ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಮಾರಾಟ ಇಳಿಕೆ

ನವೆಂಬರ್‌ನಲ್ಲಿ ತಯಾರಿಕೆ ಶೇ 4ರಷ್ಟು ಏರಿಕೆ
Last Updated 12 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನ ತಯಾರಿಕೆ ನವೆಂಬರ್‌ನಲ್ಲಿಹೆಚ್ಚಾಗಿದ್ದರೆ, ಮಾರಾಟದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ನವೆಂಬರ್‌ನಲ್ಲಿ ಪ್ರಯಾಣಿಕ ವಾಹನ ತಯಾರಿಕೆ 2.63 ಲಕ್ಷದಿಂದ 2.90 ಲಕ್ಷಕ್ಕೆ ಶೇ 4 ರಷ್ಟು ಏರಿಕೆ ಕಂಡಿದೆ. ಆದರೆ ಮಾರಾಟದಲ್ಲಿ 2.66 ಲಕ್ಷದಿಂದ 2.63 ಲಕ್ಷಕ್ಕೆ ಶೇ 0.84ರಷ್ಟು ಅಲ್ಪ ಇಳಿಕೆ ಕಂಡುಬಂದಿದೆ.

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್‌ಐಎಎಂ) ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.ಕಾರು ಮಾರಾಟವು ಅಕ್ಟೋಬರ್‌ನಲ್ಲಿ ತುಸು ಚೇತರಿಕೆ ಕಂಡಿತ್ತು. ಆದರೆ ನವೆಂಬರ್‌ನಲ್ಲಿ ಮತ್ತೆ ಇಳಿಕೆಯಾಗಿದೆ. ಬೇಡಿಕೆ ಕಡಿಮೆ ಇರುವುದರಿಂದ ಕಂಪನಿಗಳು ವಿತರಕರಿಗೆ ನೀಡುತ್ತಿರುವ ವಾಹನಗಳ ಸಂಖ್ಯೆಯಲ್ಲಿ ಇಳಿಕೆ ಮಾಡುತ್ತಿವೆ.

11 ತಿಂಗಳ ಮಾರಾಟ ಕುಸಿತದ ಬಳಿಕ ಅಕ್ಟೋಬರ್‌ನಲ್ಲಿ ಮಾರಾಟ ಅಲ್ಪ ಏರಿಕೆ ಕಂಡಿತ್ತು. ಆದರೆ, ಈ ವರ್ಷದಲ್ಲಿ ಇದುವರೆಗೆ ಎಲ್ಲಾ ವಿಭಾಗಗಳ ಮಾರಾಟವು ನಕಾರಾತ್ಮಕ ಮಟ್ಟದಲ್ಲಿಯೇ ಇದೆ.

‘ಪ್ರಯಾಣಿಕ ವಾಹನ ವಿಭಾಗದ ಮಾರಾಟ ಇಳಿಕೆ ಸಮಸ್ಯೆಯು ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿಯೂ ಮುಂದುವರಿಯಲಿದೆ. 2018ರ ನವೆಂಬರ್‌ಗೆ ಹೋಲಿಸಿದರೆ 2019ರ ನವೆಂಬರ್‌ನಲ್ಲಿನ ಮಾರಾಟದ ಅಂಕಿ–ಅಂಶವು ಕನಿಷ್ಠ ಮಟ್ಟದ್ದಾಗಿದೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಹೇಳಿದ್ದಾರೆ.

ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಮಾರಾಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಾಣದಂತೆ ತಡೆಯಲುಹೊಸದಾಗಿ ಬಿಡುಗಡೆ ಆಗಿರುವ ಯುಟಿಲಿಟಿ ವಾಹನಗಳು ನೆರವಾಗಿವೆ ಎಂದೂ ಅವರು ತಿಳಿಸಿದ್ದಾರೆ.

‘ವಾಣಿಜ್ಯ ಮತ್ತು ದ್ವಿಚಕ್ರ ವಾಹನ ಮಾರಾಟವು ನಕಾರಾತ್ಮಕ ಮಟ್ಟದಲ್ಲಿ ಇರುವುದು ಕಳವಳಕಾರಿಯಾಗಿದೆ.ಗ್ರಾಮೀಣ ಭಾಗದಲ್ಲಿ ಬೇಡಿಕೆ ಇಲ್ಲದೇ ಇರುವುದರಿಂದ ದ್ವಿಚಕ್ರ ವಾಹನ ಮಾರಾಟ ಇಳಿಕೆಯಾಗುತ್ತಿದೆ. ಮೂಲಸೌಕರ್ಯ ವಲಯದ ಮಂದಗತಿಯ ಬೆಳವಣಿಗೆಯಿಂದಾಗಿ ವಾಣಿಜ್ಯ ವಾಹನಗಳ ಮಾರಾಟ ಕುಸಿಯುತ್ತಿದೆ’ ಎಂದು ಮೆನನ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT