ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಡಿಪಿ ಶೇ 7.2ರಷ್ಟು ಪ್ರಗತಿ: ಫಿಚ್‌

2024–25ನೇ ಆರ್ಥಿಕ ಸಾಲಿನ ಮುನ್ನೋಟ ಪರಿಷ್ಕರಣೆ
Published 18 ಜೂನ್ 2024, 16:29 IST
Last Updated 18 ಜೂನ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: 2024–25ನೇ ಆರ್ಥಿಕ ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯನ್ನು ಫಿಚ್‌ ರೇಟಿಂಗ್ಸ್ ಸಂಸ್ಥೆ ಪರಿಷ್ಕರಿಸಿದ್ದು, ಶೇ 7.2ರಷ್ಟು ಪ್ರಗತಿ ದಾಖಲಿಸಿದೆ ಎಂದು ಅಂದಾಜಿಸಿದೆ.

ಮಾರ್ಚ್‌ನಲ್ಲಿ ಪ್ರಕಟಿಸಿದ್ದ ವರದಿಯಲ್ಲಿ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿತ್ತು. ಸರಕು ಮತ್ತು ಸೇವೆಗೆ ಸಂಬಂಧಿಸಿದಂತೆ ಗ್ರಾಹಕರ ಬಳಕೆ ವೆಚ್ಚದಲ್ಲಿ ಚೇತರಿಕೆ ಹಾಗೂ ಹೂಡಿಕೆ ಪ್ರಮಾಣದಲ್ಲಿನ ಏರಿಕೆಯಿಂದಾಗಿ ಈ ಪ್ರಗತಿ ಸಾಧ್ಯವಾಗಲಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಜಾಗತಿಕ ಆರ್ಥಿಕ ಮುನ್ನೋಟದ ವರದಿ ತಿಳಿಸಿದೆ.

2025–26ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.5ರಷ್ಟು ಹಾಗೂ 2026–27ನೇ ಆರ್ಥಿಕ ವರ್ಷದಲ್ಲಿ ಶೇ 6.2ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ. 

ಪ್ರಸಕ್ತ ವರ್ಷದ ಅಂತ್ಯಕ್ಕೆ ಚಿಲ್ಲರೆ ಹಣದುಬ್ಬರವು ಶೇ 4.5ಕ್ಕೆ ಇಳಿಕೆಯಾಗಲಿದ್ದು, ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗಿರುವ ರೆ‍ಪೊ ದರವನ್ನು ಶೇ 6.5ರಿಂದ ಶೇ 6.25ಕ್ಕೆ (ಶೇ 0.25ರಷ್ಟು) ಇಳಿಕೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದೆ.

ಇತ್ತೀಚೆಗೆ ನಡೆದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆ ಕೂಡ ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದ್ದು, ಶೇ 7.2ರಷ್ಟು ಪ್ರಗತಿ ದಾಖಲಿಸಿದೆ ಎಂದು ಹೇಳಿದೆ.  

ಗ್ರಾಹಕರ ದಿನಬಳಕೆ ವೆಚ್ಚದ ಏರಿಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಳದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅಂದಾಜಿಸಿದೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಶೇ 7ರಷ್ಟು ಹಾಗೂ ಎಸ್ ಆ್ಯಂ‍ಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆಯು ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ಮೂಡೀಸ್‌ ರೇಟಿಂಗ್ಸ್‌ ಸಂಸ್ಥೆ ಮತ್ತು ಡೆಲಾಯ್ಟ್‌ ಇಂಡಿಯಾ ಸಂಸ್ಥೆಯ ಶೇ 6.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಿವೆ.

ಬಂಡವಾಳ ಹೂಡಿಕೆ ಏರಿಕೆ

ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಆದರೆ, ಇತ್ತೀಚಿನ ತ್ರೈಮಾಸಿಕಗಳ ಅವಧಿಯಲ್ಲಿನ ಹೂಡಿಕೆಗೆ ಹೋಲಿಸಿದರೆ ಈ ಪ್ರಮಾಣವು ಕಡಿಮೆ ಇರಲಿದೆ ಎಂದು ಫಿಚ್‌ ವರದಿ ತಿಳಿಸಿದೆ.

ಇತ್ತೀಚೆಗೆ ಬಿಸಿ ಗಾಳಿಯಿಂದಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ, ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಇದು ಆರ್ಥಿಕತೆ ಬೆಳವಣಿಗೆಗೆ ನೆರವಾಗಲಿದ್ದು, ಚಿಲ್ಲರೆ ಹಣದುಬ್ಬರದ ಇಳಿಕೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

2023-24ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ 8.2ರಷ್ಟು ಪ್ರಗತಿ ದಾಖಲಿಸಿದೆ. 

2025 ಮತ್ತು 2026ರಲ್ಲಿ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ 4.3ರಷ್ಟು ಇರಲಿದೆ ಎಂದು ಅಂದಾಜಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT