ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ವಸ್ತುಗಳ ರಿಪೇರಿ ಹಕ್ಕು: ಕೇಂದ್ರದಿಂದ ರೂಪುರೇಷೆ

Last Updated 14 ಜುಲೈ 2022, 16:14 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರಿಗೆ ತಾವು ಖರೀದಿಸುವ ವಸ್ತುಗಳ ರಿಪೇರಿಯ ಹಕ್ಕನ್ನು ಖಾತರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.

ಉತ್ಪನ್ನದ ರಿಪೇರಿಯನ್ನು ಗ್ರಾಹಕರೇ ಮಾಡಿಕೊಳ್ಳಲು ಅಥವಾ ಬೇರೆಯವರಿಂದ ಮಾಡಿಸಲು ಬೇಕಿರುವ ಮಾಹಿತಿಯನ್ನು ಕಂಪನಿಗಳು ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಕಾರು, ಮೊಬೈಲ್‌ ಮತ್ತು ಇತರೆ ಸರಕುಗಳ ರಿಪೇರಿ ಮತ್ತು ಅವುಗಳ ಬಿಡಿಭಾಗಗಳ ಮಾರುಕಟ್ಟೆಯಲ್ಲಿ ತಯಾರಕರು ಏಕಸ್ವಾಮ್ಯ ಹೊಂದುವುದನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ.

ಹೆಚ್ಚುವರಿ ಕಾರ್ಯದರ್ಶಿ ನಿಧಿ ಖೇರ್‌ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದು, ‘ರಿಪೇರಿ ಹಕ್ಕು’ ಕುರಿತ ರೂಪುರೇಷೆಯನ್ನು ಅದು ಸಿದ್ಧಪಡಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ನಿರ್ದಿಷ್ಟ ವಸ್ತುವನ್ನು ಉತ್ಪಾದಿಸುವ ಕಂಪನಿಯ ಅಧಿಕೃತ ಸೇವಾ ಕೇಂದ್ರಗಳಲ್ಲಿ ರಿಪೇರಿ ಮಾಡಿಸದೇ ಇದ್ದರೆ ಅದರ ವಾರಂಟಿ ಪ್ರಯೋಜನಗಳು ಗ್ರಾಹಕರಿಗೆ ಸಿಗುವುದಿಲ್ಲ ಎಂದು ಹಲವು ಉತ್ಪನ್ನಗಳ ವಾರಂಟಿ ಕಾರ್ಡ್‌ನಲ್ಲಿ ನಮೂದಿಸಲಾಗಿರುತ್ತದೆ.

ಗ್ರಾಹಕರು ಒಂದು ವಸ್ತುವನ್ನು ಖರೀದಿಸಿದ ನಂತರ ಅದನ್ನು ಆತ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಗೆ ರಿಪೇರಿ ಮತ್ತು ಬದಲಾವಣೆ ಮಾಡಿಸುವಂತೆ ಆಗಬೇಕು ಎನ್ನುವುದೇ ‘ರಿಪೇರಿ ಹಕ್ಕು’ ಜಾರಿಗೆ ತರುವುದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದೆ.

ರಿಪೇರಿಯ ಹಕ್ಕಿನ ಹಿಂದೆ ಒಂದು ತರ್ಕ ಇದೆ. ಗ್ರಾಹಕ ಉತ್ಪನ್ನವೊಂದನ್ನು ಖರೀದಿಸಿದಾಗ, ಆತ ಅದರ ಸಂಪೂರ್ಣ ಮಾಲೀಕನಾಗುತ್ತಾನೆ. ಅದನ್ನು ನ್ಯಾಯಸಮ್ಮತ ಬೆಲೆಗೆ ರಿಪೇರಿ ಮಾಡಿಸಿಕೊಳ್ಳುವ ಹಾಗೂ ಅದರಲ್ಲಿ ಬದಲಾವಣೆ ಮಾಡಿಕೊಳ್ಳುವ ಅಧಿಕಾರವೂ ಇರಬೇಕು. ಆತ ತಯಾರಕರ ಮರ್ಜಿಯಲ್ಲಿ ಇರಬಾರದು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ರಿಪೇರಿ ಹಕ್ಕು ಇರಬೇಕಾದ ಪ್ರಮುಖ ವಲಯಗಳನ್ನು ಸಮಿತಿಯು ಜುಲೈ 13ರ ಸಭೆಯಲ್ಲಿ ಗುರುತಿಸಿದೆ. ಕೃಷಿ ಉಪಕರಣಗಳು, ಮೊಬೈಲ್ ಫೋನ್, ಟ್ಯಾಬ್‌ಗಳು, ವಾಹನಗಳಲ್ಲಿ ಬಳಸುವ ಸಲಕರಣೆಗಳನ್ನು ಗುರುತಿಸಲಾಗಿದೆ.

ಉ‍ಪಕರಣಗಳ ರಿಪೇರಿಗೆ ಅಗತ್ಯವಿರುವ ಬಿಡಿಭಾಗಗಳು ಹಾಗೂ ಸಲಕರಣೆಗಳು ಇತರರಿಗೂ ಲಭ್ಯವಾಗುವಂತೆ ಕಂಪನಿಗಳು ಮಾಡಬೇಕು. ಆಗ, ಸಣ್ಣಪುಟ್ಟ ಸಮಸ್ಯೆಗಳು ಎದುರಾದರೆ ರಿ‍ಪೇರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಷಯವೂ ಪ್ರಸ್ತಾಪವಾಗಿದೆ. ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದಲ್ಲಿ ರಿಪೇರಿಯ ಹಕ್ಕನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT