ಮಂಗಳವಾರ, ಜುಲೈ 5, 2022
25 °C

ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್‌ 2023ರ ಮಾರ್ಚ್‌ ನಂತರ ನಿಷ್ಕ್ರಿಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ಯಾನ್‌ ಸಂಖ್ಯೆಯನ್ನು ಆಧಾರ್ ಜೊತೆ ಗುರುವಾರದ ಅಂತ್ಯದೊಳಗೆ (ಮಾರ್ಚ್ 31) ಜೋಡಣೆ ಮಾಡದೆ ಇದ್ದರೆ, ₹ 1,000ವರೆಗೆ ದಂಡ ಪಾವತಿಸಬೇಕಾಗಬಹುದು ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ಹೇಳಿದೆ. ಆಧಾರ್ ಜೊತೆ ಜೋಡಣೆ ಮಾಡದೆ ಇದ್ದರೆ ಅಂತಹ ಪ್ಯಾನ್‌ ಸಂಖ್ಯೆಗಳು 2023ರ ಮಾರ್ಚ್‌ವರೆಗೆ ಚಾಲ್ತಿಯಲ್ಲಿ ಇರುತ್ತವೆ ಎಂದೂ ಹೇಳಿದೆ.

ಪ್ಯಾನ್–ಆಧಾರ್ ಜೋಡಣೆಯ ಗಡುವನ್ನು ನೇರ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಡಿಟಿ) ಹಲವು ಬಾರಿ ವಿಸ್ತರಣೆ ಮಾಡಿದೆ. ಗಡುವು ಗುರುವಾರಕ್ಕೆ ಕೊನೆಗೊಳ್ಳಲಿದೆ. ಗುರುವಾರದ ನಂತರ, ಈ ವರ್ಷದ ಜೂನ್‌ 30ರೊಳಗೆ ಪ್ಯಾನ್–ಆಧಾರ್ ಜೋಡಣೆ ಮಾಡುವವರು ₹ 500 ದಂಡ ಪಾವತಿಸಬೇಕು. ಆ ತಾರೀಕಿನ ನಂತರದಲ್ಲಿ ದಂಡದ ಮೊತ್ತವು ₹ 1,000ಕ್ಕೆ ಹೆಚ್ಚಳ ಆಗಲಿದೆ ಎಂದು ಸಿಬಿಡಿಟಿ ಹೇಳಿದೆ.

ಪ್ಯಾನ್–ಆಧಾರ್ ಜೋಡಣೆ ಮಾಡದೆ ಇರುವವರು 2023ರ ಮಾರ್ಚ್‌ 31ರವರೆಗೆ ಪ್ಯಾನ್ ಸಂಖ್ಯೆ ಬಳಸಿ ಆದಾಯ ವಿವರ ಸಲ್ಲಿಸಬಹುದು, ತೆರಿಗೆ ರೀಫಂಡ್ ಪಡೆದುಕೊಳ್ಳಬಹುದು. 2023ರ ಮಾರ್ಚ್‌ 31ರವರೆಗೂ ಜೋಡಣೆ ಮಾಡದೆ ಇದ್ದರೆ, ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ. ಪ್ಯಾನ್ ಸಂಖ್ಯೆಯನ್ನು ಅಗತ್ಯ ಇರುವಲ್ಲಿ ಉಲ್ಲೇಖಿಸದೆ ಇದ್ದರೆ ಸಂಬಂಧಪಟ್ಟ ಕಾನೂನುಗಳ ಅಡಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಬಿಡಿಟಿ ಎಚ್ಚರಿಸಿದೆ.

ಜನವರಿ 24ರವರೆಗಿನ ಮಾಹಿತಿ ಅನ್ವಯ 43.34 ಕೋಟಿಗೂ ಹೆಚ್ಚಿನ ಪ್ಯಾನ್‌ ಸಂಖ್ಯೆಗಳು ಆಧಾರ್ ಜೊತೆ ಜೋಡಣೆ ಆಗಿವೆ. ಆಧಾರ್ ಜೊತೆ ಜೋಡಣೆಯಿಂದ ನಕಲಿ ಪ್ಯಾನ್ ಸಂಖ್ಯೆ ಪತ್ತೆ ಮಾಡಲು, ತೆರಿಗೆ ವಂಚನೆ ತಪ್ಪಿಸಲು ಆಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು