ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ ಹೊರಹರಿವು ಅಬಾಧಿತ

ಜೂನ್‌ ಮೊದಲ ವಾರದಲ್ಲಿ ₹14,800 ಕೋಟಿ ಹಿಂತೆಗೆತ
Published 9 ಜೂನ್ 2024, 14:12 IST
Last Updated 9 ಜೂನ್ 2024, 14:12 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ (ಜೂನ್‌ 7ರವರೆಗೆ) ಭಾರತದ ಷೇರು ಮಾರುಕಟ್ಟೆಗಳಿಂದ ₹14,800 ಕೋಟಿ ಬಂಡವಾಳವನ್ನು ವಾಪಸ್‌ ಪಡೆದಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಹಾಗೂ ಚೀನಾದ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿರುವುದೇ ಇಷ್ಟು ಪ್ರಮಾಣದಲ್ಲಿ ಬಂಡವಾಳದ ಹೊರಹರಿವಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಮೇ ತಿಂಗಳಿನಲ್ಲಿ ₹25,586 ಕೋಟಿ ಬಂಡವಾಳ ಹಿಂತೆಗೆದುಕೊಂಡಿದ್ದರು. ಏಪ್ರಿಲ್‌ನಲ್ಲಿ ಭಾರತವು ಮಾರಿಷಸ್‌ ಜೊತೆಗಿನ ತೆರಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿತ್ತು. ಹಾಗಾಗಿ, ಆ ತಿಂಗಳಿನಲ್ಲಿ ₹8,700 ಕೋಟಿ  ಹಿಂಪಡೆದಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಸತತ ಎಂಟು ಸಭೆಗಳಿಂದಲೂ ಬಡ್ಡಿದರ ಕಡಿತಕ್ಕೆ ಮುಂದಾಗಿಲ್ಲ. ಇದೇ ವಿದೇಶಿ ಬಂಡವಾಳದ ಹೊರಹರಿವಿನ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. 

‘ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಸಮೀಕ್ಷೆಯಲ್ಲಿ ಹೇಳಿದ್ದಷ್ಟು ಸ್ಥಾನ ಪಡೆಯುವಲ್ಲಿ ಬಿಜೆಪಿ ವೈಫಲ್ಯ ಕಂಡಿತು. ಇದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದರಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಯಿತು’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್ಸ್‌ ರೀಸರ್ಚ್ ಇಂಡಿಯಾದ ಸಹ ನಿರ್ದೇಶಕ (ಸಂಶೋಧನಾ ವಿಭಾಗ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

‘ಚೀನಾದ ಮಾರುಕಟ್ಟೆಗಳ ಬಗ್ಗೆ ವಿದೇಶಿ ಹೂಡಿಕೆದಾರರು ತಳೆದಿದ್ದ ನಿರಾಶಾವಾದದ ನಿಲುವು ಸದ್ಯ ಮರೆಯಾಗಿದೆ. ಮತ್ತೊಂದೆಡೆ, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿನ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆಯಾಗಿದೆ. ಹಾಗಾಗಿ, ಆ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌  ನಾಯರ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT