ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್ಎಂಸಿಜಿ: ಶೇ 6.5ರಷ್ಟು ಬೆಳವಣಿಗೆ

ದ್ವಿಗುಣ ಬೆಳವಣಿಗೆ ಕಂಡ ಆಹಾರೇತರ ವಲಯ: ನೀಲ್ಸನ್‌ಐಕ್ಯು
Published 7 ಮೇ 2024, 14:05 IST
Last Updated 7 ಮೇ 2024, 14:05 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗ್ರಾಹಕ ಬಳಕೆ ವಸ್ತುಗಳ ಉದ್ಯಮವು 2024ರ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 6.5ರಷ್ಟು ಬೆಳವಣಿಗೆ ದಾಖಲಿಸಿದೆ.

ಐದು ತ್ರೈಮಾಸಿಕಗಳಲ್ಲಿ ಮೊದಲ ಬಾರಿಗೆ ಗ್ರಾಮೀಣ ಬಳಕೆಯು ನಗರವನ್ನು ಮೀರಿಸಿದೆ. ಆಹಾರ ಮತ್ತು ಆಹಾರೇತರ ವಲಯಗಳೆರಡೂ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆಗೆ ಕೊಡುಗೆ ನೀಡಿವೆ. ಆದರೆ, ಆಹಾರಕ್ಕೆ ಹೋಲಿಸಿದರೆ ಆಹಾರೇತರ ವಲಯವು ದ್ವಿಗುಣ ಬೆಳವಣಿಗೆ ಕಂಡಿದೆ ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ (ಎನ್‌ಐಕ್ಯು) ಹೇಳಿದೆ.

ಈ ಬೆಳವಣಿಗೆ 2023ರ ಮೊದಲ ತ್ರೈಮಾಸಿಕದಲ್ಲಿ ಶೇ 3.1ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಎಫ್‌ಎಂಸಿಜಿ ಉದ್ಯಮದ ನಿರಂತರ ಬೆಳವಣಿಗೆಯು, ಬಳಕೆಯ ಹೆಚ್ಚಳದಿಂದ ಮುಂದುವರಿಯುತ್ತಿದೆ. ಗ್ರಾಮೀಣ ಪ್ರದೇಶಗಳು ಐದು ತ್ರೈಮಾಸಿಕಗಳಲ್ಲಿ ಮೊದಲ ಬಾರಿಗೆ ನಗರ ಬೆಳವಣಿಗೆಯನ್ನು ಮೀರಿಸಿದೆ ಎಂದು ಎನ್‌ಐಕ್ಯುನ ರೂಸ್‌ವೆಲ್ಟ್‌ ಡಿಸೋಜಾ ಹೇಳಿದ್ದಾರೆ.

ಗೃಹ ಮತ್ತು ವೈಯಕ್ತಿಕ ಬಳಕೆ ವಸ್ತುಗಳ (ಎಚ್‌ಪಿಸಿ) ವಿಭಾಗವು ಆಹಾರ ವಿಭಾಗವನ್ನು ಮೀರಿಸಿದೆ. ಈ ತ್ರೈಮಾಸಿಕದಲ್ಲಿ ನಗರ ಪ್ರದೇಶದಲ್ಲಿ ಬಳಕೆಯು ಮಂದಗತಿಯಲ್ಲಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಕಂಡಿದೆ. ಗ್ರಾಮೀಣ ಬಳಕೆಯ ಬೆಳವಣಿಗೆಯು ವೇಗ ಪಡೆದುಕೊಂಡಿದ್ದು, ನಗರ ಬೇಡಿಕೆಯು ಶೇ 5.7ಕ್ಕೆ ಇಳಿಕೆಯಾಗಿದೆ ಎಂದು ಎನ್‌ಐಕ್ಯು ತಿಳಿಸಿದೆ.

ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ಕಳೆದ ಎರಡು ತ್ರೈಮಾಸಿಕಗಳಲ್ಲಿ ಸಣ್ಣ ತಯಾರಕರು (ಕಂಪನಿಗಳು) ಆಹಾರೇತರ ವರ್ಗದಲ್ಲಿ ಹೆಚ್ಚಿನ ಪ್ರಮಾಣದ ಬೆಳವಣಿಗೆ ಕಂಡಿದ್ದಾರೆ. ಸಣ್ಣ ಮಾರಾಟಗಾರರು ಆಹಾರ ವಲಯದಲ್ಲಿ ಬೆಲೆಗಳನ್ನು ಸ್ಥಿರವಾಗಿಡುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಆಹಾರೇತರ ವಿಭಾಗವು, ಬೆಲೆ ಹೆಚ್ಚಳದೊಂದಿಗೆ, ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT