ಶನಿವಾರ, ಜೂನ್ 19, 2021
22 °C
ದೇಶಿ ಕಂಪನಿಗಳಿಗೆ ನೆರವಾಗಿ: ಸರ್ಕಾರಕ್ಕೆ ಮೊಬೈಲ್‌ ಕಂಪನಿಗಳ ಒತ್ತಾಯ

ಚೀನಾ ಸರಕು ಬಹಿಷ್ಕಾರ: ದೇಶಿ ಕಂಪನಿಗಳ ಬೇಡಿಕೆ ಹೆಚ್ಚಿಸದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಭಾರತದ ಕಂಪನಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಾದರೆ ಮಾತ್ರ ದೇಶದಲ್ಲಿ ಬೇರೂರಿರುವ ಚೀನಾದ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯ’ ಎಂದು ದೇಶದ ಸ್ಮಾರ್ಟ್‌ಫೋನ್‌ ತಯಾರಕರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತ–ಚೀನಾ ಗಡಿ ಸಂಘರ್ಷದಿಂದಾಗಿ ಭಾರತದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿದೆ. ಇದರಿಂದ ಭಾರತದ ಬ್ರ್ಯಾಂಡ್‌ಗಳ ಭವಿಷ್ಯವೇನೂ ಬದಲಾಗುವುದಿಲ್ಲ. ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುವಂತೆ ಮಾಡಿದರೆ ಮಾತ್ರ  ದೇಶಿ ಬ್ರ್ಯಾಂಡ್‌ಗಳು ಕಡಿಮೆ ಬೆಲೆಗೆ ಸರಕುಗಳನ್ನು ನೀಡಲು ಸಾಧ್ಯವಾಗಲಿದೆ’ ಎಂದು ಕಾರ್ಬನ್‌ ಬ್ರ್ಯಾಂಡ್   ಹೊಂದಿರುವ‌ ಜೈನಾ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಭಿಷೇಕ್‌ ಗರ್ಗ್‌ ಹೇಳಿದ್ದಾರೆ.

ಚೀನಾ ಕಂಪನಿಗಳ ಪ್ರವೇಶದಿಂದ ಕಳೆದ ಕೆಲವು ವರ್ಷಗಳಿಂದ ದೇಶದ ಬಹಳಷ್ಟು ಸ್ಮಾರ್ಟ್‌ಫೋನ್‌ ತಯಾರಕರ ವಹಿವಾಟು ತೀವ್ರ ಕುಸಿತ ಕಂಡಿದ್ದರೆ ಇನ್ನೂ ಕೆಲವರು ವಿದೇಶಿ ಕಂಪನಿಗಳಿಗೆ ಬಿಡಿ ಭಾಗ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಉದ್ಯಮವಲಯದ ತಜ್ಞರು ಹೇಳಿದ್ದಾರೆ.

ಚೀನಾ ಮತ್ತು ಅದರ ಉತ್ಪನ್ನಗಳ ಮೇಲೆ ದೇಶದ ಜನರು ವ್ಯಕ್ತಪಡಿಸುತ್ತಿರುವ ಆಕ್ರೋಶದಿಂದ ದೇಶಿ ಕಂಪನಿಗಳ ವಹಿವಾಟು ಹೆಚ್ಚಾಗುವುದಿಲ್ಲ ಎಂದು ಲಾವಾ ಇಂಟರ್‌ನ್ಯಾಷನಲ್‌ ಕಂಪನಿಯ ಸ್ಥಾಪಕ ಹರಿ ಓಮ್‌ ರಾಯ್‌ ಹೇಳಿದ್ದಾರೆ.

‘ನಾವು ಉತ್ತಮ ಬೆಳವಣಿಗೆ ಕಂಡು, ಚೀನಾದ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವಂತಹ ಕೌಶಲ ಮತ್ತು ಸಾಮರ್ಥ್ಯವನ್ನು ಹೊಂದುವ ಜವಾಬ್ದಾರಿ ತೋರಬೇಕಿದೆ. ಅಲ್ಪಾವಧಿಗೆ ಭಾವೋದ್ವೇಗಕ್ಕೆ ಒಳಗಾದರೆ ಅದರಿಂದ ಏನೂ ಪ್ರಯೋಜನ ಇಲ್ಲ. ನಮ್ಮ ಪ್ರತಿಸ್ಪರ್ಧಿಗಳಿಗಿಂತಲೂ ಉತ್ತಮವಾದ ಉತ್ಪನ್ನಗಳನ್ನು ಪೂರೈಸುವ ಮೂಲಕ ಪೈಪೋಟಿ ನೀಡಬೇಕು’ ಎಂದೂ ಹೇಳಿದ್ದಾರೆ.

ಮಾರುಕಟ್ಟೆ ವರದಿಗಳ ಪ್ರಕಾರ, ಕಾರ್ಬನ್ ಮೊಬೈಲ್ಸ್‌, ಲಾವಾ ಇಂಟರ್‌ನ್ಯಾಷನಲ್ಸ್‌ ಮತ್ತು ಮೈಕ್ರೊಮ್ಯಾಕ್ಸ್‌ ಕಂಪನಿಗಳು ಶೀಘ್ರವೇ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು