ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಹನ ವಿಮೆ: ಹೆಚ್ಚುವರಿ ಸೌಲಭ್ಯಕ್ಕೆ ಅನುಮತಿ

ವಿಮೆಯ ಪ್ರೀಮಿಯಂ ಮೊತ್ತ ಕಡಿಮೆ ಆಗುವ ನಿರೀಕ್ಷೆ
Last Updated 6 ಜುಲೈ 2022, 15:50 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ವಿಮಾ ಕಂಪನಿಗಳಿಗೆ ವಾಹನ ವಿಮಾ ಪಾಲಿಸಿಗಳ ಜೊತೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಲು ಅವಕಾಶ ಕಲ್ಪಿಸಿದೆ.

ಚಾಲಕ ತನ್ನ ವಾಹನವನ್ನು ಹೇಗೆ ಬಳಸುತ್ತಿದ್ದಾನೆ, ಎಷ್ಟರಮಟ್ಟಿಗೆ ಬಳಸುತ್ತಿದ್ದಾನೆ ಎಂಬುದನ್ನು ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ತಂತ್ರಜ್ಞಾನದ ಆಧಾರದಲ್ಲಿ ಗುರುತಿಸಿ, ವಿಮೆಗೆ ಪ್ರೀಮಿಯಂ ನಿಗದಿ ಮಾಡುವ ಸೌಲಭ್ಯ ಇದು. ವಾಹನಕ್ಕೆ ಆಗುವ ಹಾನಿಗೆ (ಒ.ಡಿ.) ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಇವನ್ನು ಒದಗಿಸಬಹುದು ಎಂದು ಪ್ರಾಧಿಕಾರ ಹೇಳಿದೆ.

‘ವಾಹನ ವಿಮೆಯ ಪರಿಕಲ್ಪನೆಯು ನಿರಂತರವಾಗಿ ವಿಕಾಸ ಹೊಂದುತ್ತಿದೆ. ಪಾಲಿಸಿದಾರರ ಅಗತ್ಯಗಳ ಜೊತೆ ವಿಮಾ ವಲಯವು ಹೆಜ್ಜೆ ಹಾಕಬೇಕು’ ಎಂದು ಪ್ರಾಧಿಕಾರವು ಹೇಳಿದೆ.

ವಾಹನವನ್ನು ಎಷ್ಟರಮಟ್ಟಿಗೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿರುವ ‘ವಾಹನ ಚಾಲನೆ ಮಾಡಿದಷ್ಟು ಪಾವತಿ’ ಹಾಗೂ ಚಾಲಕನು ಎಷ್ಟು ಶಿಸ್ತಿನಿಂದ ವಾಹನ ಚಾಲನೆ ಮಾಡುತ್ತಾನೆ ಎಂಬುದನ್ನು ಆಧರಿಸಿರುವ ‘ವಾಹನ ಚಾಲನೆ ರೀತಿ ಆಧರಿಸಿ ಪಾವತಿ’ ಎಂಬ ಎರಡು ವಿಧಗಳ ಅಡಿಯಲ್ಲಿ ಸೌಲಭ್ಯಗಳನ್ನು ನೀಡಲು ಪ್ರಾಧಿಕಾರ ಒಪ್ಪಿಗೆ ನೀಡಿದೆ.

ವಾಹನ ಮಾಲೀಕರಿಗೆ ತಮ್ಮ ದ್ವಿಚಕ್ರ ವಾಹನ ಮತ್ತು ಕಾರಿಗೆ ಒಂದೇ ಫ್ಲೋಟರ್ ವಿಮೆ ಖರೀದಿಸುವ ಅವಕಾಶ ಕಲ್ಪಿಸುವುದಕ್ಕೂ ಪ್ರಾಧಿಕಾರ ಸಮ್ಮತಿ ಸೂಚಿಸಿದೆ.

‘ಎಲ್ಲ ವಾಹನ ಮಾಲೀಕರೂ ಒಂದೇ ಬಗೆಯಲ್ಲಿ ವಾಹನ ಬಳಕೆ ಮಾಡುವುದಿಲ್ಲ. ಕೆಲವರು ಬಹಳ ಅಪರೂಪಕ್ಕೆ ಒಮ್ಮೆ ವಾಹನ ಬಳಸಬಹುದು. ವಾಹನಕ್ಕೆ ಆಗುವ ಹಾನಿಗೆ ನೀಡುವ ವಿಮೆ ವಿಚಾರದಲ್ಲಿ ಬಳಕೆ ಆಧಾರಿತ ಸೌಲಭ್ಯ ಒದಗಿಸುವುದಕ್ಕೆ ಪ್ರಾಧಿಕಾರ ಅನುಮತಿ ಕೊಟ್ಟಿದೆ’ ಎಂದು ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಟಿ.ಎ. ರಾಮಲಿಂಗಂ ಹೇಳಿದ್ದಾರೆ.

ಅಂದರೆ, ಚಾಲಕರೊಬ್ಬರು ತಾವು ಚಾಲನೆ ಮಾಡುವಷ್ಟು ಕಿ.ಮೀ. ಆಧರಿಸಿ ಸೌಲಭ್ಯ ಪಡೆಯಲು ಬಯಸಿದರೆ, ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಸೌಲಭ್ಯ ಪಡೆದಾಗ ವಿಮೆಯು ಕೈಗೆಟಕುವಂತೆ ಆಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಮನೆಯಿಂದಲೇ ಕೆಲಸ ಮಾಡುವವರಿಗೆ, ವಾಹನ ಬಳಕೆ ಕಡಿಮೆ ಇರುವವರಿಗೆ ಈ ಸೌಲಭ್ಯ ಆಕರ್ಷಕವಾಗಿ ಕಾಣಿಸಲಿದೆ ಎಂದು ಲಿಬರ್ಟಿ ಜನರಲ್ ಇನ್ಶುರೆನ್ಸ್ ಕಂಪನಿಯ ಅಧ್ಯಕ್ಷ ಉದಯನ್ ಜೋಷಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT