ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅದಾನಿ ಸಂಬಳ ₹ 9.26 ಕೋಟಿ; ಕಂಪನಿಯ ಕಾರ್ಯ ನಿರ್ವಾಹಕರಿಗಿಂತಲೂ ಕಡಿಮೆ

Published 23 ಜೂನ್ 2024, 15:51 IST
Last Updated 23 ಜೂನ್ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾದ ಗೌತಮ್‌ ಅದಾನಿ, 2023–24ನೇ ಆರ್ಥಿಕ ವರ್ಷದಲ್ಲಿ ₹ 9.26 ಕೋಟಿ ಸಂಬಳ ಪಡೆದಿದ್ದಾರೆ. ಇದು ಕಾರ್ಪೊರೇಟ್‌ ವಲಯದ ಮುಖ್ಯಸ್ಥರು ಹಾಗೂ ಅದಾನಿ ಕಂಪನಿಗಳ ಕಾರ್ಯ ನಿರ್ವಾಹಕರು ಪಡೆಯುವ ಸಂಬಳಕ್ಕಿಂತಲೂ ಕಡಿಮೆಯಿದೆ. 

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಎರಡು ಕಂಪನಿಗಳಿಂದ ಇಷ್ಟು ಮೊತ್ತದ ಸಂಬಳ ಪಡೆದಿದ್ದಾರೆ. 

ಅದಾನಿ ಎಂಟರ್‌ಪ್ರೈಸಸ್‌ನಿಂದ ಅವರಿಗೆ ₹2.19 ಕೋಟಿ ಸಂಬಳ ಲಭಿಸಿದೆ. ವಿಶೇಷ ಸವಲತ್ತು, ಭತ್ಯೆ ರೂಪದಲ್ಲಿ ₹27 ಲಕ್ಷ ಪಡೆದಿದ್ದಾರೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 3ರಷ್ಟು ಏರಿಕೆಯಾಗಿದೆ. ಅದಾನಿ ಪೋರ್ಟ್ಸ್‌ ಕಂಪನಿಯಿಂದ ಸಂಬಳದ ರೂಪದಲ್ಲಿ ₹6.8 ಕೋಟಿ ‍ಪಾವತಿಸಲಾಗಿದೆ.

ಅದಾನಿ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯ ನಿರ್ವಾಹಕ ಹಾಗೂ ನಿರ್ದೇಶಕ ವಿನಯ್‌ ಪ್ರಕಾಶ್‌ ಅವರ ವಾರ್ಷಿಕ ಸಂಬಳ ₹89.37 ಕೋಟಿ ಇದೆ. ಗ್ರೂಪ್‌ ಸಿಎಫ್‌ಒ ಜುಗೇಶಿಂದರ್ ಸಿಂಗ್ ₹9.45 ಕೋಟಿ ಸಂಬಳ ಪಡೆಯುತ್ತಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ವಾರ್ಷಿಕ ₹15 ಕೋಟಿ ಸಂಬಳ ಪಡೆಯುತ್ತಿದ್ದರು. ಕೋವಿಡ್‌ ಸಾಂಕ್ರಾಮಿಕದ ವೇಳೆ ಸ್ವಯಂಪ್ರೇರಣೆಯಿಂದ ಕಂಪನಿಗೆ ಬಿಟ್ಟು ಕೊಟ್ಟಿದ್ದರು. ಇಲ್ಲಿಯವರೆಗೂ ಅವರು ಸಂಬಳ ಪಡೆದಿಲ್ಲ ಎಂದು ಹೇಳಲಾಗಿದೆ. 

ದೂರಸಂಪರ್ಕ ಕ್ಷೇತ್ರದ ದಿಗ್ಗಜ ಸುನಿಲ್‌ ಭಾರ್ತಿ ಮಿತ್ತಲ್‌ (₹16.7 ಕೋಟಿ), ಬಜಾಜ್‌ ಆಟೊದ ರಾಜೀವ್‌ ಬಜಾಜ್‌ (₹53.7 ಕೋಟಿ), ಹೀರೊ ಮೋಟೊಕಾರ್ಪ್‌ನ ಪವನ್‌ ಮುಂಜಾಲ್‌ (₹80 ಕೋಟಿ), ಎಲ್‌ ಆ್ಯಂಡ್‌ ಟಿ ಮುಖ್ಯಸ್ಥ ಎನ್‌.ಎಸ್‌. ಸುಬ್ರಮಣ್ಯನ್‌, ಇನ್ಫೊಸಿಸ್‌ ಸಿಇಒ ಸಲೀಲ್ ಪರೇಖ್ ಅವರಿಗಿಂತಲೂ ಗೌತಮ್‌ ಅದಾನಿ ಸಂಬಳ ಕಡಿಮೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT