ಗುರುವಾರ , ಡಿಸೆಂಬರ್ 5, 2019
20 °C

ಪ್ಲಾಸ್ಟಿಕ್‌ ರಫ್ತಿಗೆ ವಿಪುಲ ಅವಕಾಶ

Published:
Updated:
Prajavani

ಬೆಂಗಳೂರು: ಪ್ಲಾಸ್ಟಿಕ್‌ ರಫ್ತು ಉತ್ತೇಜಿಸುವ ಮತ್ತು ಪ್ಲಾಸ್ಟಿಕ್‌ ತಯಾರಿಸುವ ಸಣ್ಣ ಉದ್ದಿಮೆಗಳಿಗೆ (ಎಸ್‌ಎಂಇ) ಮಾರುಕಟ್ಟೆ ವಿಸ್ತರಣೆಗೆ ನೆರವಾಗುವ ಉದ್ದೇಶಕ್ಕೆ ಪ್ಲಾಸ್ಟಿಕ್‌ ರಫ್ತು ಉತ್ತೇಜನಾ ಮಂಡಳಿಯು ಮುಂದಿನ ತಿಂಗಳು ಮುಂಬೈನಲ್ಲಿ ‘ಕ್ಯಾಪ್‌ಇಂಡಿಯಾ’ ಸಮಾವೇಶ ಏರ್ಪಡಿಸಿದೆ.

ಡಿ. 2 ರಿಂದ 4ರವರೆಗೆ ಬಾಂಬೆ ಎಕ್ಸಿಬಿಷನ್‌ ಸೆಂಟರ್‌ನಲ್ಲಿ ನಡೆಯಲಿರುವ ಐದನೆ ಕೆಮಿಕಲ್ಸ್‌ ಆ್ಯಂಡ್‌ ಪ್ಲಾಸ್ಟಿಕ್‌ ಪ್ರದರ್ಶನದಲ್ಲಿ 700 ವಿದೇಶಿ ಖರೀದಿದಾರರು ಭಾಗವಹಿಸುವ ನಿರೀಕ್ಷೆ ಇದೆ.

‘ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಆಶ್ರಯದಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಪ್ಲಾಸ್ಟಿಕ್‌ ರಫ್ತುದಾರರು ಅದರಲ್ಲೂ ವಿಶೇಷವಾಗಿ ಸಣ್ಣ ಪ್ರಮಾಣದ ರಫ್ತುದಾರರಿಗೆ ಮಾರುಕಟ್ಟೆ ಮತ್ತು ವಹಿವಾಟು ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ಉತ್ತರ ಅಮೆರಿಕ, ಯುರೋಪ್‌, ಆಸಿಯಾನ್‌ ದೇಶಗಳಿಗೆ ರಫ್ತು ಮಾಡಲು ವಿಪುಲ ಅವಕಾಶಗಳಿವೆ’ ಎಂದು ಪ್ಲಾಸ್ಟಿಕ್‌ ರಫ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷರಾಗಿರುವ ರವೀಶ್ ಕಾಮತ್‌ ಹೇಳಿದ್ದಾರೆ.

‘ಪ್ರತ್ಯಕ್ಷ ಮತ್ತು ಪರೋಕ್ಷ ಬಗೆಯಲ್ಲಿ 30 ಲಕ್ಷ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿರುವ ಪ್ಲಾಸ್ಟಿಕ್‌ ತಯಾರಿಕಾ ಉದ್ದಿಮೆಗೆ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಿ ನೆರವಾಗುವುದು ಮಂಡಳಿಯ ಉದ್ದೇಶವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ₹ 1.75 ಲಕ್ಷ ಕೋಟಿ ಮೊತ್ತದ ಪ್ಲಾಸ್ಟಿಕ್‌ ರಫ್ತು ವಹಿವಾಟು ನಡೆಸುವ ಗುರಿ ನಿಗದಿಪಡಿಸಲಾಗಿದೆ. ಪ್ಲಾಸ್ಟಿಕ್‌ ತಯಾರಕರಿಗೆ ಪ್ರದರ್ಶನದಲ್ಲಿ ಭಾಗವಹಿಸುವ ವೆಚ್ಚದಲ್ಲಿ ಶೇ 50 ಸಬ್ಸಿಡಿ ನೀಡಲಾಗುತ್ತಿದೆ. ತಯಾರಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

‘ಮಾರಾಟಗಾರರು, ಖರೀದಿದಾರರ ಮಧ್ಯೆ ನೇರ ವಹಿವಾಟು ನಡೆಸಲು ಇಲ್ಲಿ ಅವಕಾಶ ಇರಲಿದೆ. ರಫ್ತಿಗೆ ಸಂಬಂಧಿಸಿದಂತೆ ಸಕಲ ನೆರವು ನೀಡಲಾಗುವುದು. ಹಣ ಪಾವತಿಗೆ ಮಂಡಳಿಯು ಖಾತರಿ ನೀಡಲಿದೆ.

‘ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ದೀರ್ಘಾವಧಿಯ‌ಲ್ಲಿ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪರ್ಯಾಯ ಪ್ಯಾಕಿಂಗ್‌ ಪದಾರ್ಥ ಬಳಕೆಗೆ ತಂದಾಗ ಮಾತ್ರ ಹೆಚ್ಚು ಪ್ರಯೋಜನ ದೊರೆಯಲಿದೆ. ಉದ್ದಿಮೆ ಮುಂದಿರುವ ಈ ಸವಾಲು ಎದುರಿಸಲು ಮಂಡಳಿಯು ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)