ಹೆಚ್ಚಿನ ಬಡ್ಡಿದರದ ನೂತನ ಠೇವಣಿ ಬಿಡುಗಡೆ ಮಾಡಿದ ಕೆವಿಜಿ ಬ್ಯಾಂಕ್

7

ಹೆಚ್ಚಿನ ಬಡ್ಡಿದರದ ನೂತನ ಠೇವಣಿ ಬಿಡುಗಡೆ ಮಾಡಿದ ಕೆವಿಜಿ ಬ್ಯಾಂಕ್

Published:
Updated:
Deccan Herald

ಧಾರವಾಡ: ‘ಜನಸಾಮಾನ್ಯರನ್ನು ಉಳಿತಾಯಕ್ಕೆ ಪ್ರೇರೇಪಿಸುವ ಮತ್ತು ಹಿರಿಯ ನಾಗರಿಕರ ಆಗ್ರಹಕ್ಕೆ ಗೌರವ ನೀಡಿ, ನೂತನ ಠೇವಣಿ ಯೋಜನೆಗೆ ಹೆಚ್ಚಿನ ಬಡ್ಡಿ ನೀಡಲು ಕರ್ನಾಟಕ ವಿಕಾಸ ಬ್ಯಾಂಕ್ ವತಿಯಿಂದ ನಿರ್ಧರಿಸಲಾಗಿದ್ದು, ಈ ಬಡ್ಡಿದರ ಸರ್ಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ಅಧಿಕವಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು. 

ಜನಸಾಮಾನ್ಯರಿಗೆ ಶೇ 7.10 ಹಾಗೆಯೇ, ಹಿರಿಯ ನಾಗರಿಕರಿಗೆ ಶೇ 7.60 ವಾರ್ಷಿಕ ಬಡ್ಡಿ ನೀಡುವ ‘ವಿಕಾಸ ಬೋನಂಜಾ 456’ ವಿಶೇಷ ಠೇವಣಿ ಯೋಜನೆಯನ್ನು ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ವಿಕಾಸ ಬೋನಂಜಾ 456ರ ಹೆಸರಿನ ಈ ಠೇವಣಿ ಯೋಜನೆಯಲ್ಲಿ ಕನಿಷ್ಠ ₹ 10 ಸಾವಿರ ಮತ್ತು ಗರಿಷ್ಠ ₹1 ಕೋಟಿ ಹೂಡಬಹುದು. 456 ದಿನಗಳ ಕಾಲಾವಧಿ ಠೇವಣಿಯಾಗಿರುವ ಈ ಯೋಜನೆಯಲ್ಲಿ, ಹಿರಿಯ ನಾಗರಿಕರಿಗೆ ಶೇ 7.89 ಮತ್ತು ಇತರರಿಗೆ ಶೇ 7.35 ವಾರ್ಷಿಕ ಪ್ರತಿಫಲ ದೊರೆಯಲಿದೆ. ಉಳಿದ ಠೇವಣಿ ಯೋಜನೆಯಂತೆ ಅವಧಿಪೂರ್ವ ಹಣ ಹಿಂಪಡೆಯಲು ಅಥವಾ ಠೇವಣಿ ಆಧಾರಿತ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಯೋಜನೆಯನ್ನು ಅತ್ಯಂತ ಸೀಮಿತ ಅವಧಿಗೆ ಜಾರಿಗೆ ತರಲಾಗಿದೆ’ ಎಂದರು.

‘ಸಂಪೂರ್ಣ ಸರ್ಕಾರಿ ಸ್ವಾಮಿತ್ವಕ್ಕೆ ಒಳಪಟ್ಟಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಸ್ತುತ ಒಂಬತ್ತು ಜಿಲ್ಲೆಗಳ ಕಾರ್ಯ ವ್ಯಾಪ್ತಿಯಲ್ಲಿ 636 ಶಾಖೆಗಳನ್ನು ಹೊಂದಿದ್ದು, ₹23,686 ಕೋಟಿ ವಹಿವಾಟು ಮಾಡುತ್ತಲಿದೆ. ಈ ಠೇವಣಿ ಯೋಜನೆಗೆ ಭಾರೀ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯಿದ್ದು, ಹಿರಿಯ ನಾಗರಿಕರು ಈ ಯೋಜನೆಯನ್ನು ಈಗಾಗಲೇ ಸ್ವಾಗತಿಸಿದ್ದಾರೆ. ಬ್ಯಾಂಕ್ ಈ ಠೇವಣಿ ಯೋಜನೆಯ ಮೂಲಕ ಉತ್ತಮ ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ’ ಎಂದರು.

ಬ್ಯಾಂಕಿನ ಮಹಾ ಪ್ರಬಂಧಕ ಎಸ್.ಎಂ. ಗೋರಬಾಳ, ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣರಾಜ ಅಡಿಗ, ಮುಖ್ಯ ಪ್ರಬಂಧಕ ಕೆ.ಟಿ. ಭಟ್, ಉಲ್ಲಾಸ ಗುನಗಾ, ಶ್ರೀಕಾಂತ ಹೆಗಡೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !