ಹೂಡಿಕೆ: ಭಾರತದಾಚೆಗೂ ಕಣ್ಣಿರಲಿ

7

ಹೂಡಿಕೆ: ಭಾರತದಾಚೆಗೂ ಕಣ್ಣಿರಲಿ

Published:
Updated:
Deccan Herald

‘ಹೊಸ ದಾಖಲೆ ಸೃಷ್ಟಿಸಿದ ಸೂಚ್ಯಂಕ...’, ‘ಸೂಚ್ಯಂಕ 41,500ರ ಗಡಿ ದಾಟುವ ಸಾಧ್ಯತೆ...’

ಈಚಿನ ಕೆಲವು ದಿನಗಳಲ್ಲಿ ಈ ಹೆಡ್‌ಲೈನ್‌ ಅನ್ನು ಆಗಾಗ ಪತ್ರಿಕೆಗಳಲ್ಲಿ ನೋಡಿರುತ್ತೀರಿ. ಭಾರತದ ಪತ್ರಿಕೆಗಳಲ್ಲಿ ದಿನನಿತ್ಯ ಎಂಬಂತೆ ಇಂತಹ ಸುದ್ದಿಗಳು ಪ್ರಕಟವಾಗುತ್ತಿರುವ ಸಂದರ್ಭದಲ್ಲಿ, ‘ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ’ ಎಂಬ ಸಲಹೆ ಕೊಡುವಂಥ ಲೇಖನವು ಅಸಮಂಜಸ ಎನಿಸಬಹುದು. ಅಷ್ಟಕ್ಕೂ ನಮ್ಮ ಷೇರುಪೇಟೆಯೇ ಈ ರೀತಿ ಏರಿಕೆ ದಾಖಲಿಸುತ್ತಿರುವಾಗ, ನಮಗೆ ಪರಿಚಯವೇ ಇಲ್ಲದ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಸಾಹಸವನ್ನು ಯಾಕಾದರೂ ಮಾಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ ಅಲ್ಲವೇ?

ಯಾಕೆ ಹೂಡಿಕೆ ಮಾಡಬೇಕು ಎಂಬುದಕ್ಕೆ ಕೆಲವು ಬಲವಾದ ಕಾರಣಗಳಿವೆ, ನೋಡಿ...

ಯಾವುದೂ ಶಾಶ್ವತವಲ್ಲ...

ಷೇರುಪೇಟೆಯಲ್ಲಿ ದೀರ್ಘಾವಧಿಯ ಹೂಡಿಕೆ ಲಾಭದಾಯಕ ಎಂಬುದು ವಾಸ್ತವ. ಆದರೆ, ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಷೇರುಪೇಟೆ ಎಂಬುದು ಚಕ್ರದಂತೆ. ಇಂದು ಮೇಲೆ ಇರುವುದು ನಾಳೆ ಕೆಳಗೆ ಬರುತ್ತದೆ. ಆದ್ದರಿಂದ, ಮ್ಯೂಚುವಲ್‌ ಫಂಡ್‌ಗಳ ಮೂಲಕ ಅತ್ಯಂತ ಸುಲಭವಾಗಿ ವಿದೇಶಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಸಾಧ್ಯವಾಗಿರುವ ಇಂದಿನ ದಿನಗಳಲ್ಲಿ, ನಮ್ಮ ಎಲ್ಲ ಹೂಡಿಕೆಯನ್ನು ಒಂದೇ ಮಾರುಕಟ್ಟೆಯಲ್ಲಿ ಮಾಡುವುದು ಅಷ್ಟೊಂದು ಲಾಭದಾಯಕ ಎನಿಸಲಾರದು.

‘ಆಂತರಿಕ ಸಮಸ್ಯೆ’ ಎಂಬ ಆತಂಕ

ದೇಶದೊಳಗಿನ ವಿವಿಧ ಕ್ಷೇತ್ರಗಳ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಮ್ಯೂಚುವಲ್‌ ಫಂಡ್‌ಗಳು ಒದಗಿಸುತ್ತವೆ. ಇದರಿಂದ ಹೂಡಿಕೆಗೆ ಅಪಾಯ ಕಡಿಮೆ ಎಂಬುದು ನಿಜ. ಆದರೂ, ದೇಶದೊಳಗೆ ಯಾವುದಾದರೂ ಋಣಾತ್ಮಕ ಬೆಳವಣಿಗೆಗಳಾದರೆ (ಉದಾ: ಯುದ್ಧ, ಬರಗಾಲ, ರಾಜಕೀಯ ಅತಂತ್ರ ಸ್ಥಿತಿ... ಮುಂತಾದವು) ಹೂಡಿಕೆದಾರರಿಗೆ ನಷ್ಟ ಉಂಟಾಗುವ ಸಂಭವ ಇರುತ್ತದೆ. ವಿವಿಧ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವುದರಿಂದ ಈ ಅಪಾಯದಿಂದ ಪಾರಾಗಬಹುದು.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಅತಿ ಸಣ್ಣದಾದ ಒಂದು ಚೂರು ಅಷ್ಟೇ. ವಿಶ್ವದ ಒಟ್ಟಾರೆ ಮಾರುಕಟ್ಟೆ ಬಂಡವಾಳದಲ್ಲಿ ಭಾರತದ ಪಾಲು ಶೇ 3 ಮಾತ್ರ. ಆದ್ದರಿಂದ ಇತರ ಶೇ 97ರಷ್ಟನ್ನು ಕಡೆಗಣಿಸುವುದರಿಂದ ನಾವು ಅನೇಕ ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆ ಇದೆ.

ಎಲ್ಲ ಮಾರುಕಟ್ಟೆಗಳೂ ಒಂದೇ ರೀತಿ ಏರಿಳಿಕೆ ದಾಖಲಿಸುತ್ತವೆ. ಒಂದರ ಹಿಂದೆ ಇನ್ನೊಂದು ಸಾಗುತ್ತವೆ ಎಂದು ಅನೇಕ ಸಂದರ್ಭಗಳಲ್ಲಿ ಅನಿಸುವುದಿದೆ. ಆದರೆ, ಸದಾ ಕಾಲ ಅದು ನಿಜವಾಗಿರುವುದಿಲ್ಲ. ಕೆಲವು ಪ್ರಾದೇಶಿಕ ಸಂಗತಿಗಳು ಎಲ್ಲ ಮಾರುಕಟ್ಟೆಗಳ ಹಾಗೂ ಅಲ್ಲಿ ನಮೂದಾಗಿರುವ ಷೇರುಗಳ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಇಂತಹ ಬೆಳವಣಿಗೆಗಳು ದೊಡ್ಡ ಪರಿಣಾಮ ಉಂಟುಮಾಡುತ್ತವೆ ಮತ್ತು ಹೂಡಿಕೆದಾರರು ದೊಡ್ಡ ನಷ್ಟ ಅನುಭವಿಸುವುದನ್ನು ತಪ್ಪಿಸುತ್ತವೆ. ಉದಾಹರಣೆಗೆ ಭಾರತದ ಷೇರುಪೇಟೆಯಲ್ಲಿ ನಮೂದಾಗಿರುವ ಷೇರುಗಳು ಕೆಳಮುಖವಾಗಿ ಚಲಿಸುತ್ತಿದ್ದಾಗ, ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳ ಷೇರುಗಳಲ್ಲಿ ತೇಜಿ ಕಂಡುಬರುವ ಸಾಧ್ಯತೆ ಇದೆ. ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡುವವರು ಇಂಥ ಸಂದರ್ಭದಲ್ಲಿ ಭಾರತದಲ್ಲಾದ ನಷ್ಟವನ್ನು ಅಮೆರಿಕ ಅಥವಾ ಯುರೋಪ್‌ ರಾಷ್ಟ್ರಗಳಿಂದ ತುಂಬಿಕೊಳ್ಳಬಹುದು. ನಿವ್ವಳ ಆಸ್ತಿ ಮೌಲ್ಯದಲ್ಲಿ ಕುಸಿತ ಆಗಿಲ್ಲ ಎಂಬುದು ಹೂಡಿಕೆದಾರಿಗೆ ನೆಮ್ಮದಿ ಕೊಡುವ ವಿಚಾರವಲ್ಲವೇ?

ಆಯ್ಕೆಯ ಕೊರತೆ

ಭಾರತದಲ್ಲಿ ಮಾತ್ರ ಹೂಡಿಕೆ ಮಾಡುತ್ತೇವೆ ಎನ್ನುವವರಿಗೆ ಆಯ್ಕೆಯ ಕೊರತೆಯೂ ಕಾಣಿಸಬಹುದು. ಯಾಕೆಂದರೆ ಜಾಗತಿಕ ಮಟ್ಟದ ಅನೇಕ ಶ್ರೇಷ್ಠ ಕಂಪನಿಗಳು ಭಾರತ ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸದೆ ಇರಬಹುದು (ಉದಾಹರಣೆಗೆ: ಕೋಕ ಕೋಲ, ನೈಕಿ, ಸ್ಯಾಮ್ಸಂಗ್‌). ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕೆಲವು ಕಂಪನಿಗಳ ಅಸ್ತಿತ್ವವೂ ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲದಿರಬಹುದು. ವಿದೇಶಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳು ಈ ಎಲ್ಲ ಷೇರುಗಳಲ್ಲೂ ಹೂಡಿಕೆ ಮಾಡಬಹುದು. ನಾವು ಇಂತಹ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡರೆ ಅದರ ಲಾಭವನ್ನು ಪಡೆಯಲು ನಮಗೂ ಸಾಧ್ಯವಿದೆ. ಉದಾಹರಣೆಗೆ ಭಾರತದ ಷೇರು ಪೇಟೆಯು ಹೊಸದಾಗಿ ಸಾಫ್ಟ್‌ವೇರ್‌ ತಯಾರಿಕೆಗೆ ಇಳಿಯುವ ಕಂಪನಿಗಳಲ್ಲಿ ಅಥವಾ ಹೊಸ ಹೊಸ ಔಷಧಗಳನ್ನು ತಯಾರಿಸುವ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ನೀಡುವುದಿಲ್ಲ. ಆದರೆ, ಅಮೆರಿಕದಲ್ಲಿ ಇಂತಹ ಅನೇಕ ಕಂಪನಿಗಳಿರುತ್ತವೆ. ಅವುಗಳಲ್ಲಿ ಹೂಡಿಕೆಗೂ ಅವಕಾಶ ಇರುತ್ತದೆ.

ಇದಲ್ಲದೆ, ಭಾರತದಲ್ಲಿ ವಹಿವಾಟು ನಡೆಸುವ ಸಂಸ್ಥೆಯೊಂದರ ಮಾತೃ ಸಂಸ್ಥೆಯ ಷೇರುಗಳು ಇನ್ನಾವುದೋ ದೇಶದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಲಭಿಸುತ್ತಿರಬಹುದು. ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರಿಂದ ಇದರ ಲಾಭವನ್ನೂ ಪಡೆಯಲು ಸಾಧ್ಯ.

ರೂಪಾಯಿ ಮೌಲ್ಯದ ಏರಿಳಿತವು ಅಂತರರಾಷ್ಟ್ರೀಯ ಹೂಡಿಕೆ ಮೇಲಿನ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಒಂದು ಅಪಾಯ ಇದೆ. ಆದರೆ, ರೂಪಾಯಿ ಮೌಲ್ಯವನ್ನು ಅಮೆರಿಕದ ಡಾಲ್‌ಗೆ ಹೋಲಿಸಿಯೇ ನಿರ್ಧಾರ ಮಾಡುವುದರಿಂದ ಭಾರತದ ಹೂಡಿಕೆದಾರರಿಗೆ ವಾರ್ಷಿಕ ಶೇ 5 ರಿಂದ 6ರಷ್ಟು ಹೆಚ್ಚುವರಿ ಗಳಿಕೆಗೆ ಅವಕಾಶವಾಗುವುದೇ ಹೆಚ್ಚು.

ಒಟ್ಟಿನಲ್ಲಿ, ಜಾಗತೀಕರಣದ ಇಂದಿನ ದಿನಗಳಲ್ಲಿ ನಮ್ಮ ಹೂಡಿಕೆಯೂ ಜಾಗತಿಕಮಟ್ಟದ್ದಾಗಿರಬೇಕು. ಇಂಥ ಹೂಡಿಕೆಗೆ ಅತ್ಯಂತ ಪಾರದರ್ಶಕ, ತೆರಿಗೆ ಉಳಿತಾಯ ಮಾಡುವ ಮತ್ತು ಅತಿ ಕಡಿಮೆ ವೆಚ್ಚದ ಹೂಡಿಕಾ ವಿಧಾನ ಎಂದರೆ ಮ್ಯೂಚುವಲ್‌ ಫಂಡ್‌ಗಳು.

(ಲೇಖಕ: ಅಧ್ಯಕ್ಷ ಮತ್ತು ಸಿಇಒ, ಪಿಪಿಎಫ್‌ಎಎಸ್‌ ಮ್ಯೂಚುವಲ್‌ ಫಂಡ್‌)

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !