ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ; ಅದಾನಿ ಸಮೂಹದ ಏಳು ಕಂ‍ಪನಿಗಳಲ್ಲಿ ಹೂಡಿಕೆ

Published 14 ಏಪ್ರಿಲ್ 2024, 15:51 IST
Last Updated 14 ಏಪ್ರಿಲ್ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದ ಏಳು ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಮೌಲ್ಯವು, 2023–24ನೇ ಆರ್ಥಿಕ ವರ್ಷದಲ್ಲಿ ಶೇ 59ರಷ್ಟು ಏರಿಕೆಯಾಗಿದೆ.

2023ರ ಮಾರ್ಚ್‌ 31ಕ್ಕೆ ₹38,471 ಕೋಟಿ ಇದ್ದ ಹೂಡಿಕೆ ಮೊತ್ತವು ಪ್ರಸಕ್ತ ವರ್ಷದ ಮಾರ್ಚ್‌ 31ಕ್ಕೆ ₹61,210 ಕೋಟಿಗೆ ಮುಟ್ಟಿದೆ. ಒಟ್ಟಾರೆ ₹22,378 ಕೋಟಿಯಷ್ಟು ಏರಿಕೆಯಾಗಿದೆ ಎಂದು ಷೇರು ವಿನಿಮಯ ಕೇಂದ್ರದ ಅಂಕಿ–ಅಂಶಗಳು ತಿಳಿಸಿವೆ.

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಬಿಡುಗಡೆಗೊಳಿಸಿದ ವರದಿಯಿಂದಾಗಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ತೀವ್ರವಾಗಿ ಕುಸಿದಿತ್ತು. ಮಾರುಕಟ್ಟೆ ಮೌಲ್ಯವು ₹12.54 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ಇದರಿಂದ ಎಲ್‌ಐಸಿ ಕೂಡ ನಷ್ಟ ಅನುಭವಿಸಿತ್ತು. 

ಹಿಂಡನ್‌ಬರ್ಗ್‌ ವರದಿಯನ್ನು ಅದಾನಿ ಸಮೂಹವು ಅಲ್ಲಗೆಳೆದಿತ್ತು. ಈ ಆರೋಪ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದರಿಂದ, ಅದಾನಿ ಸಮೂಹದ ಷೇರುಗಳು ಚೇತರಿಸಿಕೊಂಡಿವೆ. ಇದರಿಂದ ಎಲ್‌ಐಸಿ ಮೌಲ್ಯವೂ ವೃದ್ಧಿಯಾಗಿದೆ.

ಅದಾನಿ ಪೋರ್ಟ್‌ ಆ್ಯಂಡ್‌ ಎಸ್ಇಝಡ್‌ ಹಾಗೂ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಹೂಡಿಕೆ ವೇಳೆ ಎಲ್‌ಐಸಿಯು ರಾಜಕೀಯ ಒತ್ತಡ ಎದುರಿಸಿತ್ತು. ಸದ್ಯ ಈ ಎರಡು ಕಂಪನಿಯ ಷೇರಿನ ಮೌಲ್ಯವು ಕ್ರಮವಾಗಿ ಶೇ 83ರಷ್ಟು ಹಾಗೂ ಶೇ 68.4ರಷ್ಟು ಏರಿಕೆ ಕಂಡಿದೆ.

ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನಲ್ಲಿ ಎಲ್‌ಐಸಿ ಮೊತ್ತವು ₹8,495 ಕೋಟಿಯಿಂದ ₹14,305 ಕೋಟಿಗೆ ಏರಿಕೆಯಾಗಿದೆ. ಅದಾನಿ ಪೋರ್ಟ್‌ ಆ್ಯಂಡ್‌ ಎಸ್‌ಇಝಡ್‌ನಲ್ಲಿ ₹12,450 ಕೋಟಿಯಿಂದ ₹22,776 ಕೋಟಿಗೆ ತಲುಪಿದೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನಲ್ಲಿನ ಹೂಡಿಕೆಯು ದುಪ್ಪಟ್ಟಾಗಿದೆ. ಒಟ್ಟಾರೆ ₹3,937 ಕೋಟಿಗೆ ಮುಟ್ಟಿದೆ. ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌, ಅಂಬುಜಾ ಮತ್ತು ಎಸಿಸಿಯಲ್ಲೂ ಮೌಲ್ಯವು ಏರಿಕೆಯಾಗಿದೆ.

ವಿದೇಶಿ ಹೂಡಿಕೆದಾರರ ಒಲವು: ಹಿಂಡನ್‌ಬರ್ಗ್ ವರದಿಯಿಂದಾಗಿ ದೇಶೀಯ ಹೂಡಿಕೆದಾರರು ಅದಾನಿ ಸಮೂಹದಲ್ಲಿ ಹೂಡಿಕೆಗೆ ಹಿಂಜರಿದಿದ್ದು ಉಂಟು. ಆದರೆ, ವಿದೇಶಿ ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಿದ್ದರು.

ಕತಾರ್‌ ಇನ್‌ವೆಸ್ಟ್‌ಮೆಂಟ್‌ ಅಥಾರಿಟಿ, ಅಬುಧಾಬಿಯ ಐಎಚ್‌ಸಿ ಕಂಪನಿ, ಫ್ರೆಂಚ್‌ನ ಟೋಟಲ್‌ಎನರ್ಜಿಸ್‌ ಮತ್ತು ಅಮೆರಿಕದ ಜಿಕ್ಯೂಜಿ ಕಂಪನಿಯು ಅದಾನಿ ಕಂಪನಿಗಳ ಷೇರುಗಳಲ್ಲಿ ₹45 ಸಾವಿರ ಕೋಟಿ ಹೂಡಿಕೆ ಮಾಡಿವೆ.

ಎಂ–ಕ್ಯಾಪ್‌ ₹13,440 ಕೋಟಿ ಇಳಿಕೆ

ನವದೆಹಲಿ: ಕಳೆದ ವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಶೇ 3.32ರಷ್ಟು ಕುಸಿತ ಕಂಡಿದೆ. ಇದರಿಂದ ಪ್ರಮುಖ ಏಳು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಏರಿಕೆಯಾಗಿದ್ದರೆ ಎಲ್‌ಐಸಿ ಸೇರಿ ಇತರೆ ಕಂಪನಿಗಳ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ.‌

ಎಲ್‌ಐಸಿ ಎಂ–ಕ್ಯಾಪ್‌ ₹13440 ಕೋಟಿ ಕರಗಿದೆ. ಒಟ್ಟು ಮಾರುಕಟ್ಟೆ ಮೌಲ್ಯ ₹6.14 ಲಕ್ಷ ಕೋಟಿ ಆಗಿದೆ.  ಎಚ್‌ಡಿಎಫ್‌ಸಿ ಬ್ಯಾಂಕ್‌ ₹23170 ಕೋಟಿ ಮತ್ತು ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿಯ ಎಂ–ಕ್ಯಾಪ್‌ ₹8153 ಕೋಟಿ ಇಳಿಕೆಯಾಗಿದೆ.

₹59404 ಕೋಟಿ ಹೆಚ್ಚಳ: ಭಾರ್ತಿ ಏರ್‌ಟೆಲ್‌ ₹19,029 ಕೋಟಿ, ಐಸಿಐಸಿಐ ₹15,363 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ ₹10,250 ಕೋಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ₹7,507 ಕೋಟಿ, ಐಟಿಸಿ ₹2,809 ಕೋಟಿ, ಇನ್ಫೊಸಿಸ್‌ ₹2303 ಕೋಟಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾರುಕಟ್ಟೆ ಮೌಲ್ಯಕ್ಕೆ ₹2,141 ಕೋಟಿ ಸೇರ್ಪಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT