ಗುರುವಾರ , ಸೆಪ್ಟೆಂಬರ್ 19, 2019
24 °C
ಆರ್ಥಿಕತೆಗೆ ಬ್ಯಾಂಕಿಂಗ್‌ ಕ್ಷೇತ್ರದ ಕೊಡುಗೆಯ ಪರಾಮರ್ಶೆ

ಬ್ಯಾಂಕಿಂಗ್‌ ಕ್ಷೇತ್ರದ ಅಭಿಪ್ರಾಯ ಸಂಗ್ರಹ: ಮೊದಲ ಸುತ್ತು ಪೂರ್ಣ

Published:
Updated:

ನವದೆಹಲಿ: ದೇಶದ ಆರ್ಥಿಕತೆಯ ಗಾತ್ರವನ್ನು ಮುಂದಿನ ಐದು ವರ್ಷಗಳಲ್ಲಿ ₹ 350 ಲಕ್ಷ ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ಕಾರ್ಯದಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಪ್ರಾಥಮಿಕ ಸುತ್ತಿನ ಅಭಿಯಾನವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಭಾನುವಾರ ಪೂರ್ಣಗೊಳಿಸಿವೆ.

ಬ್ಯಾಂಕಿಂಗ್‌ ಕ್ಷೇತ್ರದ ಭವಿಷ್ಯದ ಮುನ್ನೋಟ ಸಿದ್ಧಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಖೆಗಳ ಮಟ್ಟದಲ್ಲಿ ಚಿಂತನ – ಮಂಥನ ನಡೆಸಿ ಸಲಹೆ ಸೂಚನೆಗಳನ್ನು ಸಂಗ್ರಹಿಸುವ ಅಭಿಯಾನವನ್ನು ಶಾಖೆಗಳ ಮಟ್ಟದಲ್ಲಿ ಕೈಗೊಳ್ಳಲಾಗಿತ್ತು.

ಕುಂಠಿತ ಪ್ರಗತಿ ಕಾಣುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಬ್ಯಾಂಕ್‌ಗಳು ಮಹತ್ವದ ಪಾತ್ರ ನಿರ್ವಹಿಸಬೇಕು. ತಯಾರಿಕಾ ವಲಯಕ್ಕೆ ಗರಿಷ್ಠ ಮಟ್ಟದಲ್ಲಿ ಸಾಲ ಪೂರೈಸಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಎಸ್‌ಬಿಐ: ‘ದೇಶದಾದ್ಯಂತ ಇರುವ 17 ವೃತ್ತಗಳಲ್ಲಿನ 502 ಪ್ರಾದೇಶಿಕ ಕಚೇರಿಗಳಲ್ಲಿ ಎಸ್‌ಬಿಐ ಎರಡು ದಿನಗಳ ಕಾಲ ಸಮಾಲೋಚನಾ ಸಭೆ ಆಯೋಜಿಸಿತ್ತು. 15 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಕೆ. ಗುಪ್ತ ಹೇಳಿದ್ದಾರೆ.

ಬ್ಯಾಂಕ್‌ ಆಫ್‌ ಇಂಡಿಯಾ: ಬೆಂಗಳೂರು ವಲಯದ ಎಲ್ಲ 76 ಶಾಖೆಗಳ ಮ್ಯಾನೇಜರ್‌ಗಳ ಸಭೆ ಆಯೋಜಿಸಿತ್ತು. ಬೆಂಗಳೂರು ವಲಯದ ಮ್ಯಾನೇಜರ್‌ ಪ್ರಮೋದ ಕುಮಾರ್ ಬಿ  ಮಾತನಾಡಿ, ‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಕೆಳಸ್ಥರದಿಂದ ಸರಿಪಡಿಸಲು ಚಿಂತನ ಮಂಥನ ನಡೆಸಬೇಕು’ ಎಂದರು. ಪ್ರಧಾನ ಕಚೇರಿಯ ಜನರಲ್‌ ಮ್ಯಾನೇಜರ್‌ ಪಿ. ಕೆ. ದಾಸ್ ಭಾಗವಹಿಸಿದ್ದರು.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ: ಬೆಂಗಳೂರು ವಲಯದ ಎಲ್ಲಾ ಶಾಖೆಗಳ ಪ್ರತಿನಿಧಿಗಳ ಸಭೆಯಲ್ಲಿ ಬೆಂಗಳೂರು ಮುಖ್ಯ ಕಚೇರಿಯ ಚೀಫ್‌ ಮ್ಯಾನೇಜರ್‌ ಎನ್.ಮುನಿರಾಜು, ಬೆಂಗಳೂರು ವಲಯದ ಮ್ಯಾನೇಜರ್‌ ಚಿತ್ರಾ ಎಸ್. ದಾತಾರ್ ಮಾತನಾಡಿದರು. ವಿವಿಧ ಕ್ಷೇತ್ರಗಳ ನಿರೀಕ್ಷೆಗಳನ್ನು ಈಡೇರಿಸುವುದಕ್ಕೆ ದಕ್ಷ ರೀತಿಯಿಂದ ಕಾರ್ಯನಿರ್ವಹಿಸುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಇಂಡಿಯನ್‌ ಬ್ಯಾಂಕ್‌: ಬ್ಯಾಂಕ್‌ ಶಾಖೆಗಳ ವಹಿವಾಟು ಪ್ರಗತಿಗೆ ಅಡ್ಡಿಯಾಗಿರುವ ಸಂಗತಿಗಳನ್ನು ನಿವಾರಿಸಿಕೊಳ್ಳುವ, ಗ್ರಾಹಕರ ಅಗತ್ಯಗಳನ್ನು ಈಡೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿತು. ಜನರಲ್‌ ಮ್ಯಾನೇಜರ್‌ ಎಸ್‌. ಚೇಝಿಯನ್‌ ನೇತೃತ್ವದಲ್ಲಿ ಸಭೆ ನಡೆಯಿತು.

ಬ್ಯಾಂಕ್‌ ಆಫ್‌ ಬರೋಡಾ: ‘ಬೆಂಗಳೂರು ವಲಯದ ಎಲ್ಲ ಶಾಖೆಗಳ ಕಾರ್ಯವೈಖರಿಯ ಪರಾಮರ್ಶೆ ನಡೆಸಿ, ಭವಿಷ್ಯದ ಕಾರ್ಯಸೂಚಿ ಬಗ್ಗೆ ಚರ್ಚಿಸಲಾಯಿತು. ವಿವಿಧ ವಲಯಗಳಿಗೆ ಹೆಚ್ಚಿನ ಸಾಲ ನೀಡುವ, ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್‌ ಸೇವಾ ಗುಣಮಟ್ಟ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಯಿತು’ ಎಂದು ಜನರಲ್ ಮ್ಯಾನೇಜರ್‌ ಸುದರ್ಶನ ಎಸ್‌. ಎ. ತಿಳಿಸಿದ್ದಾರೆ.

ಕಾರ್ಪೊರೇಷನ್‌ ಬ್ಯಾಂಕ್‌ ಸಭೆ
ಕಾರ್ಪೊರೇಷನ್‌ ಬ್ಯಾಂಕ್‌ನ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ಬೆಂಗಳೂರಿನಲ್ಲಿ ಸಭೆ ನಡೆಸಿತು.

ಆರ್ಥಿಕತೆಯ ವಿವಿಧ ಭಾಗಗಳಿಗೆ ಸಾಲದ ಮಿತಿಯನ್ನು ಹೆಚ್ಚಿಸುವುದು, ನೂತನ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆಯ ಬಳಕೆ ಕುರಿತು ಚರ್ಚಿಸಲಾಯಿತು. ಹಿರಿಯ ನಾಗರಿಕರು, ರೈತರು, ಲಘು ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಅಗತ್ಯಕ್ಕೆ ಅನುಗುಣವಾಗಿ ಗ್ರಾಹಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು.

ಕಾರ್ಪೊರೇಷನ್‌ ಬ್ಯಾಂಕ್‌ನ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ಬೆಂಗಳೂರಿನಲ್ಲಿ ಸಭೆ ನಡೆಸಿತು.

ಆರ್ಥಿಕತೆಯ ವಿವಿಧ ಭಾಗಗಳಿಗೆ ಸಾಲದ ಮಿತಿಯನ್ನು ಹೆಚ್ಚಿಸುವುದು, ನೂತನ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆಯ ಬಳಕೆ ಕುರಿತು ಚರ್ಚಿಸಲಾಯಿತು. ಹಿರಿಯ ನಾಗರಿಕರು, ರೈತರು, ಲಘು ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಅಗತ್ಯಕ್ಕೆ ಅನುಗುಣವಾಗಿ ಗ್ರಾಹಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು.

Post Comments (+)