ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐ ನೂತನ ಅಧ್ಯಕ್ಷರಾಗಿ ಚಲ್ಲ ಶ್ರೀನಿವಾಸುಲು ಸೆಟ್ಟಿ ಆಯ್ಕೆ

Published 29 ಜೂನ್ 2024, 14:25 IST
Last Updated 29 ಜೂನ್ 2024, 14:25 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ನೂತನ ಅಧ್ಯಕ್ಷರಾಗಿ ಚಲ್ಲ ಶ್ರೀನಿವಾಸುಲು ಸೆಟ್ಟಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಅವರು ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅಂತರರಾಷ್ಟ್ರೀಯ ಬ್ಯಾಂಕಿಂಗ್‌, ಜಾಗತಿಕ ಮಾರುಕಟ್ಟೆ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ.

ಎಸ್‌ಬಿಐ ಅಧ್ಯಕ್ಷ ಸ್ಥಾನದ ಗರಿಷ್ಠ ವಯೋಮಿತಿ 63 ವರ್ಷ. ಆಗಸ್ಟ್‌ 28ರಂದು ಹಾಲಿ ಅಧ್ಯಕ್ಷ ದಿನೇಶ್‌ ಕುಮಾರ್‌ ಖಾರಾ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಹಾಗಾಗಿ, ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೊದಿಂದ (ಎಫ್‌ಎಸ್‌ಐಬಿ) ಸೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.  

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಿರ್ದೇಶಕರನ್ನು ಆಯ್ಕೆ ಮಾಡುವುದು ಈ ಬ್ಯೂರೊದ ಹೊಣೆಯಾಗಿದೆ. ಶನಿವಾರ ಎಸ್‌ಬಿಐ ಅಧ್ಯಕ್ಷ ಸ್ಥಾನಕ್ಕೆ ಮೂವರ ಸಂದರ್ಶನ ನಡೆದಿದ್ದು, ಸೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿದೆ.

‘ಸೆಟ್ಟಿ ಅವರ ಕಾರ್ಯವೈಖರಿ ಮತ್ತು ಅವರ ಸೇವಾನುಭವವನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ’ ಎಂದು ಎಫ್‌ಎಸ್‌ಐಬಿ ತಿಳಿಸಿದೆ.

ಆಯ್ಕೆ ಹೇಗೆ?:

ಎಸ್‌ಬಿಐ ಹಿರಿಯ ವ್ಯವಸ್ಥಾಪಕ ನಿರ್ದೇಶಕರ ಪೈಕಿಯೇ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ವಾಡಿಕೆಯಾಗಿದೆ. ಎಫ್‌ಎಸ್ಐಬಿಯು ಒಬ್ಬರ ಹೆಸರನ್ನು ಪ್ರಧಾನಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಗೆ ಶಿಫಾರಸು ಮಾಡುತ್ತಿದೆ. ಅಂತಿಮವಾಗಿ ಈ ಸಮಿತಿಯು ಆಯ್ಕೆಗೆ ಮುದ್ರೆ ಒತ್ತುತ್ತದೆ.

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಅವರು ಸದ್ಯ ಎಫ್‌ಎಸ್‌ಐಬಿ ಅಧ್ಯಕ್ಷರಾಗಿದ್ದಾರೆ. ಹಣಕಾಸು ಸೇವೆಗಳ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಕಾರ್ಯದರ್ಶಿ, ಆರ್‌ಬಿಐನ ಡೆಪ್ಯುಟಿ ಗವರ್ನರ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾರ್ಮಸ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾ‍ಪಕ ನಿರ್ದೇಶಕ ಅನಿಮೇಶ್ ಚೌಹಾಣ್, ಆರ್‌ಬಿಐನ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ದೀಪಕ್‌ ಸಿಂಘಾಲ್‌, ಐಎನ್‌ಜಿ ವೈಶ್ಯ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ಭಂಡಾರಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ಮೂರು ದಶಕದ ಅನುಭವ

ಸೆಟ್ಟಿ ಅವರು ಬಿಎಸ್‌ಸಿ (ಕೃಷಿ) ಪದವಿ ಪಡೆದಿದ್ದಾರೆ. 1988ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಎಸ್‌ಬಿಐಗೆ ಸೇರಿದರು. ಮೂರು ದಶಕಗಳಿಂದ ಬ್ಯಾಂಕ್‌ನ ಕಾರ್ಪೊರೇಟ್ ಕ್ರೆಡಿಟ್‌ ರಿಟೇಲ್‌ ಡಿಜಿಟಲ್‌ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 2020ರಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾದರು. ಕೇಂದ್ರ ಸರ್ಕಾರ ರಚಿಸಿದ ಹಲವು ಕಾರ್ಯಪಡೆ ಮತ್ತು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆಯನ್ನೂ ಹೊಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT