ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳ ನಿರ್ಬಂಧ: ವಹಿವಾಟಿಗೆ ಧಕ್ಕೆ, ಬ್ಯಾಂಕ್‌ಗಳ ಆತಂಕ

Last Updated 2 ಮಾರ್ಚ್ 2022, 15:57 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್): ರಷ್ಯಾದಿಂದ ಆಮದು ಮಾಡಿಕೊಂಡ ಉತ್ಪನ್ನಗಳಿಗೆ ಹಣವು ಪಾವತಿ ಆಗುತ್ತಿಲ್ಲದಿರುವುದು ಹಾಗೂ ರಷ್ಯಾಕ್ಕೆ ರಫ್ತು ಮಾಡಿದ ಉತ್ಪನ್ನಗಳಿಗೆ ಪ್ರತಿಯಾಗಿ ಹಣ ಬರದಿರುವುದು ಭಾರತದ ಬ್ಯಾಂಕ್‌ಗಳಿಗೆ ಸಮಸ್ಯೆ ಸೃಷ್ಟಿಸಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿವೆ.

‘ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ಪಾವತಿಗಳು ಸ್ಥಗಿತಗೊಂಡಿವೆ. ಬ್ಯಾಂಕ್‌ಗಳಿಗೆ ಇದು ಈಗ ತಲೆಬಿಸಿಗೆ ಕಾರಣವಾಗಿದೆ. ಈ ವಿಚಾರವನ್ನು ಬ್ಯಾಂಕ್‌ಗಳು ಆರ್‌ಬಿಐ ಮತ್ತು ಉದ್ಯಮದ ಪ್ರತಿನಿಧಿಗಳ ಗಮನಕ್ಕೆ ತಂದಿವೆ’ ಎಂದು ಬ್ಯಾಂಕಿಂಗ್‌ ವಲಯದ ಮೂಲಗಳು ಹೇಳಿವೆ.

ಆರ್‌ಬಿಐ ಪ್ರತಿನಿಧಿಗಳು ದೇಶದ ಕೆಲವು ಆಯ್ದ ಬ್ಯಾಂಕ್‌ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದು, ದೇಶದ ಬ್ಯಾಂಕ್‌ಗಳು ರಷ್ಯಾ ಹಾಗೂ ಉಕ್ರೇನ್ ಜೊತೆ ಹೊಂದಿರುವ ವಹಿವಾಟಿನ ಪ್ರಮಾಣವನ್ನು, ಅದರಿಂದ ಬ್ಯಾಂಕ್‌ಗಳ ಮೇಲೆ ಆಗಬಹುದಾದ ಪರಿಣಾಮವನ್ನು ಅಂದಾಜಿಸಲು ಯತ್ನಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಸ್ಥಗಿತಗೊಂಡಿರುವ ಪಾವತಿಗಳ ಒಟ್ಟು ಮೊತ್ತ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಆರ್‌ಬಿಐ ಆ ಮೊತ್ತವನ್ನು ಅಂದಾಜು ಮಾಡುತ್ತಿದೆ. ವಾಣಿಜ್ಯ ವಹಿವಾಟಿಗೆ ಆಗಿರುವ ಅಡ್ಡಿಯ ಪರಿಣಾಮ ಏನು ಎಂಬುದನ್ನು ಅಂದಾಜಿಸಲು ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ಕೂಡ ಕೆಲವು ಬ್ಯಾಂಕ್‌ ಪ್ರತಿನಿಧಿಗಳ ಜೊತೆ ಸೋಮವಾರ ಸಭೆ ನಡೆಸಿದೆ.

ಭಾರತದ ಕಾರ್ಪೊರೇಟ್ ಗ್ರಾಹಕರು ಉಕ್ರೇನ್ ಮತ್ತು ರಷ್ಯಾದ ಜೊತೆ ನಡೆಸುತ್ತಿರುವ ವಹಿವಾಟಿನ ಮೊತ್ತ ಎಷ್ಟು, ಸಂಘರ್ಷದ ಕಾರಣದಿಂದಾಗಿ ಅವರ ವಹಿವಾಟುಗಳಿಗೆ ಎಷ್ಟು ಧಕ್ಕೆ ಆಗಬಹುದು, ಅದರಿಂದ ಅವರ ಸಾಲ ಮರುಪಾವತಿ ವಿಳಂಬ ಆಗಬಹುದೇ ಎಂಬುದನ್ನು ತಿಳಿದುಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ.

ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ರಷ್ಯಾದ ಸಂಸ್ಥೆ, ಕಂಪನಿಗಳಿಗೆ ಸಂಬಂಧಿಸಿದ ವಹಿವಾಟುಗಳನ್ನು ಸ್ಥಗಿತಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT