ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ಶೇ 15ರಷ್ಟು ಏರಿಕೆ

Last Updated 1 ಜನವರಿ 2023, 16:19 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾಗುವ ವರಮಾನವು ಡಿಸೆಂಬರ್ ತಿಂಗಳಲ್ಲಿ ಶೇಕಡ 15ರಷ್ಟು ಹೆಚ್ಚಾಗಿದ್ದು, ₹ 1.49 ಲಕ್ಷ ಕೋಟಿಗೆ ತಲುಪಿದೆ. ತಯಾರಿಕಾ ಚಟುವಟಿಕೆಗಳು ಹೆಚ್ಚಾಗಿರುವುದನ್ನು, ಬೇಡಿಕೆ ಸುಧಾರಿಸಿರುವುದನ್ನು ಮತ್ತು ತೆರಿಗೆ ಪಾವತಿಯಲ್ಲಿ ಸುಧಾರಣೆ ಆಗಿರುವುದನ್ನು ಇದು ತೋರಿಸುತ್ತಿದೆ.

ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ವರಮಾನ ಸಂಗ್ರಹವು ಈಗ ಸತತ ಹತ್ತು ತಿಂಗಳುಗಳಿಂದ ₹ 1.40 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ನವೆಂಬರ್‌ನಲ್ಲಿ ₹ 1.46 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಡಿಸೆಂಬರ್‌ನಲ್ಲಿ ಒಟ್ಟು ₹ 1,49,507 ಕೋಟಿ ವರಮಾನ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಪಾಲು ₹ 26,711 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಪಾಲು ₹ 33,357 ಕೋಟಿ, ಏಕೀಕೃತ ಜಿಎಸ್‌ಟಿ (ಐಜಿಎಸ್‌ಟಿ) ಪಾಲು ₹ 78,434 ಕೋಟಿ, ಸೆಸ್‌ ಪಾಲು ₹ 11,005 ಕೋಟಿ’ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

2021ರ ಡಿಸೆಂಬರ್‌ನಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ 2022ರ ಡಿಸೆಂಬರ್‌ ತಿಂಗಳ ವರಮಾನ ಸಂಗ್ರಹವು ಶೇ 15ರಷ್ಟು ಹೆಚ್ಚು.

ತೆರಿಗೆ ವಂಚಿಸುತ್ತಿದ್ದವರನ್ನು ಹಾಗೂ ತೆರಿಗೆ ಕಾನೂನುಗಳನ್ನು ಸರಿಯಾಗಿ ಪಾಲಿಸದವರನ್ನು ಗುರುತಿಸಲು ತೆರಿಗೆ ಅಧಿಕಾರಿಗಳಿಗೆ ಸಾಧ್ಯವಾಗಿದೆ ಎಂದು ಎನ್‌ಎ ಶಾ ಅಸೋಸಿಯೇಟ್ಸ್‌ನ ಪಾಲುದಾರ ಪರಾಗ್ ಮೆಹ್ತಾ ಹೇಳಿದ್ದಾರೆ.

‘ತೆರಿಗೆ ಸಂಗ್ರಹವು ಕಳೆದ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಹೆಚ್ಚಿದೆ. ಉದ್ದಿಮೆಗಳು ತಮ್ಮ ವಹಿವಾಟು ಗುರಿಯನ್ನು ತಲುಪಲು ಯತ್ನಿಸುತ್ತಿರುವುದು ಕೂಡ ಇದಕ್ಕೆ ಒಂದು ಕಾರಣ’ ಎಂದು ಅವರು ಹೇಳಿದ್ದಾರೆ.

ಹಬ್ಬಗಳ ಋತು ಮುಗಿದಿದ್ದರೂ, ಜಿಎಸ್‌ಟಿ ಅಡಿ ಸರಿಸುಮಾರು ₹ 1.5 ಲಕ್ಷ ಕೋಟಿ ವರಮಾನ ಸಂಗ್ರಹವು ಸಹಜವಾಗುತ್ತಿದೆ ಎಂದು ಕೆಪಿಎಂಜಿ ಸಂಸ್ಥೆಯ ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT