ನವದೆಹಲಿ: ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 8.58ರಷ್ಟು ಹೆಚ್ಚಾಗಿದ್ದು, ₹ 1,974 ಕೋಟಿಗಳಿಗೆ ತಲುಪಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1,818 ಕೋಟಿ ನಿವ್ವಳ ಲಾಭ ಗಳಿಸಿತ್ತು.
ನಿವ್ವಳ ಮಾರಾಟ ₹ 9,931 ಕೋಟಿಗಳಿಂದ ₹ 11,510 ಕೋಟಿಗಳಿಗೆ ಶೇ 15.89ರಷ್ಟು ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
‘ಸದ್ಯದ ಸವಾಲಿನ ಪರಿಸ್ಥಿತಿಯಲ್ಲಿ ನಮ್ಮ ಬೆಳವಣಿಗೆಯು ಸ್ಪರ್ಧಾತ್ಮಕ ಮತ್ತು ಲಾಭದಾಯವಾಗಿದೆ’ ಎಂದು ಕಂಪನಿಯ ಸಿಎಂಡಿ ಸಂಜೀವ್ ಮೆಹ್ತಾ ತಿಳಿಸಿದ್ದಾರೆ.
‘ನಮ್ಮ ಕಾರ್ಯಾಚರಣೆ ಮತ್ತು ಸೇವೆಗಳು ಕೋವಿಡ್‌ಗೂ ಮುಂಚಿನ ಸ್ಥಿತಿಗೆ ಮರಳಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಚೇತರಿಸಿಕೊಂಡಿದೆ. ಆದರೆ, ಮಹಾನಗರಗಳಲ್ಲಿ ಬೇಡಿಕೆ ಮಂದವಾಗಿದೆ. ಕೆಟ್ಟ ದಿನಗಳು ಮುಗಿದಿದ್ದು, ಬೇಡಿಕೆ ಚೇತರಿಸಿಕೊಳ್ಳುವ ಆಶಾವಾದ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.