ಬುಧವಾರ, ಸೆಪ್ಟೆಂಬರ್ 29, 2021
21 °C

₹ 1.75 ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯ ಗುರಿ ಸಾಧ್ಯ: ಸಿಇಎ ಸುಬ್ರಮಣಿಯನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2021–22ನೇ ಸಾಲಿಗೆ ಕೇಂದ್ರ ಸರ್ಕಾರವು ಉದ್ದೇಶಿಸಿರುವ ₹ 1.75 ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯದ ಗುರಿ ಸಾಧಿಸಬಹುದಾಗಿದ್ದು, ಎಲ್‌ಐಸಿಐ ಐಪಿಒದಿಂದಲೇ ₹ 1 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್‌ ಹೇಳಿದ್ದಾರೆ.

ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2021–22ಕ್ಕೆ ನಿಗದಿಪಡಿಸಿರುವ ₹ 1.75 ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯವು 2021ರ  ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದ ‌₹ 2.10 ಲಕ್ಷ ಕೋಟಿ ಮೊತ್ತದ ಗುರಿಯ ಮುಂದುವರಿದ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಬಿಪಿಸಿಎಲ್‌ ಖಾಸಗೀಕರಣ ಮತ್ತು ಎಲ್‌ಐಸಿಯ ಐಪಿಒದಿಂದ ಹೆಚ್ಚಿನ ಕೊಡುಗೆ ಬರಲಿದೆ. ಅಂದಾಜುಗಳ ಪ್ರಕಾರ, ಬಿಪಿಸಿಎಲ್‌ ಖಾಸಗೀಕರಣದಿಂದ ₹ 75 ಸಾವಿರದಿಂದ ₹ 80 ಸಾವಿರ ಅಥವಾ ಅದಕ್ಕೂ ಹೆಚ್ಚಿನ ಮೊತ್ತವು ಬರಲಿದೆ. ಎಲ್‌ಐಸಿ ಐಪಿಒದಿಂದ ಸರಿಸುಮಾರು ₹ 1 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಬಿಪಿಸಿಎಲ್‌ನಲ್ಲಿ ಹೊಂದಿರುವ ಶೇ 52.98ರಷ್ಟು ಸಂಪೂರ್ಣ ಷೇರುಪಾಲನ್ನೂ ಮಾರಾಟ ಮಾಡಲಿದೆ. ವೇದಾಂತ ಸಮೂಹ, ಅಪೋಲೊ ಗ್ಲೋಬಲ್‌ ಮತ್ತು ಐ ಸ್ಕ್ವೇರ್ಡ್‌ ಕ್ಯಾಪಿಟಲ್ಸ್‌ ಇಂಡಿಯಾದ ಭಾರತದ ಘಟಕ ಥಿಂಕ್‌ ಗ್ಯಾಸ್‌ ಕಂಪನಿಗಳು ಬಿಪಿಸಿಎಲ್‌ನ ಷೇರು ಖರೀದಿಗೆ ಆಸಕ್ತಿ ತೋರಿಸಿವೆ.

ಆರ್‌ಬಿಐ ಇಟ್ಟುಕೊಂಡಿರುವ ಚಿಲ್ಲರೆ ಹಣದುಬ್ಬರದ ಗುರಿಯಿಂದಾಗಿ ಹಣದುಬ್ಬರದ ಮಟ್ಟ ಮತ್ತು ಚಂಚಲತೆ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ. 2021ರ ಮಾರ್ಚ್‌ 31ರವರೆಗೆ ವಾರ್ಷಿಕ ಹಣದುಬ್ಬರವನ್ನು ಶೇ 4ರಲ್ಲಿ (ಶೇ 2ರಷ್ಟು ಹೆಚ್ಚು ಅಥವಾ ಕಡಿಮೆ) ನಿಯಂತ್ರಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿಯು ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು