ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರತ್ತ ಯುವಕರ ಚಿತ್ತ: ಭದ್ರತಾ ಪಡೆ ಕಳವಳ

ಯುವಜನರನ್ನು ಸೆಳೆಯಲು ಮೃತ ಉಗ್ರರ ಅಂತ್ಯಕ್ರಿಯೆಯೇ ವೇದಿಕೆ
Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ಮುಸ್ಲಿಮರ ಪವಿತ್ರ ರಮ್ಜಾನ್‌ ತಿಂಗಳಲ್ಲಿ ಸೇನೆಯು ಏಕಪಕ್ಷೀಯವಾಗಿ ಘೋಷಿಸಿದ ಕದನವಿರಾಮದಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನಾ ತಡೆ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೆ, ಈ ಅವಧಿಯಲ್ಲಿ ಸ್ಥಳೀಯ ಯುವಕರನ್ನು ಭಯೋತ್ಪಾದನಾ ಗುಂಪುಗಳಿಗೆ ಸೇರಿಸಿಕೊಳ್ಳುವ ಚಟುವಟಿಕೆ ತೀವ್ರಗೊಂಡಿದೆ ಎಂದು ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ.

80ಕ್ಕೂ ಹೆಚ್ಚು ಕಾಶ್ಮೀರಿ ಯುವಕರನ್ನು ಭಯೋತ್ಪಾದನಾ ಗುಂಪುಗಳಿಗೆ ಸೇರಿಸಿಕೊಳ್ಳಲಾಗಿದೆ. ಗಡಿ ನಿಯಂತ್ರಣ ರೇಖೆಯ ವಿವಿಧ ಭಾಗಗಳಲ್ಲಿ ಉಗ್ರರ ಒಳನುಸುಳುವಿಕೆ ತೀವ್ರಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ಸೂಕ್ಷ್ಮವಾಗಿರುವ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಹೆಚ್ಚು ಯುವಕರು ಉಗ್ರಗಾಮಿ ಗುಂಪುಗಳನ್ನು ಸೇರಿಕೊಂಡಿದ್ದಾರೆ. ಕಾಶ್ಮೀರ ಐಎಸ್‌ ಮತ್ತು ಅಲ್‌ ಕೈದಾ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಿರುವ ಅನ್ಸಾರ್‌ ಘಜ್ವತ್‌ ಉಲ್‌ ಹಿಂದ್‌ ಗುಂಪುಗಳಿಗೆ ಹೆಚ್ಚು ಜನರು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಐಡಿ ವರದಿ: ಯುವಕರು ಭಯೋತ್ಪಾ ದನಾ ಗುಂಪುಗಳನ್ನು ಸೇರುತ್ತಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸಿಐಡಿ ವರದಿಯೊಂದನ್ನು ಸಿದ್ಧಪಡಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ. ಉಗ್ರಗಾಮಿ ಗುಂಪುಗಳಲ್ಲಿ ಸ್ಥಳೀಯರು ಸಕ್ರಿಯವಾಗುತ್ತಿರುವುದು ಹೆಚ್ಚುತ್ತಿದೆ. ಹಾಗಾಗಿಯೇ, ಭದ್ರತಾ ಪಡೆಗಳಿಂದ ಭಯೋತ್ಪಾದನಾ ತಡೆ ಕಾರ್ಯಾಚರಣೆ ತೀವ್ರವಾಗಿದ್ದರೂ ಭಯೋತ್ಪಾದನೆ ಹೆಚ್ಚುತ್ತಲೇ ಇದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಭಯೋತ್ಪಾದನೆ ತಡೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ‍ಪಡೆಗಳ ಮೇಲೆ ಸ್ಥಳೀಯರು ದಾಳಿ ನಡೆಸುತ್ತಿರುವುದು ಹೆಚ್ಚಳವಾಗಿದೆ. ಹಾಗೆಯೇ, ಉಗ್ರರು ಕಾರ್ಯಾಚರಣೆಯಲ್ಲಿ ಸತ್ತರೆ ಅವರ ಅಂತಿಮ ಯಾತ್ರೆ ಮತ್ತು ಅಂತ್ಯಕ್ರಿಯೆಯನ್ನು ಅತ್ಯಂತ ವೈಭವದಿಂದ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ಜನರನ್ನು ನೇಮಕ ಮಾಡಿಕೊಳ್ಳಲು ಮತ್ತು ಯುವಕರನ್ನು ಭಯೋತ್ಪಾದನೆಯತ್ತ ಆಕರ್ಷಿಸಲು ಸ್ಥಳೀಯ ಉಗ್ರರ ಸಾವನ್ನು ಬಳಸಿಕೊಳ್ಳಲಾಗುತ್ತಿದೆ. ಉಗ್ರರ ಅಂತ್ಯಕ್ರಿಯೆಯಲ್ಲಿ ಗುಂಡು ಹಾರಿಸಿಯೇ ಅಂತಿಮ ನಮನ ಸಲ್ಲಿಸಲಾಗುತ್ತಿದೆ. ಇದು ಕಾಶ್ಮೀರದಲ್ಲಿ ಭಾರಿ ಸಂಖ್ಯೆಯಲ್ಲಿ ಉಗ್ರರು ಇದ್ದಾರೆ ಎಂಬುದನ್ನು ಸೂಚಿಸುತ್ತದೆ.

ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗವಹಿಸುತ್ತಿರುವುದು ಸ್ಥಳೀಯರ ಜತೆಗೆ ಸಂವಹನ ನಡೆಸಲು ಅವರಿಗೆ ಅವಕಾಶ ಒದಗಿಸುತ್ತದೆ. ಈ ಸಂವಹನವೇ ಹೆಚ್ಚು ಹೆಚ್ಚು ಯುವಕರು ಉಗ್ರರ ಗುಂಪುಗಳನ್ನು ಸೇರಲು ವೇದಿಕೆ ಸಿದ್ಧಪಡಿಸುತ್ತದೆ ಎಂದು ಸಿಐಡಿ ವರದಿ ಎಚ್ಚರಿಕೆ ನೀಡಿದೆ.

ಐಪಿಎಸ್‌ ಅಧಿಕಾರಿ ಸಹೋದರ ಉಗ್ರ?

ಐಪಿಎಸ್‌ ಅಧಿಕಾರಿ ಇನಾಮುಲ್‌ ಹಕ್‌ ಮೆಂಗ್ನೂ ಅವರ ಸಹೋದರ, ಯುನಾನಿ ವೈದ್ಯ ಸಂಶುಲ್ ಹಕ್‌ ಮೆಂಗ್ನೂ ಇತ್ತೀಚೆಗೆ ಶೋಪಿಯಾನ್‌ನಿಂದ ನಾಪತ್ತೆಯಾಗಿದ್ದಾರೆ. ಅವರು ಉಗ್ರರ ಜತೆ ಸೇರಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಶೋಪಿಯಾನ್‌ ಮತ್ತು ಪುಲ್ವಾಮಾ ಜಿಲ್ಲೆಗಳಿಂದ ಇತ್ತೀಚಿನ ದಿನಗಳಲ್ಲಿ 16 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ಎಷ್ಟು ಮಂದಿ ಉಗ್ರಗಾಮಿ ಗುಂಪುಗಳನ್ನು ಸೇರಿರಬಹುದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಮೇನಲ್ಲಿ 20 ಯುವಕರು ಭಯೋತ್ಪಾದನಾ ಗುಂಪುಗಳಿಗೆ ಸೇರಿದ್ದರು. ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೊಮಾದ 4ನೇ ಸೆಮಿಸ್ಟರ್‌ನ ರವೂಫ್‌ ಎಂಬ ಯುವಕನೂ ಇದರಲ್ಲಿ ಸೇರಿದ್ದಾನೆ.

ರಕ್ತಪಾತದಿಂದ ರಕ್ಷಿಸಿ: ಮೆಹಬೂಬಾ

ಮಾತುಕತೆಯಲ್ಲಿ ಭಾಗವಹಿಸಿ, ರಾಜ್ಯವನ್ನು ರಕ್ತಪಾತದಿಂದ ರಕ್ಷಿಸಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರತ್ಯೇಕತಾವಾದಿಗಳನ್ನು ಕೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಕದನವಿರಾಮ ಘೋಷಿಸಿದೆ. ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಇಂತಹ ಅವಕಾಶ ಯಾವಾಗಲೂ ಸಿಗುವುದಿಲ್ಲ ಎಂದು ಮೆಹಬೂಬಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಾತುಕತೆಯ ಆಹ್ವಾನದ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಯೋಚಿಸುವಂತೆ ಅವರು ಹೇಳಿದ್ದಾರೆ.

‘ಮುಖ್ಯವಾಹಿನಿಯಲ್ಲಿ ಇಲ್ಲದ ಕೆಲವು ಗುಂಪುಗಳಿವೆ. ಅವರಿಗೆ ಬೇರೆಯದೇ ಆದ ಕಾರ್ಯಸೂಚಿ ಇದ್ದರೆ ಈಗ ಅವರಿಗೊಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಿಸಬಹುದು. ಕಾಶ್ಮೀರದ ಸಮಸ್ಯೆಗೆ ರಾಜಕೀಯ ಪರಿಹಾರ ಸಾಧ್ಯ ಎಂಬುದು ನಮ್ಮ ದೃಢ ನಂಬಿಕೆ. ಸೇನೆ ಅಥವಾ ಪೊಲೀಸರು ಈ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಮೆಹಬೂಬಾ ಅಭಿಪ್ರಾಯಪಟ್ಟಿದ್ದಾರೆ.

**

ಯುವಕರು ಏಕೆ ಕಲ್ಲು ತೂರಾಟ ನಡೆಸುತ್ತಿದ್ದಾರೆ? ಕಲ್ಲು ಅಥವಾ ಬಂದೂಕು ಸಂಸ್ಕೃತಿಯಿಂದ ಹೊರಗೆ ಬರುವ ದಾರಿಯನ್ನು ನಾವು ಯುವಕರಿಗೆ ತೋರಿಸಬೇಕಿದೆ.
 –ಮೆಹಬೂಬಾ ಮುಫ್ತಿ

**

ಭಯೋತ್ಪಾದನೆ ತಡೆ ಸಿಬ್ಬಂದಿ ಮೇಲೆ ಸ್ಥಳೀಯರ ದಾಳಿ, ಉಗ್ರರು ಸತ್ತರೆ ಅವರ ಶವಗಳ ವೈಭವೋಪೇತ ಮೆರವಣಿಗೆ ಇತ್ತೀಚೆಗೆ ತೀವ್ರವಾಗಿ ಹೆಚ್ಚಿದೆ‌
 – ಜಮ್ಮು ಕಾಶ್ಮೀರ ಸಿಐಡಿ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT