ಜಿಎಸ್‌ಟಿ ದರ ಕಡಿತ: 21ಕ್ಕೆ ನಿರ್ಧಾರ

7
ಕೈಮಗ್ಗ, ಕರಕುಶಲ ಉತ್ಪನ್ನ, ಸ್ಯಾನಿಟರಿ ನ್ಯಾಪ್‌ಕಿನ್ಸ್ ಹೊರೆ ಇಳಿಕೆ?

ಜಿಎಸ್‌ಟಿ ದರ ಕಡಿತ: 21ಕ್ಕೆ ನಿರ್ಧಾರ

Published:
Updated:

ನವದೆಹಲಿ: ಇದೇ 21ರಂದು ನಡೆಯಲಿರುವ ಸಭೆಯಲ್ಲಿ ಹಲವಾರು ಸರಕುಗಳ ಮೇಲಿನ ತೆರಿಗೆ ಹೊರೆ ತಗ್ಗಿಸುವುದನ್ನು ಜಿಎಸ್‌ಟಿ ಮಂಡಳಿಯು ಪರಿಗಣನೆಗೆ ತೆಗೆದುಕೊಳ್ಳಲಿದೆ.

ಕರಕುಶಲ, ಕೈಮಗ್ಗದ ಸರಕುಗಳು, ಸ್ಯಾನಿಟರಿ ನ್ಯಾಪ್‌ಕಿನ್ಸ್‌ ಸೇರಿದಂತೆ ಕೆಲ ಸೇವೆಗಳ ಮೇಲಿನ ತೆರಿಗೆ ದರ ಕಡಿಮೆ ಮಾಡುವುದರ ಬಗ್ಗೆ ಸಭೆ ನಿರ್ಧಾರಕ್ಕೆ ಬರಲಿದೆ.

ಆರೋಗ್ಯಕ್ಕೆ ಮತ್ತು ಅಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಸರಕುಗಳ ಮೇಲಿನ ತೆರಿಗೆ ದರ ಕಡಿತ ಮಾಡಲು ಹಲವಾರು ಉದ್ದಿಮೆ ಸಂಘಟನೆಗಳು ಒತ್ತಾಯಿಸುತ್ತಿವೆ.

ಉದ್ದಿಮೆ ವಲಯದ ಎಲ್ಲ ಭಾಗಿದಾರರಿಂದ ಕೇಳಿ ಬರುತ್ತಿರುವ ಹಕ್ಕೊತ್ತಾಯದ ಕಾರಣಕ್ಕೆ ಜಿಎಸ್‌ಟಿ ಮಂಡಳಿಯು ಹಲವಾರು ಸರಕುಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವುದನ್ನು ಈ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಿದೆ.

ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ಕಡಿಮೆ ವರಮಾನ ಸಂಗ್ರಹಕ್ಕೆ ಕಾರಣವಾಗುತ್ತಿರುವ ಸರಕುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ, ಕರಕುಶಲ ಮತ್ತು ಕೈಮಗ್ಗದ ಬಹುತೇಕ ಸರಕುಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ  ಶೇ 12ರಷ್ಟು ಜಿಎಸ್‌ಟಿ ಜಾರಿಯಲ್ಲಿ ಇದೆ. ಈ ಸರಕುಗಳಿಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಬೇಕೆಂಬ ಹಕ್ಕೊತ್ತಾಯ ಕೇಳಿ ಬರುತ್ತಿದೆ.

ಜಿಎಸ್‌ಟಿ ವ್ಯವಸ್ಥೆಯಡಿ ಸದ್ಯಕ್ಕೆ ನಾಲ್ಕು ಹಂತದ (ಶೇ 5,12,18 ಮತ್ತು 28) ತೆರಿಗೆ ವಿಧಿಸಲಾಗುತ್ತಿದೆ.

ಈ ವರ್ಷದ ಜನವರಿಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯು 54 ಸೇವೆಗಳು ಮತ್ತು 29 ಸರಕುಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಿತ್ತು. ಹಿಂದಿನ ವರ್ಷದ ನವೆಂಬರ್‌ನಲ್ಲಿ 178 ಸರಕುಗಳನ್ನು ಗರಿಷ್ಠ ಮಟ್ಟದ (ಶೇ 28) ತೆರಿಗೆ ದರಗಳಿಂದ ಕೈಬಿಟ್ಟಿತ್ತು. ಪಂಚತಾರಾ ಹೋಟೆಲ್‌ ವ್ಯಾಪ್ತಿಗೆ ಬರದ ರೆಸ್ಟೊರೆಂಟ್ಸ್‌ಗಳ ಮೇಲಿನ ತೆರಿಗೆಯನ್ನು ಶೇ 5ಕ್ಕೆ ಇಳಿಸಿತ್ತು.

ತೆರಿಗೆ ವರಮಾನ ಸಂಗ್ರಹ ಹೆಚ್ಚಿದಂತೆ  ತೆರಿಗೆ ದರಗಳನ್ನು ಹೆಚ್ಚೆಚ್ಚು ಸರಳೀಕರಣ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದೆ.

ಜಿಎಸ್‌ಟಿ ಜಾರಿಯ ಮೊದಲ ವರ್ಷದಲ್ಲಿ ತಿಂಗಳ ಸರಾಸರಿ ತೆರಿಗೆ ವರಮಾನ ಸಂಗ್ರಹವು ₹ 89,885 ಕೋಟಿಗಳಷ್ಟಿದೆ. ಈ ವರ್ಷದ ಜೂನ್‌ನಲ್ಲಿ ₹ 95,610 ಕೋಟಿ ಸಂಗ್ರಹವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !