ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಲಕ್ಷಣ: ಹಣಕಾಸು ಸಚಿವಾಲಯ

Last Updated 9 ಜುಲೈ 2021, 11:12 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ವಲಯಗಳನ್ನು ಗುರಿಯಾಗಿ ಇರಿಸಿಕೊಂಡು ಘೋಷಿಸಿದ ಆರ್ಥಿಕ ಪ್ಯಾಕೇಜ್ ಹಾಗೂ ತ್ವರಿತಗತಿಯಲ್ಲಿ ಲಸಿಕೆ ನೀಡುತ್ತಿರುವ ಪರಿಣಾಮವಾಗಿ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಹೇಳಿದೆ.

‘ಆರ್ಥಿಕ ಪ್ಯಾಕೇಜ್‌ನ ಮೊತ್ತ ₹ 6.29 ಲಕ್ಷ ಕೋಟಿ. ಮಾರುಕಟ್ಟೆಯು ಭೀತಿಗೆ ಒಳಗಾಗದಂತೆ ನೋಡಿಕೊಳ್ಳುವ ಪ್ರಯತ್ನ ಹಾಗೂ ವಿವಿಧ ವಲಯಗಳ ಪುನಶ್ಚೇತನದ ಕೆಲಸ ಆರ್‌ಬಿಐ ಕಡೆಯಿಂದ ನಡೆದಿದೆ’ ಎಂದು ಸಚಿವಾಲಯವು ಮಾಸಿಕ ವರದಿಯಲ್ಲಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಆರ್ಥಿಕ ದುಷ್ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿನ ತಿಂಗಳಲ್ಲಿ ಎಂಟು ಆರ್ಥಿಕ ಕ್ರಮಗಳನ್ನು ಘೋಷಿಸಿದ್ದರು.

ಈಚೆಗೆ ಘೋಷಿಸಿರುವ ಆರ್ಥಿಕ ಪುನಶ್ಚೇತನ ಪ್ಯಾಕೇಜ್‌, ಬಂಡವಾಳ ವೆಚ್ಚಕ್ಕೆ ನೆರವಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆಯು ಉದ್ಯೋಗ ನೀಡುವುದಕ್ಕೆ ಉತ್ತೇಜನ ಕೊಡುವುದರಿಂದಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಆಗಬಹುದು. ನಗರಗಳಲ್ಲಿನ ಬಡವರಿಗೆ ಸಾಲ ಪಡೆಯಲು ನೆರವು ನೀಡುವ ಕ್ರಮ ಹಾಗೂ ಭಾರತ್‌ನೆಟ್ ಯೋಜನೆಯ ವಿಸ್ತರಣೆ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಸಹಾಯ ಮಾಡಬಹುದು ಎಂದು ವರದಿಯು ಅಂದಾಜು ಮಾಡಿದೆ.

ಉಚಿತವಾಗಿ ಆಹಾರ ಧಾನ್ಯಗಳನ್ನು ಪೂರೈಸುವ ಕ್ರಮ ಮತ್ತು ರಸಗೊಬ್ಬರಕ್ಕೆ ಸಬ್ಸಿಡಿ ನೀಡುವ ಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಸೃಷ್ಟಿಸಲು ನೆರವಾಗಬಹುದು. ‘ಕೋವಿಡ್ ಲಸಿಕೆ ಕೊಡುವುದರ ವೇಗ ತಗ್ಗದೆ ಇರುವಂತೆ ನೋಡಿಕೊಳ್ಳುವುದು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೇವಾ ಮೂಲಸೌಕರ್ಯ ಹೆಚ್ಚಿಸುವುದು ದೇಶದ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಸುಸ್ಥಿರ ಕೊಡುಗೆ ನೀಡಬಲ್ಲದು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT