ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಸಂಸ್ಕೃತಿ ಪೋಷಿಸುವ ‘ಕಾಪಿ ಮಷೀನ್‌’

Last Updated 7 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ದೇಶದಲ್ಲಿ ನಗರೀಕರಣದ ಜತೆ ’ಕಾಫಿ ಸೇವನೆ ಸಂಸ್ಕೃತಿ‘ಯೂ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಯುವ ಸಮುದಾಯದಲ್ಲಿ ಹೆಚ್ಚಿದ ಕಾಫಿ ಸೇವನೆಯ ಜನಪ್ರಿಯತೆಯ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಸರಣಿ ಮಳಿಗೆಗಳನ್ನು ಆರಂಭಿಸಿ ಯಶಸ್ವಿಯಾಗಿವೆ. ಬದಲಾದ ಜೀವನಶೈಲಿ, ವೆಚ್ಚ ಮಾಡುವ ಆದಾಯ ಹೆಚ್ಚಳ, ಉತ್ಕೃಷ್ಟ, ಸ್ವಾದಿಷ್ಟಕರ ಕಾಫಿ ಸೇವನೆಗೆ ಹೆಚ್ಚು ಬೆಲೆ ತೆರಲು ಸಿದ್ಧರಿರುವ ಗ್ರಾಹಕರಿಂದಾಗಿ ಕಾಫಿ ಸೇವಿಸುವ ತಾಣಗಳ ಸಂಖ್ಯೆ ಏರುಗತಿಯಲ್ಲಿ ಇದೆ. ಕಾಫಿ ಸೇವನೆ ಜನಪ್ರಿಯಗೊಳಿಸುವಲ್ಲಿ ಕೆಫೆ ಕಾಫಿ ಡೇ ಗಮನಾರ್ಹ ಕೊಡುಗೆ ನೀಡಿದೆ.

ಬರಿಸ್ಟಾ, ಕೋಸ್ಟಾ ಕಾಫಿ, ಟಾಟಾ ಸ್ಟಾರ್‌ಬಕ್ಸ್‌ ಕಂಪನಿಗಳ ಕೊಡುಗೆಯೂ ಸಾಕಷ್ಟಿದೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಾಫಿ ಕೆಫೆಗಳು ಈಗ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಣೆಯಾಗುತ್ತಿವೆ. ಈ ಬಗೆಯಲ್ಲಿ ಕಾಫಿ ಸಂಸ್ಕೃತಿ ಪಸರಿಸುವಲ್ಲಿ ಬೆಂಗಳೂರಿನ ಕಾಪಿ ಮಷಿನ್ಸ್‌ ಕಂಪನಿಯು ಕೂಡ (Kaapi Machines) ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಕಾಫಿ ತಯಾರಿಸುವ ವೈವಿಧ್ಯಮಯ ಯಂತ್ರಗಳ ಮಾರಾಟ, ಮಾರಾಟ ನಂತರದ ತರಬೇತಿ, ಸಲಹೆ ಮತ್ತು ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇದೆ. ಕಾಫಿ ಬೀಜ ಸಂಸ್ಕರಿಸುವವರು, ಕಾಫಿ ಪೇಯ ಮಾರುವವರು, ಕೆಫೆ ಹಾಗೂ ಹೋಟೆಲ್‌ ಮಾಲೀಕರು ಮತ್ತು ಕಾಫಿ ಪ್ರೇಮಿಗಳ ಅಗತ್ಯಗಳನ್ನೆಲ್ಲ ಒದಗಿಸಲು ಇದು ಶ್ರಮಿಸುತ್ತಿದೆ. ಪ್ರಮುಖ ಕಾರ್ಪೊರೇಟ್ ಕಂಪನಿಗಳಾದ ಸ್ಟಾರ್‌ಬಕ್ಸ್‌, ಮ್ಯಾಕ್‌ಡೊನಾಲ್ಡ್ಸ್‌, ಐಟಿಸಿ ಹೋಟೆಲ್ಸ್‌, ತಾಜ್‌ ಗ್ರೂಪ್‌ ಆಫ್‌ ಹೋಟೆಲ್ಸ್‌, ಕೋವರ್ಕ್ಸ್‌ ಮುಂತಾದವು ಇದರ ಗ್ರಾಹಕಗಳಾಗಿವೆ. ಕಂಪನಿ ಪೂರೈಸುವ ಕಾಫಿ ಯಂತ್ರಗಳನ್ನು ರಾಷ್ಟ್ರಪತಿ ಭವನ, ಸಂಸತ್ತ, ವಿಮಾನ ನಿಲ್ದಾಣಗಳಲ್ಲಿಯೂ ಅಳವಡಿಸಲಾಗಿದೆ.

2007ರಲ್ಲಿ ಕಾಫಿ ಮಷಿನ್‌ಗಳ ಮಾರಾಟ ಆರಂಭಿಸಿದ ಕಂಪನಿಯು ದೇಶದಲ್ಲಿ ಕಾಫಿ ಕಂಪು ಪಸರಿಸಲು ಗಮನಾರ್ಹ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಕಾಫಿ ಕೆಫೆ ಸಂಸ್ಕೃತಿ ಜನಪ್ರಿಯಗೊಳ್ಳುತ್ತಿದ್ದ ಸಂದರ್ಭದಲ್ಲಿಯೇ ವಹಿವಾಟು ಆರಂಭಿಸಿದ ಕಂಪನಿಯು ನಿರಂತರವಾಗಿ ಯಶಸ್ಸಿನ ಹಾದಿಯಲ್ಲಿಯೇ ಸಾಗುತ್ತಿದೆ. ಸುರೇಶ್‌ ಜಗನ್ನಾಥ ಅವರು ಈ ಕಂಪನಿಯ ಪ್ರವರ್ತಕರಾಗಿದ್ದಾರೆ.

ಜಾಗತಿಕ ಗುಣಮಟ್ಟದ ಕಾಫಿ ತಯಾರಿಕೆಯ ಯಂತ್ರಗಳನ್ನು ಕಂಪನಿಯು ದೇಶಿ ಮಾರುಕಟ್ಟೆಗೆ ಒದಗಿಸುತ್ತಿದೆ. ಕಾಫಿ ಮಾರಾಟ ಮಾಡುವವರಿಗೆ ವಿದೇಶಗಳಲ್ಲಿ ತಯಾರಾಗುವ ಕಾಫಿ ಮಷಿನ್‌ಗಳನ್ನು ಸ್ಥಳೀಯವಾಗಿ ಸುಲಭವಾಗಿ ಒದಗಿಸುವ ಮತ್ತು ಮಾರಾಟ ನಂತರದ ಸೇವಾ ಸೌಲಭ್ಯ ಒದಗಿಸುವುದು ಮುಖ್ಯ ಉದ್ದೇಶ.

ಕಾಫಿ ಮಷಿನ್‌ ತಯಾರಿಕೆಯಲ್ಲಿ ಇರುವ ಮುಂಚೂಣಿ ದೇಶಗಳಾದ ಇಟಲಿ, ಸ್ವಿಟ್ಜರ್ಲೆಂಡ್‌ ಮತ್ತು ಅಮೆರಿಕದ ಪ್ರತಿಷ್ಠಿತ ಕಂಪನಿಗಳಿಂದ ಆಮದು ಮಾಡಿಕೊಂಡು ‘ಬಿಟುಬಿ’ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದೆ.
ವಿದೇಶಗಳಿಂದ ಮಷಿನ್‌ ಆಮದು ಮಾಡಿಕೊಂಡು, ಖರೀದಿದಾರರಿಗೆ ತರಬೇತಿ ನೀಡಿ, ಮಾರಾಟ ನಂತರದ ಸೇವೆ ಒದಗಿಸುತ್ತಿದೆ.

ದೇಶದಲ್ಲಿ ಕಾಫಿ ಮಷಿನ್‌ಗಳನ್ನು ಆಮದು ಮಾಡಿಕೊಳ್ಳುವ ಹಲವು ಕಂಪನಿಗಳಿವೆ. ಆದರೆ, ಕೇವಲ ಕಾಫಿ ಉದ್ದಿಮೆಗೆ ಮಾತ್ರ ಮೀಸಲಾದ ವಿಶಿಷ್ಟ ಕಂಪನಿ ಇದಾಗಿದೆ. ದೇಶದ ಬಹುತೇಕ ಕಾಫಿ ಮಾರಾಟದ ದೊಡ್ಡ ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಇದರ ಜತೆ ಸಂಬಂಧ ಹೊಂದಿವೆ.

ಸರಣಿ ಕಾಫಿ ಕೆಫೆ, ಪಂಚತಾರಾ ಹೋಟೆಲ್‌ ಮತ್ತು ಕಾರ್ಪೊರೇಟ್‌ ಕಚೇರಿಗಳಲ್ಲೂ ಕಾಪಿ ಮಷಿನ್‌ ಒದಗಿಸಿದ ಯಂತ್ರಗಳು ವ್ಯಾಪಕವಾಗಿ ಬಳಕೆಯಲ್ಲಿ ಇರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಕಾಫಿ ಮಷಿನ್‌ ಮಾರಾಟ ಮಾಡುವ ದೇಶದ ಅತಿದೊಡ್ಡ ಸಂಸ್ಥೆಯಾಗಿ ಇದು ಅಲ್ಪಾವಧಿಯಲ್ಲಿ ತನ್ನ ವಹಿವಾಟು ವಿಸ್ತರಿಸಿದೆ. ಕಾಪಿ ಮಷಿನ್‌ ದೇಶಿ ಮಾರುಕಟ್ಟೆಗೆ ಪ್ರವೇಶಿಸುವ ಮುಂಚೆ ಯಾರೊಬ್ಬರೂ ಮಾರಾಟ ನಂತರದ ಸೇವೆ ಒದಗಿಸುತ್ತಿರಲಿಲ್ಲ. ಆ ದೊಡ್ಡ ಕಂದರವನ್ನು ಇದು ತುಂಬಿಕೊಟ್ಟಿದೆ.


‘ಕಾಫಿ ತಯಾರಿಸುವ ಅತ್ಯಾಧುನಿಕ ಯಂತ್ರಗಳನ್ನಷ್ಟೇ ಇದು ಮಾರುಕಟ್ಟೆಗೆ ಪರಿಚಯಿಸುತ್ತಿಲ್ಲ. ಕಾಫಿಗೆ ಮೌಲ್ಯವರ್ಧನೆ ನೀಡುವ, ಹೊಸ ತಂತ್ರಜ್ಞಾನ ಅಳವಡಿಕೆ, ಕಾಫಿಗೆ ಸಂಬಂಧಿಸಿದಂತೆ ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನೆಲ್ಲ ಭಾರತದಲ್ಲಿ ಪರಿಚಯಿಸಲೂ ಶ್ರಮಿಸುತ್ತಿದೆ. ಇದರಿಂದ ಸ್ವಾದಿಷ್ಟಕರ ಕಾಫಿ ಸೇವನೆಯು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದರ ಫಲವಾಗಿ ಕೆಫೆ ಸಂಸ್ಕೃತಿಯೂ ಬೆಳೆಯುತ್ತಿದೆ. ಉತ್ತಮ ತಂತ್ರಜ್ಞಾನದ ನೆರವಿನಿಂದ ಕಾಫಿ ಮಾರಾಟದಲ್ಲಿನ ಬೆಲೆ ಹೆಚ್ಚಳದ ಪ್ರಯೋಜನವು ಬೆಳೆಗಾರರಿಗೆ ವರ್ಗಾವಣೆಗೊಳ್ಳಲಿದೆ’ ಎಂದು ಕಂಪನಿಯ ಸಿಇಒ ಅಭಿನವ್‌ ಮಾಥೂರ್‌ ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಅನೇಕ ಜನಪ್ರಿಯ ಬ್ರ್ಯಾಂಡ್‌ಗಳು ಕಾಫಿ ಮಾರಾಟ ವಹಿವಾಟಿಗೆ ಪ್ರವೇಶ ಮಾಡುತ್ತಿವೆ. ಇದರಿಂದಾಗಿ ಕಾಫಿ ಉದ್ದಿಮೆಯು ವಾರ್ಷಿಕ ಎರಡಂಕಿ (ಶೇ 10ರಷ್ಟು) ಬೆಳವಣಿಗೆ ಕಾಣುತ್ತಿದೆ. ಕಾಫಿ ಬೀಜ ಸಂಸ್ಕರಿಸುವುದರಿಂದ ಹಿಡಿದು ಗ್ರಾಹಕರು ಸ್ವಾದಿಷ್ಟಕರ ಕಾಫಿ ಹೀರುವವರೆಗೆ ಅಗತ್ಯವಾದ ನೆರವು ಮತ್ತು ಸಲಹೆಗಳನ್ನೂ ಕಂಪನಿಯು ನೀಡುತ್ತಿದೆ. ’ಬಿಟುಬಿ‘ ವಲಯದಲ್ಲಿ ವೃತ್ತಿಪರತೆಯಿಂದ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ವಹಿವಾಟು ವಿಸ್ತರಣೆಗೊಳ್ಳುತ್ತಿದೆ.

ಭಾರತವು ಮುಖ್ಯವಾಗಿ ಅದರಲ್ಲೂ ಉತ್ತರ ಭಾರತದಲ್ಲಿ ಚಹಾ ಮುಖ್ಯ ಪೇಯವಾಗಿದೆ. ಚಹಾಕ್ಕೆ ಹೋಲಿಸಿದರೆ ಕಾಫಿ ತುಟ್ಟಿ. ಆದರೂ ದೇಶದೆಲ್ಲೆಡೆ ಕಾಫಿ ಸೇವನೆ ಜನಪ್ರಿಯಗೊಳ್ಳುತ್ತಿದೆ. ಈ ಬೆಳವಣಿಗೆಗೆ ಕಾಪಿ ಮಷಿನ್‌ ಕೊಡುಗೆಯೂ ಸಾಕಷ್ಟಿದೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ₹ 1,000 ದಿಂದ ₹ 10 ಲಕ್ಷದವರೆಗೆ ಕಾಫಿ ತಯಾರಿಸುವ ವೈವಿಧ್ಯಮಯ ವಿವಿಧ ಗಾತ್ರದ ಮಷಿನ್‌ಗಳನ್ನು ಕಂಪನಿಯು ಮಾರಾಟ ಮಾಡುತ್ತಿದೆ.

‘ಕಾಫಿ ಉದ್ದಿಮೆಯ ಪ್ರಗತಿಯು ವಾರ್ಷಿಕ ಶೇ 10ರಷ್ಟು ಇರುವುದರಿಂದ ಕಾಫಿ ಮಷಿನ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ದೇಶದಲ್ಲಿ ಕಾಫಿ ಸೇವಿಸುವುದು ದಿನೇ ದಿನೇ ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಕಾಫಿ ತಯಾರಿಸುವ ವಿವಿಧ ಬಗೆಯ ಯಂತ್ರಗಳನ್ನು ಮಾರಾಟ ಮಾಡುವ, ನಿರ್ವಹಣೆ ನೋಡಿಕೊಳ್ಳುವ, ಮಾರಾಟ ನಂತರದ ಸೇವೆ ಒದಗಿಸುತ್ತಿರುವ ಕಾಪಿ ಮಷಿನ್‌ನಿಂದಾಗಿ ಕಾಫಿ ಸಂಸ್ಕೃತಿಯು ವ್ಯಾಪಕವಾಗಿ ಪಸರಿಸುತ್ತಿದೆ. ಇದರಿಂದ ಕಾಫಿ ಬೆಳೆಗಾರರು, ಗ್ರಾಹಕರು ಮತ್ತು ಉದ್ದಿಮೆಗೆ ಪ್ರಯೋಜನ ದೊರೆಯಲಿದೆ. ದೇಶಿ ಕಾಫಿ ಉದ್ದಿಮೆಗೆ ಉಜ್ವಲ ಭವಿಷ್ಯ ಇದೆ’ ಎಂದೂ ಮಾಥೂರ್‌ ಹೇಳುತ್ತಾರೆ.

ಅಭಿನವ್‌ ಮಾಥೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT