ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ: 4ನೇ ಸ್ಥಾನಕ್ಕೆ ಜಾರಿದ ಜಪಾನ್‌ ಆರ್ಥಿಕತೆ

Published 15 ಫೆಬ್ರುವರಿ 2024, 16:03 IST
Last Updated 15 ಫೆಬ್ರುವರಿ 2024, 16:03 IST
ಅಕ್ಷರ ಗಾತ್ರ

ಟೋಕಿಯೊ: ಆರ್ಥಿಕ ಹಿಂಜರಿಕೆಗೆ ಸಿಲುಕಿರುವ ಜಪಾನ್‌, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಿಂದ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಅಮೆರಿಕ, ಚೀನಾ ಬಳಿಕ ಈಗ ಜರ್ಮನಿಯು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

2023ನೇ ಸಾಲಿನ ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ ತ್ರೈಮಾಸಿಕಗಳಲ್ಲಿ ದೇಶೀಯ ಬೇಡಿಕೆಯು ದುರ್ಬಲವಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 0.4ರಷ್ಟು ಕಸಿದಿದೆ. ಇದರಿಂದ ದಿಢೀರ್‌ ಆರ್ಥಿಕ ಹಿಂಜರಿತ ತಲೆದೋರಿದೆ. ಬ್ಯಾಂಕ್‌ ಆಫ್‌ ಜಪಾನ್‌ನ ಆರ್ಥಿಕ ನೀತಿಗಳು ಅನಿಶ್ಚಿತತೆ ಸೃಷ್ಟಿಗೆ ಕಾರಣವಾಗಿವೆ ಎಂದು ಹಣಕಾಸು ವಿಶ್ಲೇಷಕರು ಹೇಳಿದ್ದಾರೆ.

ಜಪಾನಿಗರ ವಯಸ್ಸು ಹಾಗೂ ಪೋಷಕರ ಸಂತಾನ ಮಿತಿ ಪಾಲನೆಯಿಂದಾಗಿ ಆರ್ಥಿಕತೆಯು ಕ್ರಮೇಣವಾಗಿ ಸ್ಪರ್ಧಾತ್ಮಕತೆ ಮತ್ತು ಉತ್ಪಾದಕತೆಯ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ಹೇಳಿದ್ದಾರೆ.

2010ರಲ್ಲಿ ಚೀನಾವು ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಜಪಾನ್‌ ಅನ್ನು ಹಿಂದಿಕ್ಕಿತ್ತು. ಅಲ್ಲದೇ, ಕಳೆದ ವರ್ಷ ಜಪಾನ್‌ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು ಅಂದಾಜಿಸಿತ್ತು.

2023ರಲ್ಲಿ ಜಪಾನ್‌ನ ಜಿಡಿಪಿ ಗಾತ್ರ ₹348 ಲಕ್ಷ ಕೋಟಿಗೆ ತಲುಪಿದೆ (4.2 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌). ಕಳೆದ ತಿಂಗಳ ವರದಿ ಪ್ರಕಾರ ಜರ್ಮನಿಯ ಜಿಡಿಪಿ ಗಾತ್ರ ₹365 ಲಕ್ಷ ಕೋಟಿಗೆ (4.4 ಟ್ರಿಲಿಯನ್‌ ಅಮೆರಿಕನ್‌ ಡಾಲರ್) ಏರಿಕೆ ಆಗಿದೆ. 

ಜರ್ಮನಿಯು, ಯೂರೊ ಕರೆನ್ಸಿ ಹಾಗೂ ಹಣದುಬ್ಬರ ನಿಯಂತ್ರಣದ ಮೂಲಕ ಸದೃಢವಾದ ಆರ್ಥಿಕತೆ ರೂಪಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹೋಲಿಸಿದರೆ ಜಪಾನ್‌ ಕರೆನ್ಸಿ ಯೆನ್‌ ದುರ್ಬಲವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ನನ್ನು ಮೀರಿಸಲಿದೆ ಭಾರತ

‘ಸರ್ಕಾರದ ಅಂಕಿಅಂಶಗಳು ದೇಶದ ದುರ್ಬಲ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಿವೆ. ಅಲ್ಲದೇ, ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದನ್ನು ತೋರಿಸುತ್ತವೆ’ ಎಂದು ಟೋಕಿಯೊ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಟೆಟ್ಸುಜಿ ಒಕಾಝಕಿ ಹೇಳಿದ್ದಾರೆ.

ದೇಶವು ಹಲವು ವರ್ಷಗಳ ಹಿಂದೆ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ಬಲಿಷ್ಠವಾಗಿತ್ತು.
ಎಲೆಕ್ಟ್ರಿಕ್‌ ವಾಹನಗಳ ಪ್ರವೇಶದಿಂದಾಗಿ ಈ ಕ್ಷೇತ್ರದ ಅಲುಗಾಡುತ್ತಿದೆ. ಇತ್ತೀಚೆಗೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಅಂತರ ಕುಗ್ಗುತ್ತಿದೆ. ಭಾರತವು ಕೆಲವೇ ವರ್ಷಗಳಲ್ಲಿ ಜಪಾನ್‌ನ ಸಾಂಕೇತಿಕ ಜಿಡಿಪಿಯನ್ನು ಹಿಂದಿಕ್ಕಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT