ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲಾ ವಿರುದ್ಧ ಗರ್ಗ್‌ ಅಸಮಾಧಾನ

Last Updated 31 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ:‘ನಾನು ಹಣಕಾಸು ಸಚಿವಾಲಯದಲ್ಲಿ ಇರುವುದು ನಿರ್ಮಲಾ ಸೀತಾರಾಮನ್‌ ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿಯೇ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿದ್ದರು’ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ ಶನಿವಾರ ಆರೋಪ ಮಾಡಿದ್ದಾರೆ.

‘ಹಣಕಾಸು ಸಚಿವಾಲಯಕ್ಕೆ ಬರುವಾಗಲೇ ನಿರ್ಮಲಾ ಅವರಿಗೆ ನನ್ನ ಬಗ್ಗೆ ಪೂರ್ವಗ್ರಹಗಳಿದ್ದವು. ಹೀಗಾಗಿ ವೈಯಕ್ತಿಕವಾಗಿ, ಆಡಳಿತಾತ್ಮಕವಾಗಿ ಉತ್ತಮ ಸಂಬಂಧವೇನೂ ಇರಲಿಲ್ಲ’ ಎಂದು ತಮ್ಮ ಬ್ಲಾಗ್‌ನಲ್ಲಿ ಗರ್ಗ್‌ ಬರೆದು
ಕೊಂಡಿದ್ದಾರೆ.

‘ಅವರಿಗೆ ನನ್ನಲ್ಲಿ ವಿಶ್ವಾಸ ಇದ್ದಂತೆ ಕಾಣುತ್ತಿರಲಿಲ್ಲ. ನನ್ನ ಜತೆ ಕೆಲಸ ಮಾಡಲು ಅವರಿಗೆ ಹಿತ ಎನ್ನಿಸುತ್ತಿರಲಿಲ್ಲ. ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಒಳಗಾಗಿ 2019ರ ಜೂನ್‌ನಲ್ಲಿಯೇ ನನ್ನನ್ನು ಹಣಕಾಸು ಸಚಿವಾಲಯದಿಂದ ವರ್ಗಾಯಿಸುವಂತೆ ಒತ್ತಾಯಿಸಿದ್ದರು. ಏಕೆಂದರೆ ಜುಲೈ 5ರಂದು ಬಜೆಟ್‌ ಮಂಡನೆ ಆಗುವುದಿತ್ತು’ ಎಂದು ಅವರು ಹೇಳಿದ್ದಾರೆ. ಆದರೆ ತಕ್ಷಣವೇ ಅವರ ಮನವಿಯನ್ನು ಸರ್ಕಾರ ಏಕೆ ಒಪ್ಪಲಿಲ್ಲ ಎನ್ನುವುದನ್ನು ಅವರು ಬ್ಲಾಗ್ ನಲ್ಲಿ ಹೇಳಿಲ್ಲ.

ಆರ್‌ಬಿಐನ ಹೆಚ್ಚುವರಿ ಮೀಸಲು ಹಣವನ್ನು ಸರ್ಕಾರಕ್ಕೆ ಲಾಭಾಂಶ ರೂಪದಲ್ಲಿ ನೀಡುವುದರ ಕುರಿತು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ಯಾಕೇಜ್ ನೀಡುವುದು, ಭಾಗಶಃ ಸಾಲ ಖಾತರಿ ಯೋಜನೆ ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳು ಇದ್ದವು. ಇದರಿಂದಾಗಿ ಕೇವಲ ವೈಯಕ್ತಿಕ ಬಾಂಧವ್ಯವಷ್ಟೇ ಅಲ್ಲದೆ, ಕಚೇರಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಬಾಂಧವ್ಯವೂ ಕೆಡಲಾರಂಭಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.

‘ಅವರೊಂದಿಗೆ ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ಆರಂಭದಲ್ಲಿಯೇ ಅನ್ನಿಸಿತ್ತು. ಜತೆಗೆ ದೇಶವನ್ನು ₹ 730 ಲಕ್ಷ ಕೋಟಿ ಆರ್ಥಿಕತೆಯಾಗಿ ರೂಪಿಸಲು ಅವಶ್ಯವಿರುವ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದೇ ಇರಬಹುದು’ ಎಂದೂ ಅನ್ನಿಸಿತ್ತು ಎಂದಿದ್ದಾರೆ.

2019ರ ಜುಲೈ 24ರಂದು ಗರ್ಗ್‌ ಅವರನ್ನು ಇಂಧನ ಸಚಿವಾಲಯದ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಯಿತು. ಆದೇಶ ಪ್ರತಿ ಸಿಕ್ಕ ಅರ್ಧ ಗಂಟೆಯ ಒಳಗಾಗಿಯೇ ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ತನ್ನ ನಿರ್ಧಾರಕ್ಕೂ ಹಣಕಾಸು ಸಚಿವಾಲಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಜುಲೈ 26ರಂದು ಗರ್ಗ್‌ ಒತ್ತಿ ಹೇಳಿದ್ದರು.

ಗರ್ಗ್‌ ಅವರ ಬ್ಲಾಗ್‌ ಬರಹದ ಕುರಿತು ಹಣಕಾಸು ಸಚಿವಾಲಯ ಮತ್ತು ಸೀತಾರಾಮನ್‌ ಅವರ ಕಚೇರಿಯು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT