ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವಿಐಎಸ್‌ಎಲ್ ಸಂಪೂರ್ಣ ಸ್ಥಗಿತ?

‘ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಿಂದ ಅಧಿಕೃತ ಮಾಹಿತಿ’
Last Updated 19 ಜನವರಿ 2023, 22:45 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜನವರಿ 16ರಂದು ನಡೆದಿರುವ ಭಾರತೀಯ ಉಕ್ಕು ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

‘ಕಾರ್ಖಾನೆ ಮುಚ್ಚುವ ಬಗ್ಗೆ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರು ನಮಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜಿ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

1923ರಿಂದ ಈ ಕಾರ್ಖಾನೆಯು ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಆರಂಭಿಸಿತ್ತು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. ಬದಲಾದ ತಂತ್ರಜ್ಞಾನ, ಖಾಸಗಿ ಕಂಪನಿಗಳ ಪೈಪೋಟಿ ಹಾಗೂ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತಗಳ ಕಾರಣ ಕಳೆದೊಂದು ದಶಕದಿಂದ ಕಾರ್ಖಾನೆ ನಷ್ಟಕ್ಕೊಳಗಾಗಿದೆ.

ಖರೀದಿಗೆ ನಿರಾಸಕ್ತಿ: ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ 2016ರಲ್ಲಿ ಒಪ್ಪಿಗೆ ನೀಡಿತ್ತು. ಸಂಸ್ಥೆಯನ್ನು ಸಂಪೂರ್ಣ ಮಾರಾಟ ಮಾಡಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮೂಲಕ ಬಿಡ್‌ ಕೂಡ ಕರೆಯಲಾಗಿತ್ತು. ಆದರೆ, ಬಿಡ್‌ದಾರರು ಆಸಕ್ತಿ ವಹಿಸದ ಕಾರಣಕ್ಕೆ ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಕಳೆದ ಅಕ್ಟೋಬರ್‌ 11ರಂದು ಹಿಂಪಡೆದಿತ್ತು.

ಸಂಸ್ಥೆಯ ಖಾಸಗೀಕರಣ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದ ಕಾರ್ಮಿಕ ಸಂಘವು ಸಂಸ್ಥೆಯ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು.

ಹುಸಿಯಾದ ಭರವಸೆ: ಅಳಲು
‘2018ರಲ್ಲಿ ಕೇಂದ್ರದ ಉಕ್ಕು ಸಚಿವರು ಕಾರ್ಖಾನೆಗೆ ಭೇಟಿ ನೀಡಿದ್ದರು. ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ, ಬದಲಿಗೆ ಭಾರತೀಯ ಉಕ್ಕು ನಿಗಮದ ಮೂಲಕ ₹ 6,000 ಕೋಟಿ ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅದು ಭರವಸೆಯಾಗಿಯೇ ಉಳಿಯಿತು’ ಎಂದು ಕಾರ್ಖಾನೆಯ ಕಾರ್ಮಿಕರ ಸಂಘದ ಪದಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಈ ಮೊದಲು ಕಾರ್ಖಾನೆ ವಾರ್ಷಿಕ ₹ 100 ಕೋಟಿ ನಷ್ಟ ಅನುಭವಿಸುತ್ತಿತ್ತು. ಆದರೆ, ನಮ್ಮ (ಕಾರ್ಮಿಕರ) ಪ್ರಯತ್ನದಿಂದ ನಷ್ಟದ ಬಾಬ್ತು ₹ 35 ಕೋಟಿಗೆ ಇಳಿದಿತ್ತು. ಕಾರ್ಖಾನೆಗೆ ಕೇಂದ್ರ ಸರ್ಕಾರವೇ ಬಂಡವಾಳ ತೊಡಗಿಸಿದ್ದರೆ ಇಲ್ಲಿನ ಚಿತ್ರಣವೇ ಬದಲಾಗುತ್ತಿತ್ತು’ ಎಂದರು.

*

ನಿಯಮಾವಳಿಯಂತೆ ಸರ್ಕಾರವು ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಕಾರ್ಖಾನೆ ಉಳಿಸುವ ಪ್ರಯತ್ನ ಮುಂದುವರಿಸಲಿದ್ದೇವೆ.
–ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸಂಸದ

*

ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂಬ ಸುದ್ದಿ ಇದೆ. ಆದರೆ, ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.
–ಪ್ರವೀಣ್‌ಕುಮಾರ್, ವಿಐಎಸ್‌ಎಲ್ ಮುಖ್ಯ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT