ಸೋಮವಾರ, ಜೂಲೈ 6, 2020
27 °C

ಬೇಡಿಕೆ ಚೇತರಿಕೆಗೆ ಭಾರಿ ಉತ್ತೇಜನ ಅಗತ್ಯ: ರಾಹುಲ್‌ – ಅಭಿಜಿತ್‌ ಸಂವಾದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕುದುರಲು ಕೇಂದ್ರ ಸರ್ಕಾರ ಭಾರಿ ಮೊತ್ತದ ಉತ್ತೇಜನಾ ಕೊಡುಗೆ ನೀಡಬೇಕಾದ ಅಗತ್ಯ ಇದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ಹೇಳಿದ್ದಾರೆ.

ಕೋವಿಡ್‌ ದಿಗ್ಬಂಧನ ಕೊನೆಗೊಂಡ ನಂತರದ ದಿನಗಳಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ದೇಶದ ಜನಸಂಖ್ಯೆಯ ಶೇ 60ರಷ್ಟು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕಾಗಿದೆ. ಎಲ್ಲರ ಬಳಿಯೂ ಹಣ ಇದ್ದರೆ ಮಾತ್ರ ಅವರು ಸರಕು ಮತ್ತು ಸೇವೆಗಳನ್ನು ಖರೀದಿಸಲು ಸಾಧ್ಯವಾಗಲಿದೆ. ಗ್ರಾಹಕರು ಮಾಡುವ ವೆಚ್ಚ ಹೆಚ್ಚಿಸುವುದೇ ಆರ್ಥಿಕ ಪುನಶ್ಚೇತನದ ಅತ್ಯಂತ ಸರಳ ಮಾರ್ಗವಾಗಿದೆ. ಅದರಿಂದ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರ ಜತೆ ಏರ್ಪಡಿಸಲಾಗಿದ್ದ ವಿಡಿಯೊ ಸಂವಾದದಲ್ಲಿ ಅವರು ತಮ್ಮ ಈ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. 

’ಅಮೆರಿಕ, ಜಪಾನ್‌ ಮಾಡಿದಂತೆ ಭಾರತವೂ ಈ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ದೊಡ್ಡ ಮೊತ್ತದ ಉತ್ತೇಜನಾ ಕೊಡುಗೆ ನೀಡಬೇಕು. ಭಾರತ ಇನ್ನೂ ಈ ಬಗ್ಗೆ ಮಾತನಾಡುತ್ತಿದೆಯೇ ಹೊರತು ನಿರ್ಧಾರ ಕೈಗೊಂಡಿಲ್ಲ. ಅಮೆರಿಕೆಯು ಆರ್ಥಿಕತೆಯನ್ನು ಉಳಿಸಿಕೊಳ್ಳಲು ಜನರ ಕಿಸಿಗೆ ಹಣ ಭರ್ತಿ ಮಾಡುತ್ತಿದೆ. ಭಾರತ ಅದರಿಂದ ಪಾಠ ಕಲಿಯಬೇಕಾಗಿದೆ.

‘ಜನರ ಕೈಗೆ ನೇರವಾಗಿ ಹಣ ವರ್ಗಾಯಿಸುವ ಕಾಂಗ್ರೆಸ್‌ನ ‘ನ್ಯಾಯ್‌’ ಯೋಜನೆ ಜಾರಿಯು ಸದ್ಯದ ಅಗತ್ಯವಾಗಿದೆಯೇ’ ಎನ್ನುವ ರಾಹುಲ್‌  ಪ್ರಶ್ನೆಗೆ, ‘ನಿಶ್ಚಿತವಾಗಿಯೂ ಹೌದು. ಜನರ  ಕೈಯಲ್ಲಿ ಹಣ ಇರಬೇಕು ಎನ್ನುವುದು ಬರೀ ಬಡವರಿಗೆ ಸೀಮಿತವಾಗಬಾರದು’ ಎಂದು ಉತ್ತರಿಸಿದ್ದಾರೆ.

’ಜನರು ಮಾಡುವ ವೆಚ್ಚ ಹೆಚ್ಚಲು ಅವರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ಬಡವರಿಗೆ ಆಹಾರ ಧಾನ್ಯ ವಿತರಿಸಲು ತಾತ್ಕಾಲಿಕ ಪಡಿತರ ಚೀಟಿ ವಿತರಿಸಬೇಕು ಮತ್ತು ಮೂರು ತಿಂಗಳವರೆಗೆ  ಸಾಲ ಮರುಪಾವತಿ ಮುಂದೂಡಿಕೆ ಬದಲಿಗೆ ಈ ಅವಧಿಯಲ್ಲಿನ ಮರುಪಾವತಿಯನ್ನೇ ರದ್ದುಪಡಿಸಬೇಕು.

‘ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮರ್ಥ ವ್ಯಕ್ತಿ ಮಾತ್ರ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯ ಎನ್ನುವ ನಿಲುವು ಸರಿಯಲ್ಲ. ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಇಂತಹ ವಾದವು ವಿನಾಶಕಾರಿಯಾಗಿ ಪರಿಣಮಿಸಿರುವುದು ಸಾಬೀತಾಗಿದೆ. ಈ ಎರಡೂ ದೇಶಗಳ ‘ಬಲಿಷ್ಠ’ ಮುಖ್ಯಸ್ಥರು ತಮಗೆಲ್ಲ ಗೊತ್ತು ಎನ್ನುವ ರೀತಿಯಲ್ಲಿ ವರ್ತಿಸಿದ್ದರು. ಪ್ರತಿ ದಿನ ಅವರಾಡುತ್ತಿದ್ದ ಮಾತುಗಳು ನಗೆ ಉಕ್ಕಿಸುತ್ತಿದ್ದವು. ಯಾರೇ ಆಗಲಿ ಬಲಿಷ್ಠ ವ್ಯಕ್ತಿ ಮಾತ್ರ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲನೆಂದು  ಭಾವಿಸುವವರು ತಮ್ಮ ನಿಲುವನ್ನು ಬದಲಿಸಿಕೊಳ್ಳಲು ಇದು ಸಕಾಲ‘ ಎಂದು ಹೇಳಿದ್ದಾರೆ.

ದಿಗ್ಬಂಧನಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು ಎನ್ನುವ ರಾಹುಲ್‌ ಗಾಂಧಿ ಅವರ ಸಲಹೆಗೆ ಬ್ಯಾನರ್ಜಿ ಅವರು ತಮ್ಮ ಸಹಮತ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು