ಸೋಮವಾರ, ಏಪ್ರಿಲ್ 19, 2021
25 °C
ತಡೆರಹಿತ ಸರಕು ಸಾಗಣೆಗೆ ಸಹಕಾರಿ: ತೆರಿಗೆ ವಂಚನೆಗೆ ಕಡಿವಾಣ

ಇ-ವೇ ಬಿಲ್: ಭಾರಿ ದಂಡವೇ ಹೊರೆ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರಕು ಸಾಗಣೆ ವೇಳೆ ತೆರಿಗೆ ವಂಚನೆಗೆ ಕಡಿವಾಣ ಹಾಕುವ ಉದ್ದೇಶದ ಇ–ವೇ ಬಿಲ್‌ನ ಮಾನ್ಯತೆಯ ಅವಧಿ ಹಾಗೂ ಸಣ್ಣ ಪುಟ್ಟ ತಪ್ಪುಗಳಿಗೂ ಭಾರಿ ದಂಡ ತೆರಬೇಕಾಗಿರುವ ಬಗ್ಗೆ ವಹಿವಾಟುದಾರರು, ಸರಕು ಸಾಗಣೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ದಂಡವು ಗರಿಷ್ಠ ಮಟ್ಟದಲ್ಲಿದ್ದು, ಶೇಕಡ 200ರವರೆಗೂ ಇದೆ. ಉದ್ಯಮದ ದೃಷ್ಟಿಯಿಂದ ಇದು ಹಿತಕರವಲ್ಲ. ಪಾವತಿಸಲು ಆಗದಿರುವಷ್ಟು ದಂಡ ಇರಬಾರದು. ಉದ್ದೇಶಪೂರ್ವಕ ಅಲ್ಲದ, ನಿರ್ಲಕ್ಷಿಸಬಹುದಾದ ತಪ್ಪುಗಳಿಗೂ ಕಠಿಣ ಶಿಕ್ಷೆ ನೀಡುವುದು ಸರಿಯಲ್ಲ. ತಪಾಸಣೆ ವೇಳೆ ಇ–ವೇ ಬಿಲ್‌ನಲ್ಲಿ ದೋಷ ಕಂಡುಬಂದರೆ ಆ ಸ್ಥಳದಲ್ಲಿಯೇ ದಂಡ ಕಟ್ಟಬೇಕಾಗಿದೆ’ ಎಂದು ಅಖಿಲ ಭಾರತ ತಯಾರಕರ ಸಂಸ್ಥೆಯ ಕರ್ನಾಟಕದ ಅಧ್ಯಕ್ಷ ಸಂಪತ್ ರಾಮನ್ ಸಮಸ್ಯೆ ವಿವರಿಸಿದರು.

‘ಈ ಮುಂಚೆ 100 ಕಿಲೋ ಮೀಟರ್‌ ಅಂತರಕ್ಕೆ ಇ–ವೇ ಬಿಲ್ ಸಿಂಧುತ್ವ ಅವಧಿ ಒಂದು ದಿನ ಇತ್ತು. ಆದರೆ, ಜಿಎಸ್‌ಟಿ ಮಂಡಳಿಯು ನಿಯಮದಲ್ಲಿ ತಿದ್ದುಪಡಿ ತಂದು ಅದನ್ನು 200 ಕಿಲೋ ಮೀಟರಿಗೆ ನಿಗದಿಪಡಿಸಲಾಗಿದೆ. ಅತಿಯಾದ ವಾಹನ ದಟ್ಟಣೆ ಇರುವುದರಿಂದ ಇದು ಎಲ್ಲರಿಗೂ ಹೊರೆಯಾಗಿದೆ’ ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

‘ಬೆಂಗಳೂರನ್ನೂ ಒಳಗೊಂಡು ಬಹುತೇಕ ನಗರಗಳಲ್ಲಿ ಹಗಲಿನ ವೇಳೆಯಲ್ಲಿ ಭಾರಿ ಗಾತ್ರದ ವಾಹನಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಇದರಿಂದಾಗಿ ಸರಕನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮುನ್ನ ಇ–ವೇ ಬಿಲ್‌ ಅವಧಿ ಮುಕ್ತಾಯವಾಗುವ ಸಂದರ್ಭ ಇರುತ್ತದೆ. ಹೆದ್ದಾರಿಗಳಲ್ಲಿ ಭಾರಿ ವಾಹನಗಳು ಒಂದೇ ಸಾಲಿನಲ್ಲಿ ಚಲಿಸಬೇಕಿದೆ. ಈ ಕಾರಣಗಳಿಂದಾಗಿಯೂ ಒಟ್ಟಾರೆ ಸಾಗಣೆ ಸಮಯ ಹೆಚ್ಚಾಗುತ್ತಿದೆ. ಪಾರ್ಸೆಲ್‌ ಸರಕುಗಳನ್ನು ಹಲವು ಮಾರಾಟಗಾರರಿಂದ ಸಂಗ್ರಹಿಸಿದ ಬಳಿಕ ಅವನ್ನು ಒಂದು ವಾಹನದಲ್ಲಿ ತುಂಬಿಕೊಂಡು ಸಾಗಿಸಬೇಕು. ಈ ಹಂತದಲ್ಲಿಯೂ ಇ–ವೇ ಬಿಲ್‌ ಸಮಯಮಿತಿ ಸಾಕಾಗುವುದಿಲ್ಲ’ ಎಂದು ಅವರು ಹೇಳಿದರು.

ಸರಕು ಸಾಗಣೆದಾರರ ಸಮಸ್ಯೆಗಳನ್ನು ಜಿಎಸ್‌ಟಿ ಮಂಡಳಿಯ ಸದಸ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಲಾಗಿದೆ. ಅವರು ಮಂಡಳಿಯ ಗಮನಕ್ಕೆ ತಂದು ಪರಿಹಾರ ಒದಗಿಸುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದರು.

ತೆರಿಗೆ ಸಂಗ್ರಹಕ್ಕೆ ಪೂರಕ’

‘ದಾಖಲೆ ಇಲ್ಲದ ಸರಕು ಸಾಗಣೆಗೆ ಕಡಿವಾಣ ಹಾಕಲು ಇ–ವೇ ಬಿಲ್ ಪರಿಣಾಮಕಾರಿ. ತಡೆರಹಿತವಾಗಿ ಸರಕು ಸಾಗಿಸಬಹುದಾದ್ದರಿಂದ ವಿತರಕರು ಇದಕ್ಕೆ ಹೊಂದಿಕೊಂಡಿದ್ದಾರೆ.

ಸತತ ಎರಡು ತಿಂಗಳು ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಇ–ವೇ ಬಿಲ್‌ ಸೃಷ್ಟಿಯಾಗದಂತೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇ–ವೇ ಬಿಲ್ ಸೃಷ್ಟಿಯಾಗದೆ ₹ 50 ಸಾವಿರ ಮತ್ತು ಅದಕ್ಕೂ ಹೆಚ್ಚಿನ ‌ಮೊತ್ತದ ಸರಕು ಸಾಗಣೆ ಅಸಾಧ್ಯ. ಹೀಗಾಗಿ ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ರಿಟರ್ನ್ಸ್‌ ಸಲ್ಲಿಸುವುದರಿಂದ ಸರ್ಕಾರಕ್ಕೆ ತೆರಿಗೆ ಬರುತ್ತದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ಮಾಹಿತಿ ನೀಡಿದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು