಿಶ್ವದ ಅಗ್ರಮಾನ್ಯ ಜೋಡಿ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಸೋಲನುಭವಿಸಿತು.

22 ವರ್ಷದ ಲಕ್ಷ್ಯ ಸೇನ್ ಅವರು 13-21, 21-8, 21-14 ಅಂತರದಲ್ಲಿ ಅಲ್ಲೋರಾದ ವಿಶ್ವದ 6ನೇ ಕ್ರಮಾಂಕದ ಲಿ ಶಿ ಫೆಂಗ್ ವಿರುದ್ಧ ಜಯ ಸಾಧಿಸಿದರು. 

ಧ್ರುವ್ ಮತ್ತು ಸಾಯಿ ಜೋಡಿ 10-21, 10-21 ಅಂತರದಲ್ಲಿ ವಿಶ್ವದ 11ನೇ ಕ್ರಮಾಂಕದ ಜೋಡಿ ರೆನ್ ಕ್ಸಿಯಾಂಗ್ ಯು ಮತ್ತು ಹೆ ಜಿ ಟಿಂಗ್ ವಿರುದ್ಧ ಸೋಲುವುದರೊಂದಿಗೆ ಭಾರತದ ಭರವಸೆಯನ್ನು ಹುಸಿಗೊಳಿಸಿತು.

‘ಕಳೆದ ರಾತ್ರಿ (ಇಂಡೊನೇಷ್ಯಾ ವಿರುದ್ಧದ ಸೋಲಿನ ನಂತರ) ಎಲ್ಲರೂ ತುಂಬಾ ನಿರಾಸೆಗೊಂಡಿದ್ದರು. ಆದರೆ, 13 ರಿಂದ 14 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತವರಿನ ತಂಡದ ವಿರುದ್ಧ ದೊಡ್ಡ ಪಂದ್ಯ ಆಡುವುದು ಸವಾಲಾಗಿತ್ತು’ ಎಂದು ಪಂದ್ಯದ ಬಳಿಕ ಪ್ರಣಯ್‌ ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT