ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಕೈಗಾರಿಕೆ ಸ್ಥಳಾಂತರ| ಭಾರತಕ್ಕೆ ಲಾಭವಾಗುವ ಖಾತರಿ ಇಲ್ಲ ಎಂದ ಬ್ಯಾನರ್ಜಿ

Last Updated 12 ಮೇ 2020, 19:45 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಕೊರೊನಾ ವೈರಾಣು ಪಿಡುಗಿನ ಕಾರಣಕ್ಕೆ ಚೀನಾದಿಂದ ಕೈಗಾರಿಕೆ ಮತ್ತು ಉದ್ದಿಮೆಗಳು ಬೇರೆಡೆ ಸ್ಥಳಾಂತರಗೊಳ್ಳುವುದರಿಂದ ಭಾರತಕ್ಕೆ ಹೆಚ್ಚು ಪ್ರಯೋಜನ ಆಗಲಿದೆಯೆಂದು ಖಚಿತವಾಗಿ ಹೇಳಲು ಬರುವುದಿಲ್ಲ’ ಎಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ಹೇಳಿದ್ದಾರೆ.

ಬಂಗಾಳಿ ಸುದ್ದಿ ಚಾನೆಲ್‌ ಎಬಿಪಿ ಆನಂದಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಚೀನಾದಿಂದ ಕಾಲ್ತೆಗೆಯುವ ಕೈಗಾರಿಕೆಗಳು ಭಾರತಕ್ಕೆ ಬರಲಿವೆ ಎಂದೂ ಅನೇಕರು ಹೇಳುತ್ತಿದ್ದಾರೆ. ಅದು ನಿಜವಲ್ಲ’ ಎಂದು ಹೇಳಿದ್ದಾರೆ.

‘ಒಂದು ವೇಳೆ ಚೀನಾ ತನ್ನ ಕರೆನ್ಸಿ ಯುವಾನ್‌ ಅಪಮೌಲ್ಯ ಮಾಡಿದರೆ ಎಲ್ಲರ ಲೆಕ್ಕಾಚಾರಗಳು ಏರುಪೇರಾಗಲಿವೆ. ಚೀನಾದ ಉತ್ಪನ್ನಗಳು ಅಗ್ಗವಾಗಲಿವೆ. ಆಗ ಜನರು ಚೀನಾದ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರೆಸಲಿದ್ದಾರೆ.

ವೆಚ್ಚದ ಜಿಡಿಪಿ ಅನುಪಾತ: ’ಆರ್ಥಿಕತೆಗೆ ಉತ್ತೇಜನ ನೀಡಲು ಅಮೆರಿಕ, ಇಂಗ್ಲೆಂಡ್‌ ಮತ್ತು ಜಪಾನ್‌ ತಮ್ಮ, ತಮ್ಮ ದೇಶಗಳ ಜಿಡಿಪಿಯ ಗರಿಷ್ಠ ಪಾಲನ್ನು ವೆಚ್ಚ ಮಾಡುತ್ತಿವೆ. ಅವುಗಳಿಗೆ ಹೋಲಿಸಿದರೆ ಭಾರತದ ವೆಚ್ಚ ತುಂಬ ಕಡಿಮೆ ಇದೆ. ಭಾರತವು ತನ್ನ ಒಟ್ಟು ಆಂತರಿಕ ಉತ್ಪನ್ನದ ಶೇ 1ಕ್ಕಿಂತ ಕಡಿಮೆ ಮೊತ್ತ (₹ 1.70 ಲಕ್ಷ ಕೋಟಿ) ವೆಚ್ಚ ಮಾಡುತ್ತಿದೆ. ಭಾರತ ಸರ್ಕಾರವು ಆರ್ಥಿಕತೆಗೆ ಚೇತರಿಕೆ ನೀಡಲು ಮಾಡುವ ವೆಚ್ಚದ ಜಿಡಿಪಿಯ ಅನುಪಾತವು ಹೆಚ್ಚಿಸಲು ಗಮನ ನೀಡಬೇಕು.

’ಜನರಲ್ಲಿ ಗರಿಷ್ಠ ಮಟ್ಟದ ಖರೀದಿ ಸಾಮರ್ಥ್ಯ ಅಂದರೆ ಅವರ ಬಳಿಯಲ್ಲಿ ಸಾಕಷ್ಟು ಹಣ ಇಲ್ಲದಿರುವುದೇ ಭಾರತದ ಆರ್ಥಿಕತೆಯ ಬಹುದೊಡ್ಡ ಸಮಸ್ಯೆಯಾಗಿದೆ. ಬಡವರ ಕಿಸೆಯಲ್ಲಿ ಕಾಸಿಲ್ಲ. ಹೀಗಾಗಿ ಸರಕುಗಳನ್ನು ಖರೀದಿಸುವ ಸಾಮರ್ಥ್ಯವೇ ಅವರಲ್ಲಿ ಇಲ್ಲ. ಇದೇ ಕಾರಣಕ್ಕೆ ಸರಕು ಮತ್ತು ಸೇವೆಗಳಿಗೆ ಬೇಡಿಕೆಯು ಗಮನಾರ್ಹವಾಗಿ ಕುಸಿದಿದೆ. ಜನರ ಕೈಯಲ್ಲಿ ಹಣ ಇರುವಂತೆ ಸರ್ಕಾರ ನೋಡಿಕೊಂಡರೆ ಅದರಿಂದ ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲಿವೆ. ಶ್ರೀಮಂತರಿಂದ ಇದು ಸಾಧ್ಯವಿಲ್ಲ. ಬಡವರಿಗೆ 3 ರಿಂದ 6 ತಿಂಗಳವರೆಗೆ ಹಂತ ಹಂತವಾಗಿ ಹಣ ಕೈಸೇರುವಂತೆ ಮಾಡಬೇಕು.

‘ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ತೋರುವುದು ಕೇಂದ್ರ ಸರ್ಕಾರದ ಹೊಣೆಯಾಗಿದೆ. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾವು ಚಿಂತಿಸುತ್ತಿಲ್ಲ. ಅವರಿಗೆ ಸೂರಿಲ್ಲ. ಕೈಯಲ್ಲಿ ಕಾಸಿಲ್ಲ. ಭಾರತದಲ್ಲಿ ಕೆಲಸಗಳಿಗೇನೂ ಕೊರತೆ ಇಲ್ಲ. ಬಡವರಿಗೆ ದುಡಿಮೆ ಒದಗಿಸಿ ಹಣ ನೀಡಬೇಕು. ಅಂತರ ಕಾಯ್ದುಕೊಂಡು ಆರ್ಥಿಕತೆಯನ್ನು ನಿರ್ವಹಿಸುವ ಬಗ್ಗೆ ಮಾತನಾಡುವುದು ತುಂಬ ಸುಲಭ. ವಾಸ್ತವದಲ್ಲಿ ಅದನ್ನು ಕಾರ್ಯಗತಗೊಳಿಸುವುದು ಹೇಳಿದಷ್ಟು ಸುಲಭವಲ್ಲ.

ರಾಜ್ಯದ ಆರ್ಥಿಕತೆಯು ಕೋವಿಡ್‌ ಬಿಕ್ಕಟ್ಟಿನಿಂದ ಹೊರ ಬಂದು ಪ್ರಗತಿಯಲ್ಲಿ ಮುನ್ನಡೆಯಲು ನೀಲನಕ್ಷೆ ತಯಾರಿಸಲು ಪಶ್ಚಿಮ ಬಂಗಾಳ ಸರ್ಕಾರವು ರಚಿಸಿರುವ ಜಾಗತಿಕ ಸಲಹಾ ಮಂಡಳಿಯಲ್ಲಿ ಅಭಿಜಿತ್‌ ಅವರೂ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT