ಮಂಗಳವಾರ, ಸೆಪ್ಟೆಂಬರ್ 24, 2019
29 °C

ಅಲ್ಪಾವಧಿ ಹೂಡಿಕೆಗೆ ಬಯಸುತ್ತಿದ್ದೀರಾ? ಲಿಕ್ವಿಡ್ ಫಂಡ್ಸ್ ಬಗ್ಗೆ ತಿಳಿಯಿರಿ

Published:
Updated:

ಅಲ್ಪಾವಧಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ಹಾಗಿದ್ದರೆ ಲಿಕ್ವಿಡ್ ಫಂಡ್ಸ್ ಬಗ್ಗೆ ತಿಳುವಳಿಕೆ ಬಹುಮುಖ್ಯ

***

ನಮ್ಮ ಬಳಿ ಹೆಚ್ಚುವರಿ ಹಣವಿದ್ದರೆ ಅದನ್ನು ಹೇಗೆ ವಿನಿಯೋಗಿಸಬೇಕು ಎನ್ನುವ ಗೊಂದಲಕ್ಕೆ ಒಳಗಾಗುತ್ತೇವೆ. ಸ್ಪಷ್ಟ ನಿರ್ಧಾರಕ್ಕೆ ಬರದಿದ್ದರೆ ಈ ಹಣ ನಮ್ಮ ಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಯಲ್ಲೇ ಇರುತ್ತದೆ. ಹೆಚ್ಚುವರಿ ಹಣವನ್ನು ಬೇರೆ ಕಡೆಗಳಲ್ಲಿ ಹೂಡಿಕೆ ಮಾಡುವುದರಿಂದ ಉಳಿತಾಯ ಖಾತೆಯಿಂದ ಬರುವ ಅಲ್ಪ ಪ್ರಮಾಣದ ಬಡ್ಡಿಗಿಂತ ಹೆಚ್ಚಿನ ಲಾಭ ಪಡೆಯಬಹುದು. ಇಂತಹ ಸಂದರ್ಭದಲ್ಲಿ ಲಿಕ್ವಿಡ್ ಫಂಡ್ಸ್‌ಗಳಲ್ಲಿ ಹಣ ಹೂಡಿಕೆ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಲಿಕ್ವಿಡ್ ಫಂಡ್ಸ್ ಎಂದರೇನು?

ಲಿಕ್ವಿಡ್ ಫಂಡ್ಸ್‌ಗಳು ಡೆಟ್‌ ಮ್ಯೂಚುವಲ್ ಫಂಡ್ಸ್‌ಗಳಾಗಿರುತ್ತವೆ. ಅಲ್ಪಾವಧಿ ಸ್ಥಿರ ಆದಾಯ ತರುವ ಸರ್ಕಾರಿ, ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುವುದು. ಷೇರು ನಿಯಂತ್ರಣ ಮಂಡಳಿಯ (ಸೆಬಿ) ನಿಯಾಮವಳಿಗಳ ಪ್ರಕಾರ 91 ದಿನಗಳಲ್ಲಿ ಈ ಬಾಂಡ್‌ಗಳು ಪರಿಪಕ್ವತೆ ಹೊಂದುತ್ತವೆ. ಡೆಟ್‌ ಮ್ಯೂಚುವಲ್ ಫಂಡ್ ವಿಭಾಗದಲ್ಲಿ ಲಿಕ್ವಿಡ್ ಫಂಡ್ಸ್‌ಗಳು ಅತ್ಯಂತ ಕಡಿಮೆ ನಷ್ಟ ಸಾಧ್ಯತೆ ಹೊಂದಿರುತ್ತವೆ.

ತಕ್ಷಣ ನಗದು ಪಡೆದುಕೊಳ್ಳಬಹುದು

ನಿಮ್ಮ ಲಿಕ್ವಿಡ್ ಫಂಡ್ಸ್‌ಗಳನ್ನು ಮರಳಿಸಿ ತಕ್ಷಣ ನಗದು ಪಡೆದುಕೊಳ್ಳಬಹುದು. ಈ ಸೌಲಭ್ಯವನ್ನು ಕೆಲವು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು (ಎಎಂಸಿ) ನೀಡುತ್ತವೆ. ಈ ಸೇವೆಯ ಸಹಾಯದಿಂದ ಹೂಡಿಕೆದಾರರು ₹ 50 ಸಾವಿರದವರೆಗೂ ಅಥವಾ ತಮ್ಮ ಹೂಡಿಕೆಯ ಶೇಕಡ 90 ರಷ್ಟನ್ನು ನಗದು ರೂಪದಲ್ಲಿ ಹಿಂದೆ ಪಡೆದುಕೊಳ್ಳಬಹುದು.

ಏರುಪೇರು ಸಾಧ್ಯತೆ ಕಡಿಮೆ

ಉಳಿತಾಯ ಖಾತೆ ಮತ್ತು ಬ್ಯಾಂಕ್ ಸ್ಥಿರ ಠೇವಣಿಗೆ ಹೋಲಿಸಿದರೆ ಡೆಟ್‌ ಮ್ಯೂಚುವಲ್ ಫಂಡ್ಸ್ ಖಚಿತವಾದ ಲಾಭ ಒದಗಿಸುವುದಿಲ್ಲ. ಲಿಕ್ವಿಡ್ ಫಂಡ್ಸ್ ಒಳಗೊಂಡಂತೆ ಡೆಟ್ ಮ್ಯೂಚುವಲ್ ಫಂಡ್ಸ್ ಸ್ವಲ್ಪ ಮಟ್ಟಿಗಿನ ರಿಸ್ಕ್ ಒಳಗೊಂಡಿರುತ್ತವೆ. ಹಾಗಿದ್ದರೂ ಕೂಡ ಲಿಕ್ಟಿಡ್ ಫಂಡ್ಸ್‌ಗಳು ಸ್ಥಿರವಾದ ಲಾಭವನ್ನು ಒದಗಿಸಿಕೊಡುತ್ತವೆ.

ಈ ಸಂದರ್ಭದಲ್ಲಿ ಲಿಕ್ವಿಡ್ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡಬಹುದು

* ಬ್ಯಾಂಕ್‌ ಖಾತೆಯಲ್ಲಿ ಬಳಕೆ ಮಾಡದೆ ಅಧಿಕ ಹಣ ಉಳಿದಿದ್ದರೆ ಮತ್ತು ಅದನ್ನು ಬಳಕೆ ಮಾಡಲು ಇನ್ನೂ ಆಲೋಚಿಸಿರದಿದ್ದರೆ ಲಿಕ್ವಿಡ್ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡಬಹುದು

* ತುರ್ತು ಸಂದರ್ಭದಲ್ಲಿ ನಗದಿನ ಅವಶ್ಯಕತೆ ಇರುತ್ತದೆ. ಒಂದು ವೇಳೆ ಲಿಕ್ವಿಡ್ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡಿದ್ದರೆ ಸುಲಭವಾಗಿ ನಗದು ಪಡೆದುಕೊಳ್ಳಬಹುದು

* ಸಂಬಳ ಪಡೆಯುವವರು ಲಿಕ್ವಿಡ್ ಫಂಡ್ಸ್‌ಗಳಲ್ಲಿ ನೆಮ್ಮದಿಯಿಂದ ಹೂಡಿಕೆ ಮಾಡಬಹುದು. ಅವರಿಗೆ ಅಗತ್ಯವಿದ್ದಾಗ ವಾಪಸ್‌ ಪಡೆದುಕೊಳ್ಳಬಹುದು

ಸರಿಯಾದ ಲಿಕ್ವಿಡ್ ಫಂಡ್ಸ್ ಆಯ್ಕೆ ಮಾಡಿ

40ಕ್ಕಿಂತಲೂ ಹೆಚ್ಚಿನ ಲಿಕ್ವಿಡ್ ಫಂಡ್ಸ್‌ಗಳನ್ನು ವಿವಿಧ ಮ್ಯೂಚುವಲ್ ಫಂಡ್ಸ್ ಸಂಸ್ಥೆಗಳು ನೀಡುತ್ತವೆ. ಇಂಥ ಸಂದರ್ಭದಲ್ಲಿ ಲಿಕ್ವಿಡ್ ಫಂಡ್ಸ್ ಆಯ್ಕೆ ಸ್ವಲ್ಪ ಕಠಿಣ. ಈ ಕೆಳಗಿನ ಸಂಗತಿಗಳು ನಿಮ್ಮ ನೆರವಿಗೆ ಬರುತ್ತವೆ.

1. ಫಂಡ್ಸ್‌ಗಳ ನಿರ್ವಹಣೆಯಲ್ಲಿರುವ ಸಂಪತ್ತು ಎಷ್ಟು ಇದೆ ಎನ್ನುವುದನ್ನು ತಿಳಿದುಕೊಳ್ಳಿ. ಇದರಿಂದ ನಿವ್ವಳ ಆಸ್ತಿ ಮೌಲ್ಯದ ಮೇಲೆ ಪರಿಣಾಮ ಕಡಿಮೆ ಆಗಿ ಗ್ರಾಹಕರಿಗೆ ನಷ್ಟದ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ.

2. ಈ ಹಿಂದಿನ ಆದಾಯದ ಮೇಲೆ ಫಂಡ್ಸ್‌ಗಳ ಆಯ್ಕೆ ಬೇಡ. ಜಾಸ್ತಿ ಲಾಭ ನೀಡುತ್ತವೆ ಎನ್ನುವ ಉದ್ದೇಶದಿಂದ ಹೂಡಿಕೆ ಮಾಡಬೇಡಿ.

3. ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಉತ್ತಮವಾಗಿರುವ ಫಂಡ್ಸ್‌ಗಳ ಆಯ್ಕೆ ಉತ್ತಮ. ಇಂತಹ ಸಾಮರ್ಥ್ಯ ಅಧಿಕವಿದ್ದರೆ ಕ್ರೆಡಿಡ್ ರಿಸ್ಕ್ ಕಡಿಮೆ ಇರುತ್ತದೆ.

4. ಆಡಳಿತಾತ್ಮಕ ಉದ್ದೇಶಕ್ಕೆ ಕಡಿಮೆ ವೆಚ್ಚ ಮಾಡುವ (expense ratio) ಫಂಡ್ಸ್ ಆಯ್ಕೆ ಹೆಚ್ಚು ಸೂಕ್ತ

(ಪೇಟಿಎಂ ಮನಿ ಅಡ್ವೈಸರಿ)

Post Comments (+)