ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಭಾರತದ ಕ್ರಮಕ್ಕೆ ಐಎಂಎಫ್‌ ಮೆಚ್ಚುಗೆ

Last Updated 15 ಜನವರಿ 2021, 16:35 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್–19 ಸಾಂಕ್ರಾಮಿಕದ ನಿಯಂತ್ರಣಕ್ಕೆ ಭಾರತವು ‘ಅತ್ಯಂತ ನಿರ್ಣಾಯಕ’ ಕ್ರಮಗಳನ್ನು ಕೈಗೊಂಡಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಮೆಚ್ಚುಗೆ ಸೂಚಿಸಿದ್ದಾರೆ. ಈ ಕ್ರಮಗಳು ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು ಕೂಡ ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.

‘ವಿಶ್ವದ ಅರ್ಥವ್ಯವಸ್ಥೆ ಕುರಿತ ಮುನ್ನೋಟವನ್ನು ಐಎಂಎಫ್‌ ಜನವರಿ 26ರಂದು ಬಿಡುಗಡೆ ಮಾಡಲಿದೆ. ಈ ವರದಿಯಲ್ಲಿ ಭಾರತದ ಚಿತ್ರಣವು ಇತರ ದೇಶಗಳ ಚಿತ್ರಣಕ್ಕಿಂತ ಕಡಿಮೆ ಕೆಟ್ಟದ್ದಾಗಿ ಇರಲಿದೆ. ಏಕೆಂದರೆ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು ಅತ್ಯಂತ ನಿರ್ಣಾಯಕ ಕ್ರಮಗಳನ್ನು ಭಾರತ ಕೈಗೊಂಡಿದೆ’ ಎಂದು ಜಾರ್ಜೀವಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಭಾರತದಂತಹ ಭಾರಿ ಜನಸಂಖ್ಯೆಯನ್ನು ಹೊಂದಿರುವ ದೇಶವು ಲಾಕ್‌ಡೌನ್‌ ಜಾರಿಗೊಳಿಸಿದ್ದು ತಕ್ಷಣದ ನಿರ್ಧಾರವಾಗಿತ್ತು. ನಂತರದ ದಿನಗಳಲ್ಲಿ ಭಾರತವು ಲಾಕ್‌ಡೌನ್‌ ಕ್ರಮವನ್ನು ನಿರ್ದಿಷ್ಟ ಸ್ಥಳಗಳಲ್ಲಿ ಜಾರಿಗೆ ತಂದಿತು. ಈ ಬದಲಾವಣೆ ಹಾಗೂ ಅದಕ್ಕೆ ಪೂರಕವಾಗಿ ಜಾರಿಗೊಳಿಸಲಾದ ಕೆಲವು ಕ್ರಮಗಳು ಚೆನ್ನಾಗಿ ಕೆಲಸ ಮಾಡಿರುವಂತೆ ಕಾಣುತ್ತಿವೆ. ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಮತ್ತೆ ಚೇತರಿಕೆ ಕಂಡುಕೊಂಡಿವೆ’ ಎಂದು ಅವರು ಪ್ರಶಂಸೆಯ ಮಾತು ಆಡಿದ್ದಾರೆ.

‘ಭಾರತದಲ್ಲಿ ಹಣಕಾಸು ಹಾಗೂ ಆರ್ಥಿಕ ನೀತಿಯ ವಿಚಾರಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೆಗೆ ಅರ್ಹವಾಗಿದೆ. ಅದು ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳಿಗಿಂತ ಹೆಚ್ಚಿನದನ್ನು ಮಾಡಿದೆ. ಹೀಗಿದ್ದರೂ, ಭಾರತದಲ್ಲಿ ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT