ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಾಸಿ ಕಾರ್‌ ಬಾಡಿಗೆಗೆ ‘ಹೈಪ್‌’

Last Updated 16 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಸತ್ಯಂ ಕಂಪ್ಯೂಟರ್ಸ್‌ 1995ರಲ್ಲಿ ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ರೀತಿಯಲ್ಲಿ ಕಾರ್ಯಾರಂಭ ಮಾಡಿದಾಗ ಅಲ್ಲಿ ಕೆಲಸ ಮಾಡುತ್ತಿದ್ದ ರಾಘವ್‌ ಬೆಳವಡಿ ಅವರು ಹಲವು ವರ್ಷಗಳ ನಂತರ ತಮ್ಮದೇ ಆದ ಸ್ವಂತ ಸ್ಟಾರ್ಟ್‌ಅಪ್‌ ಆರಂಭಿಸುವವರೆಗೆ ಕ್ರಮಿಸಿದ ದೂರ ಆಸಕ್ತಿದಾಯಕವಾಗಿದೆ. ಮೈಸೂರಿನಲ್ಲಿ 1995ರಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್‌ನಲ್ಲಿ ಮೆಕ್ಯಾನಿಕಲ್‌ ಪದವಿ ಪೂರ್ಣಗೊಳಿಸಿದ ನಂತರ ಸತ್ಯಂ ಸೇರಿದಂತೆ ಇನ್ಫೊಸಿಸ್‌, ವಿಪ್ರೊ ಇನ್ಫೊಟೆಕ್‌ನಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಅಕ್ಸೆಂಚರ್‌ ಇಂಡಿಯಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಕ್ಸೆಂಚರ್‌ನ ಜಾಗತಿಕ ವಹಿವಾಟಿನ ಮುಖ್ಯಸ್ಥರಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದರು. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳ ದಿಗ್ಗಜರ ಒಡನಾಟದಲ್ಲಿದ್ದರು. ಕೃತಕ ಬುದ್ಧಿಮತ್ತೆ ಆಧರಿಸಿದ ವಿಮೆ ವಹಿವಾಟಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಚಾಲನೆ ನೀಡಿದ ಮೊದಲ ಭಾರತೀಯ ಇವರಾಗಿದ್ದಾರೆ.

ಸ್ಟಾರ್ಟ್‌ಅಪ್ ಹಿನ್ನೆಲೆಯಿಂದಲೇ ಬಂದಿರುವ ರಾಘವ್‌ ಬೆಳವಡಿ (44) ಅವರು, ಸ್ಟಾರ್ಟ್‌ಅಪ್‌ಗಳಲ್ಲಿ ಮಾತ್ರ ಸಣ್ಣ, ಸಣ್ಣ ತಂಡಗಳ ಜತೆ ಕೆಲಸ ಮಾಡುವ ವಿಶೇಷ ಅನುಭವ ಸಿಗುತ್ತದೆ ಎನ್ನುತ್ತಾರೆ. ಬೇರೆ ಸಂಸ್ಥೆಗಳ ಉನ್ನತಿಗೆ ದುಡಿಯುವ ಬದಲಿಗೆ ಸ್ವಂತ ಬಲದ ಮೇಲೆ ಹೊಸ ಕಂಪನಿಯನ್ನೇ ಆರಂಭಿಸುವ ಸಾಮರ್ಥ್ಯ ತಮ್ಮಲ್ಲಿ ಇರುವುದನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಈ ನವೋದ್ಯಮಕ್ಕೆ ಕೈ ಹಾಕಿ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ.

ಮದುವೆಯ 50ನೇ ವಾರ್ಷಿಕೋತ್ಸವಕ್ಕೆ ಪಾಲಕರನ್ನು ವಿಲಾಸಿ ಬಿಎಂಡಬ್ಲ್ಯು 5 ಸೀರಿಸ್‌ ಕಾರ್‌ನಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದ್ದ ಔತಣಕೂಟಕ್ಕೆ ಕರೆದುಕೊಂಡು ಹೋಗಲು ರಾಘವ್‌ ಬಯಸಿದ್ದರು. ಸಿದ್ಧರಾಗಿ ನಿಂತಾಗ, ಬಿಎಂಡಬ್ಲ್ಯು ಬದಲಿಗೆ ಮರ್ಸಿಡಿಸ್‌ ಕಾರ್‌ ತಡವಾಗಿ ಮನೆ ಬಾಗಿಲಿಗೆ ಬಂದಿತ್ತು. ತಮ್ಮ ಇಷ್ಟದ ಕಾರ್‌ ಬಾರದಿರುವುದಕ್ಕೆ ಇವರಿಗೆ ತೀವ್ರ ನಿರಾಶೆಯಾಗಿತ್ತು. ಇಂತಹ ಅನುಭವ ಇತರರಿಗೂ ಆಗಿರಬಹುದು. ಅವರಿಗೂ ಐಷಾರಾಮಿ ಕಾರ್‌ನಲ್ಲಿ ಪಯಣಿಸುವ ಉಮೇದು ಇರಬಹುದು. ಕೊನೆಕ್ಷಣದಲ್ಲಿ ಅವರು ಬಯಸಿದ ಕಾರ್‌ನ ಬದಲಿಗೆ ಬೇರೊಂದು ಕಾರ್‌ ಬಂದಿರಬಹುದು ಎನ್ನುವ ಆಲೋಚನೆಯೇ ದುಬಾರಿ, ಐಷಾರಾಮಿ ಕಾರ್‌ಗಳ ಬಾಡಿಗೆ ಒದಗಿಸುವ ನವೋದ್ಯಮ ಆರಂಭಿಸುವ ಆಲೋಚನೆಗೆ ಕಾರಣವಾಗಿತ್ತು. ಓಲಾ, ಉಬರ್‌ ಮತ್ತಿತರ ಟ್ಯಾಕ್ಸಿಗಳು ಸುಲಭವಾಗಿ ಬಾಡಿಗೆಗೆ ದೊರೆಯುವಾಗ ವಿಲಾಸಿ ಕಾರ್‌ಗಳಿಗೆ ಮೀಸಲಾದ ಸ್ಟಾರ್ಟ್‌ಅಪ್‌ ಆರಂಭಿಸುವುದರ ಸಾಧಕ – ಬಾಧಕಗಳ ಬಗ್ಗೆ ಸಾಕಷ್ಟು ಆಲೋಚನೆ ಮಾಡಿಯೇ ಅವರು ಈ ನವೋದ್ಯಮಕ್ಕೆ ಕೈ ಹಾಕಿದ್ದರು. ಅವರು ಕಂಡ ಕನಸುಗಳೆಲ್ಲ ಇವರ ಕೈ ಹಿಡಿದು ಮುನ್ನಡೆಸುತ್ತಿವೆ.

ಕಾರ್ಪೊರೇಟ್‌ ದಿಗ್ಗಜರು, ರಾಜಕೀಯ ಮುಖಂಡರು, ವಿದೇಶಿ ಗಣ್ಯರು ಬೆಂಗಳೂರಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಮದುವೆ, ಜನ್ಮ ದಿನಾಚರಣೆ, ವರ್ಷಾಚರಣೆ, ಔಣತಕೂಟ ಮತ್ತಿತರ ಕಾರಣಗಳಿಗೆ ಐಷಾರಾಮಿ ಕಾರ್‌ ಬಳಸುವ ಅಸಂಖ್ಯ ಅವಕಾಶಗಳು ಒದಗುತ್ತಲೇ ಇರುತ್ತವೆ. ದುಬಾರಿ ಬೆಲೆಯ ಕಾರ್‌ಗಳನ್ನು ಖರೀದಿಸುವ ಸಾಮರ್ಥ್ಯ ಇಲ್ಲದವರಿಗೂ ಬದುಕಿನಲ್ಲಿ ಒಂದಲ್ಲ ಬಾರಿ ಇಂತಹ ಕಾರ್‌ಗಳಲ್ಲಿ ಪ್ರಯಾಣಿಸುವ ಕನಸು ಹೊಂದಿರುತ್ತಾರೆ. ಕೆಲವರಿಗೆ ಪ್ರತಿ ದಿನ ಹೊಸ ಹೊಸ ಐಷಾರಾಮಿ ಕಾರ್‌ಗಳಲ್ಲಿ ಪಯಣಿಸುವ ಉಮೇದು ಇರುತ್ತದೆ. ಅಂತಹವರ ಅಗತ್ಯಗಳನ್ನು ವ್ಯವಸ್ಥಿತವಾಗಿ ಪಂಚತಾರಾ ಸಂಸ್ಕೃತಿ ಮಟ್ಟದಲ್ಲಿಯೇ ಒದಗಿಸಿದರೆ ಈ ನವೋದ್ಯಮ ಖಂಡಿತವಾಗಿಯೂ ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಇದಕ್ಕೆ ಚಾಲನೆ ನೀಡಿದ್ದರು.

ಏನಾದರೂ ವಿಭಿನ್ನವಾಗಿ ಮಾಡಬೇಕು ಎನ್ನುವ ತುಡಿತ ಅವರಲ್ಲಿ ಮೊದಲಿನಿಂದಲೂ ಇದ್ದೇ ಇತ್ತು. ಅದನ್ನು ವಿಲಾಸಿ ಕಾರ್‌ಗಳ ಬಾಡಿಗೆ ನೀಡುವ ಸಂಸ್ಥೆ ಹೈಪ್‌ (Hype) ಆರಂಭಿಸುವ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ.

‘ಅನುಕೂಲತೆ, ಸುರಕ್ಷತೆ ಮತ್ತು ಕೈಗೆಟುಕುವ ಬೆಲೆ... ಈ ಮೂರು ಧ್ಯೇಯಗಳನ್ನು ಆಧರಿಸಿ ಗ್ರಾಹಕರಿಗೆ ವಿಶೇಷ ಪ್ರಯಾಣ ಅನುಭವ ನೀಡಲಾಗುತ್ತಿದೆ. ‘ದೇಶದಲ್ಲಿ ದುಬಾರಿ ಬಾಡಿಗೆ ದರದ ವಿಲಾಸಿ ಕಾರುಗಳಿಗೆ ಬೇಡಿಕೆ ತುಂಬಾ ಇದೆ. ಆದರೆ, ಪೂರೈಕೆ ಕಡಿಮೆ ಇದೆ. ಹೀಗಾಗಿ ಈ ನವೋದ್ಯಮ ಬೆಳೆಯಲು ವಿಪುಲ ಅವಕಾಶಗಳು ಇವೆ’ ಎಂದು ಹೈಪ್‌ ಲಕ್ಸುರಿ ಕಾರ್‌ ರೆಂಟಲ್ಸ್‌ನ ಸ್ಥಾಪಕ ಮತ್ತು ಸಿಇಒ ರಾಘವ್‌ ಬೆಳವಡಿ ಹೇಳುತ್ತಾರೆ.

ಕಾರ್‌ ಬಾಡಿಗೆ ಮಾರುಕಟ್ಟೆಯಲ್ಲಿ ಇಂತಹ ದೊಡ್ಡ ಕೊರತೆ ಇರುವುದು ಅವರ ಸ್ವಂತ ಅನುಭವಕ್ಕೆ ಬಂದಿತ್ತು. ವಿಲಾಸಿ ಕಾರ್‌ಗಳ ಬಾಡಿಗೆ ವಿಷಯದಲ್ಲಿ ಹೆಚ್ಚಿನ ಲೂಟಿ ನಡೆಯುತ್ತಿತ್ತು. ದಕ್ಷ ಸೇವೆಯ ಖಾತರಿನೂ ಇದ್ದಿರಲಿಲ್ಲ. ವಿಶ್ವಾಸಾರ್ಹತೆಯೂ ಇದ್ದಿರಲಿಲ್ಲ. ಬರೀ ಅನಿಶ್ಚಿತತೆ ತುಂಬಿತ್ತು. ಬೇರೆಯವರು ₹ 500 ಹೆಚ್ಚಿಗೆ ಕೊಟ್ಟರೆ ಕೊನೆ ಕ್ಷಣದಲ್ಲಿ ಕೈಕೊಡುವವರೂ ಇದ್ದರು. ಈಗ ಅಂತಹದಕ್ಕೆಲ್ಲ ಕೊನೆ ಬಿದ್ದಿದೆ.

ಇಲ್ಲಿ (Hype) ಆ್ಯ‍ಪ್‌ ಮೂಲಕವೇ ಕಾರ್‌ ಬಾಡಿಗೆ ಪಡೆಯಬಹುದು. ಬೆಂಗಳೂರಿನಲ್ಲಷ್ಟೇ ಅಲ್ಲದೆ, ದೇಶದ 42 ನಗರಗಳಲ್ಲೂ ಈ ಆ್ಯಪ್‌ ನೆರವಿನಿಂದಲೇ ದುಬಾರಿ ಕಾರ್‌ ಬುಕಿಂಗ್‌ ಮಾಡಬಹುದು. ಈ ಕಾರುಗಳು ಸ್ವಯಂ ಚಾಲನೆ ಮತ್ತು ಚಾಲಕನ ಸೇವೆ – ಹೀಗೆ ಎರಡು ಬಗೆಯಲ್ಲಿ ದೊರೆಯಲಿವೆ. ಸ್ವಯಂ ಚಾಲನೆ ದರ ಅಗ್ಗವಾಗಿರಲಿದೆ. ಈ ವಿಲಾಸಿ ಕಾರ್‌ಗಳನ್ನು ಬಾಡಿಗೆಗೆ ಪಡೆಯಲು ₹ 50 ಸಾವಿರ ಠೇವಣಿ ಇರಿಸುವುದು ಕಡ್ಡಾಯ. ಹಣ ಪಾವತಿ ಪೂರ್ಣಗೊಂಡ ನಂತರವೇ ಮನೆ ಬಾಗಿಲಿಗೆ ಕಾರ್ ತಲುಪಿಸಲಾಗುವುದು. ಬೇರೆ ಊರುಗಳಲ್ಲಿ ಇದ್ದರೂ ಸ್ವಯಂ ಚಾಲನೆಗೆ ಅಥವಾ ಚಾಲಕನ ಸೇವೆ ಒಳಗೊಂಡ ಕಾರ್‌ಗಳನ್ನು ಬಾಡಿಗೆ ನೀಡುವ ಸೌಲಭ್ಯ ಇಲ್ಲಿದೆ.

ಕಾರ್‌ಗಳನ್ನು ಬಾಡಿಗೆ ನೀಡುವ ಸಂಸ್ಥೆಗಳಿಗೆ ವಹಿವಾಟು ಒದಗಿಸಿಕೊಡುವ ಮಧ್ಯವರ್ತಿ ಸಂಸ್ಥೆಯಾಗಿ ‘ಹೈಪ್‌’ ಕಾರ್ಯನಿರ್ವಹಿಸಲಿದೆ. ಕಾರ್‌ನ ಗುಣಮಟ್ಟ, ಮಾರ್ಗಮಧ್ಯೆ ತೊಂದರೆಯಾದರೆ, ಬದಲಿ ವಾಹನ ಕಳಿಸಿಕೊಡುವ ಜವಾಬ್ದಾರಿಯನ್ನು ಹೈಪ್‌ ನೋಡಿಕೊಳ್ಳುತ್ತದೆ.

‘ಹೈಪ್‌’ ಸ್ಟಾರ್ಟ್‌ಅಪ್‌ನ ಅನುಕೂಲತೆ ಬರೀ ವಿಲಾಸಿ ಬಾಡಿಗೆ ಕಾರ್‌ ಬುಕಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಹಕರಿಗೆ ವಿಶೇಷ ಅನುಭವ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ವಿಲಾಸಿ ಕಾರ್‌ಗಳ ಬಾಡಿಗೆ ವಿಷಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ನವೋದ್ಯಮ ಸ್ಥಾಪನೆಯಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ವಹಿವಾಟನ್ನು ಗಂಭೀರವಾಗಿ ಪರಿಗಣಿಸಿ ತುಂಬ ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಇದೇ ಕಾರಣಕ್ಕೆ ವಹಿವಾಟು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.

ಇವರ ಈ ಸಾಹಸಕ್ಕೆ ಇವರ ಅಕ್ಕ ಒಂದೂವರೆ ಕೋಟಿ ರೂಪಾಯಿ ಬಂಡವಾಳ ಹಾಕಿ ನೆರವಿಗೆ ನಿಂತಿದ್ದರು. ಸ್ಟಾರ್ಟ್‌ಅಪ್‌ ಕಾರ್ಯಾರಂಭ ಮಾಡಿದಾಗ ಬಳಿಯಲ್ಲಿ 80 ಕಾರ್‌ಗಳಿದ್ದವು. ಈಗ 460ಕ್ಕೂ ಹೆಚ್ಚು ಕಾರ್‌ಗಳಿವೆ. ಬಿಎಂಡಬ್ಲ್ಯು ಕಾರ್‌ ಬಿಎಂಡಬ್ಲ್ಯು ಕಾರ್‌ನ ಬಾಡಿಗೆ 8 ಗಂಟೆಗೆ ₹ 7 ಸಾವಿರ ಇದ್ದರೆ, ರೋಲ್ಸ್‌ರಾಯ್‌ ಕಾರ್‌ಗೆ 8 ಗಂಟೆ 80 ಕಿ. ಮಿ ₹ 70 ಸಾವಿರದವರೆಗೆ ಬಾಡಿಗೆ ಇದೆ. ನಗರದಿಂದ ನಗರಕ್ಕೆ ದರ ಬದಲಾಗುತ್ತದೆ. ಗ್ರಾಹಕರನ್ನು ಒದಗಿಸಿಕೊಟ್ಟಿದ್ದಕ್ಕೆ ಕಾರ್‌ ಬಾಡಿಗೆ ಸಂಸ್ಥೆಗಳು ನೀಡುವ ಕಮಿಷನ್‌ ‘ಹೈಪ್‌’ನ ವರಮಾನದ ಮೂಲವಾಗಿದೆ. ಈ ಕಮಿಷನ್‌ ವಹಿವಾಟಿನ ಸ್ವರೂಪ ಆಧರಿಸಿ ಶೇ 10 ರಿಂದ 25ರವರೆಗೆ ಇರಲಿದೆ.

‘ಇಲ್ಲಿ ಎಷ್ಟು ಲಾಭ ಎನ್ನುವದು ಮುಖ್ಯವಲ್ಲ. ಹೊಸದೊಂದು ಚಿಂತನೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಗ್ರಾಹಕರು, ಹೂಡಿಕೆದಾರರು ಅದರಲ್ಲಿ ಭರವಸೆ ಇಡುವುದರಿಂದ ಸಂಸ್ಥೆಯ ಮಾರುಕಟ್ಟೆ ಮೌಲ್ಯ ವರ್ಧಿಸುತ್ತ ಹೋಗುತ್ತದೆ. ‘ಹೈಪ್‌’ನ ಆರಂಭಿಕ ಹೂಡಿಕೆ ₹ 3.50 ಕೋಟಿ. ಸಂಸ್ಥೆಯ ಒಟ್ಟಾರೆ ವಹಿವಾಟಿನ ಮೌಲ್ಯ ಈಗ ₹ 48 ಕೋಟಿಗೆ ತಲುಪಿದೆ. ಈಗ ₹ 35 ಕೋಟಿ ಹೊಸದಾಗಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ. ಪ್ರಭಾವಿ ಚಿಂತನೆಗೆ ಹೂಡಿಕೆ ಎನ್ನುವ ಇಂಧನ ಬೆರೆಸಿದರೆ ಮಾರುಕಟ್ಟೆಯಲ್ಲಿ ಅದು ಬೀರುವ ಪ್ರಭಾವ ವಿಭಿನ್ನವಾಗಿರುತ್ತದೆ’ ಎಂದು ಬೆಳವಡಿ ಅವರು ಹೇಳುತ್ತಾರೆ.

ಬುಗಾಟಿ ಹೊರತುಪಡಿಸಿ, ಫೆರಾರಿ, ರೋಲ್ಸ್‌ರಾಯ್‌ ಸೇರಿದಂತೆ ವಿಶ್ವದಲ್ಲಿ ಲಭ್ಯ ಇರುವ ಎಲ್ಲ ವಿಲಾಸಿ ಕಾರ್‌ಗಳು ಇಲ್ಲಿ ಬಾಡಿಗೆಗೆ ಲಭ್ಯ ಇವೆ. ಗ್ರಾಹಕರಿಗೆ ತೃಪ್ತಿಕರ ಸೇವೆ ಒದಗಿಸುವುದೇ ‘ಹೈಪ್‌’ನ ಮುಖ್ಯ ಉದ್ದೇಶವಾಗಿದೆ. ದುಬಾರಿ ಕಾರ್‌ನಲ್ಲಿ ಪ್ರಯಾಣಿಸುವ ಅನುಭವವೇ ವಿಶಿಷ್ಟವಾದದ್ದು. ವಿಲಾಸಿ ಕಾರ್‌ಗಳನ್ನು ಸ್ವತಃ ಚಾಲನೆ ಮಾಡಿದರೆ, ಸ್ವಂತ ಕಾರ್‌ ಓಡಿಸುತ್ತಿದ್ದೇನೆ ಅನ್ನೋ ಮನೋಭಾವನೆ ಇರುತ್ತದೆ. ಅದಕ್ಕೆ ದುಬಾರಿ ಬೆಲೆ ತೆರಲು ಸಿದ್ಧರಿರಬೇಕು. ಲಕ್ಸುರಿ ಮತ್ತು ರೆಗ್ಯುಲರ್‌ ಟ್ಯಾಕ್ಸಿ ಉದ್ದಿಮೆ ಮಧ್ಯೆ ಆರೋಗ್ಯಕರ ಅಂತರ ಇರಲೇಬೇಕು. ‘ಹೈಪ್‌’ ಕಾರ್ಯಾರಂಭದ ನಂತರ ವಿಲಾಸಿ ಕಾರ್‌ಗಳ ಬಾಡಿಗೆ ದರ ಶೇ 40ರಷ್ಟು ಅಗ್ಗವಾಗಿದೆ ಎಂದು ಅವರು ಹೇಳುತ್ತಾರೆ.

ಈ ಕಾರ್‌ಗಳ ಚಾಲಕರೆಲ್ಲ ಕಾರ್‌ ಬಾಡಿಗೆ ಸಂಸ್ಥೆಯ ಕಾಯಂ ನೌಕರರು. ಚಾಲಕರೇ ‘ಹೈಪ್‌’ ಬ್ರ್ಯಾಂಡ್‌ ಅನ್ನು ಪ್ರತಿನಿಧಿಸುತ್ತಾರೆ. ಗ್ರಾಹಕರ ಜತೆ ಹೇಗೆ ವರ್ತಿಸಬೇಕು ಎನ್ನುವುದರ ಕುರಿತು ಚಾಲಕರಿಗೆ 148 ನಿಯಮಗಳನ್ನು ಮನದಟ್ಟು ಮಾಡಿಕೊಡಲಾಗಿರುತ್ತದೆ. ಪ್ರತಿಯೊಂದು ವಾಹನಕ್ಕೆ ವಿಶೇಷ ಸಾಫ್ಟ್‌ವೇರ್‌ ಒಳಗೊಂಡ ಜಿಪಿಎಸ್‌ ಸಾಧನ ಜೋಡಿಸಲಾಗಿರುತ್ತದೆ. ಹೀಗಾಗಿ ಕಾರ್‌ ಓಡುವ ವೇಗ, ಇರುವ ತಾಣ, ವಾಹನದಲ್ಲಿ ಇರುವ ಪ್ರಯಾಣಿಕರ ಸಂಖ್ಯೆ ಎಲ್ಲದರ ಮೇಲೆ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡೇ ನಿಗಾ ಇರಿಸಬಹುದು. ಅಮೆರಿಕದಲ್ಲಿ ನ್ಯೂಯಾರ್ಕ್‌, ವಾಷಿಂಗ್ಟನ್‌ ಮತ್ತು ದುಬೈನಲ್ಲಿಯೂ ಸೇವೆ ವಿಸ್ತರಿಸಲು ಉದ್ದೇಶಿಸಿದೆ. ಕ್ರಿಸ್‌ಮಸ್‌ ವೇಳೆಗೆ ದುಬೈನಲ್ಲಿ ಕಾರ್ಯಾರಂಭ ಆಗಲಿದೆ.

ಮೂರು ವರ್ಷಕ್ಕಿಂತ ಹಳೆಯ ವಾಹನಗಳನ್ನು ಇಲ್ಲಿ ಬಳಸುವುದಿಲ್ಲ. ‘ಬಿಲೇನಿಯರ್‌ ಬಾರ್ಬರ್‌’ ಖ್ಯಾತಿಯ ರಮೇಶ್‌ ಬಾಬು ಅವರ ಬಳಿ ಇರುವ ಎಲ್ಲ ವಿಲಾಸಿ ಕಾರ್‌ಗಳೂ ಇಲ್ಲಿವೆ. ರಮೇಶ್‌ ಅವರು ‘ಹೈಪ್‌’ನ ವಹಿವಾಟು ಸಲಹೆಗಾರರೂ ಆಗಿದ್ದಾರೆ.

ಹೈಪ್‌ ಟ್ಯಾಕ್ಸಿ ಆಪರೇಟರ್‌ ಅಲ್ಲ. ಬರೀ ಸಾಫ್ಟ್‌ವೇರ್ ಸ್ಟಾರ್ಟ್‌ಅ‍ಪ್‌ ಆಗಿದೆ ಎಂದೂ ಬೆಳವಡಿ ಅವರು ಸ್ಪಷ್ಟಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT