ಭಾನುವಾರ, ಸೆಪ್ಟೆಂಬರ್ 19, 2021
24 °C

ಗತಿಶಕ್ತಿ ಯೋಜನೆ ಪ್ರಕಟಿಸಿದ ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯೋಗ ಅವಕಾಶಗಳನ್ನು, ಕೈಗಾರಿಕೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ‘ಗತಿಶಕ್ತಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಕಟಿಸಿದರು. ಈ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ₹ 100 ಲಕ್ಷ ಕೋಟಿ ವೆಚ್ಚ ಮಾಡುವ ಗುರಿ ಇರುವುದಾಗಿ ತಿಳಿಸಿದರು.

‘ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಯೋಜನೆಯನ್ನು ದೇಶವು ಶೀಘ್ರದಲ್ಲಿಯೇ ಜಾರಿಗೊಳಿಸಲಿದೆ’ ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಹೇಳಿದರು. ಈ ಯೋಜನೆಯು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದರು.

‘ಗತಿಶಕ್ತಿ’ಯು ಇಡೀ ದೇಶದಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕುವ ಮಹಾಯೋಜನೆ. ಇದು ಅರ್ಥ ವ್ಯವಸ್ಥೆಗೆ ಸಮಗ್ರ, ಎಲ್ಲವನ್ನೂ ಒಳಗೊಳ್ಳುವ ಪಥವೊಂದನ್ನು ಹಾಕಿಕೊಡುತ್ತದೆ ಎಂದು ಹೇಳಿದರು.

‘ಗತಿಶಕ್ತಿ ಯೋಜನೆಯು ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ, ಕೈಗಾರಿಕೆಗಳಲ್ಲಿನ ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಶದ ತಯಾರಿಕಾ ವಲಯವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗುವಲ್ಲಿ ನೆರವಾಗಲಿದೆ’ ಎಂದು ವಿವರಿಸಿದರು. ಈ ಯೋಜನೆಯು ಭವಿಷ್ಯದಲ್ಲಿ ಆರ್ಥಿಕ ವಲಯಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂದರು.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವದರ್ಜೆಯ ಉತ್ಪನ್ನಗಳನ್ನು ಸಿದ್ಧಪಡಿಸಲು ಭಾರತವು ಒಟ್ಟಾಗಿ ಕೆಲಸ ಮಾಡಬೇಕಿದೆ. ಅಭಿವೃದ್ಧಿಯನ್ನು ಇನ್ನಷ್ಟು ಹೆಚ್ಚಿಸಲು ದೇಶವು ತಯಾರಿಕಾ ವಲಯ ಹಾಗೂ ರಫ್ತಿನ ಮೇಲೆ ಗಮನ ನೀಡಬೇಕಿದೆ ಎಂದೂ ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು