ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಆಸ್ತಿ: ದೆಹಲಿ ಕೋರ್ಟ್‌ ಮೊರೆ ಹೋದ ಬೆಂಗಳೂರು ಪೊಲೀಸರು

159 ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕರಣ
Last Updated 5 ಜುಲೈ 2018, 20:22 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರಿಗೆ ಸೇರಿದ ಬೆಂಗಳೂರಿನಲ್ಲಿನ 159 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೊಸ ನಿರ್ದೇಶನ ಪಡೆಯಲು ಬೆಂಗಳೂರು ಪೊಲೀಸರು ದೆಹಲಿ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಮುಂಬೈ ಘಟಕವು ಈಗಾಗಲೇ ಈ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಕೆಲ ಆಸ್ತಿಗಳು ಪರಿಸಮಾಪ್ತಿ ಪ್ರಕ್ರಿಯೆಗೆ ಒಳಪಟ್ಟಿವೆ ಎಂದು ಪೊಲೀಸರು, ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದೀಪಕ್‌ ಶೆರಾವತ್‌ ಅವರಿಗೆ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಸ್ತಿಗಳನ್ನು ವಶಪಡಿಸಿಕೊಳ್ಳಲು ದೆಹಲಿ ಕೋರ್ಟ್‌ ಮೇ 9ರಂದು ಬೆಂಗಳೂರು ಪೊಲೀಸರಿಗೆ ಹೊಸ ನಿರ್ದೇಶನ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಹಾಯಕ ರೆವಿನ್ಯೂ ಅಧಿಕಾರಿಯನ್ನು ಸಂಪರ್ಕಿಸಿದ ಪೊಲೀಸರು, ಮಲ್ಯ ಅವರ ಆಸ್ತಿಗಳ ವಿವರ ನೀಡಲು ಮನವಿ ಮಾಡಿಕೊಂಡಿದ್ದರು. ಬಿಬಿಎಂಪಿ, 159 ಆಸ್ತಿಗಳ ವಿವರ ನೀಡಿತ್ತು.

ಪೊಲೀಸರು ಶಿವಾಜಿನಗರದಲ್ಲಿನ ಸಬ್‌ ರೆಜಿಸ್ಟ್ರಾರ್‌ ಕಚೇರಿ ಸಂಪರ್ಕಿಸಿದಾಗ 2004 ರಿಂದ 2018ರ ಜೂನ್‌ವರೆಗಿನ ಮಾಹಿತಿ ಸಿಕ್ಕಿತ್ತು. ಅದರ ಪ್ರಕಾರ, ಈ ಆಸ್ತಿಗಳೆಲ್ಲ ಕರ್ನಾಟಕ ಹೈಕೋರ್ಟ್‌ ನೇಮಿಸಿರುವ ಪರಿಸಮಾಪ್ತಿ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರುವುದು ಕಂಡು ಬಂದಿತು. ಇವುಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳೆಲ್ಲ ವಿಫಲಗೊಂಡಿರುವುದನ್ನು ಪೊಲೀಸರು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ಅಕ್ಟೋಬರ್‌ 11ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದೆ.

ಬ್ಯಾಂಕ್‌ಗಳ ಪರ ಆದೇಶ
ಲಂಡನ್‌ (ಪಿಟಿಐ):
ಉದ್ಯಮಿ ವಿಜಯ ಮಲ್ಯ ಅವರಿಂದ ಬಾಕಿ ಸಾಲ ವಸೂಲಿ ಮಾಡುವ ಸಂಬಂಧ ಭಾರತದ 13 ಬ್ಯಾಂಕ್‌ಗಳ ಪರವಾಗಿ ಬ್ರಿಟನ್‌ ಹೈಕೋರ್ಟ್‌ ಆದೇಶ ಜಾರಿ ಮಾಡಿದೆ.

ಇದರಿಂದ ಬ್ರಿಟನ್‌ ಹೈಕೋರ್ಟ್‌ನ ಆದೇಶ ಅನುಷ್ಠಾನಗೊಳಿಸುವ ಅಧಿಕಾರಿಯು ಲಂಡನ್‌ ಸಮೀಪದ ಹರ್ಟ್‌ಫೋರ್ಡ್‌ಷೈರ್‌ನ ಆಸ್ತಿಗಳನ್ನು ಪರಿಶೀಲಿಸಲು ಅವಕಾಶ ದೊರೆಯಲಿದೆ. ಜತೆಗೆ ಅಧಿಕಾರಿ ಮತ್ತು ಅವರ ಏಜೆಂಟರು ಮಲ್ಯ ಅವರು ವಾಸಿಸುತ್ತಿರುವ ಇತರ ಸ್ಥಳಗಳಿಗೂ ಪ್ರವೇಶಿಸಬಹುದು. ಸಾಲ ನೀಡಿದ ಬ್ಯಾಂಕ್‌ಗಳು ಈ ಆದೇಶವನ್ನು ಜಾರಿಗೊಳಿಸಬಹುದು. ಈ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಪರವಾನಗಿ ನೀಡುವಂತೆ ಮಲ್ಯ ಅವರು ಮೇಲ್ಮನವಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT