ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಕಾಳಿನ ಇಳುವರಿ, ದರವೂ ಕುಸಿತ

ಆರಂಭವಾಗದ ಖರೀದಿ ಕೇಂದ್ರ, ಲಭಿಸದ ಬೆಂಬಲ ಬೆಲೆ; ರೈತ ಕಂಗಾಲು
Last Updated 23 ಆಗಸ್ಟ್ 2018, 17:52 IST
ಅಕ್ಷರ ಗಾತ್ರ

ಗದಗ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರುಕಾಳು ಮಾರುಕಟ್ಟೆ ಪ್ರವೇಶಿಸಿದ್ದು, ರೈತರಿಗೆ ಸಮರ್ಪಕ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಇಳುವರಿ ಗಣನೀಯವಾಗಿ ಕುಸಿದಿದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಆರಂಭವಾಗದಿರುವುದು ಕೂಡ ರೈತರ ಸಂಕಷ್ಟ ಹೆಚ್ಚಿಸಿದೆ.

ಎರಡು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹8,500 ದಾಟಿದ್ದ ಹೆಸರಿನ ಬೆಲೆ ಈಗ ಸರಾಸರಿ ₹4,500ಕ್ಕೆ ತಗ್ಗಿದೆ. ಗುರುವಾರ ಇಲ್ಲಿನ ಎಪಿಎಂಸಿಗೆ 7,627 ಕ್ವಿಂಟಲ್‌ ಹೆಸರು ಆವಕವಾಗಿತ್ತು. ಕನಿಷ್ಠ ₹2,500ರಿಂದ ಗರಿಷ್ಠ ₹6,100 ದರದಲ್ಲಿ ಮಾರಾಟವಾಯಿತು.

ಗದಗ ಎಪಿಎಂಸಿ ರಾಜ್ಯದಲ್ಲೇ ಹೆಸರು ಕಾಳಿನ ಅಗ್ರ ಮಾರುಕಟ್ಟೆ. ಹಂಗಾಮಿನಲ್ಲಿ ಪ್ರತಿನಿತ್ಯ ಸರಾಸರಿ 7 ಸಾವಿರ ಕ್ವಿಂಟಲ್‌ನಷ್ಟು ಹೆಸರು ಇಲ್ಲಿಗೆ ಆವಕವಾಗುತ್ತದೆ. ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಪಕ್ಕದ ಜಿಲ್ಲೆಗಳಿಂದಲೂ ರೈತರು ಈ ಮಾರುಕಟ್ಟೆಗೆ ತಂದು ಮಾರುತ್ತಾರೆ.

‘ರಫ್ತು’ ಗುಣಮಟ್ಟದ ಹೆಸರುಕಾಳು ಸಿಗುತ್ತದೆ ಎಂಬ ಕಾರಣಕ್ಕೆ ವ್ಯಾಪಾರಿಗಳೂ ಇದೇ ಎಪಿಎಂಸಿಯಿಂದ ಖರೀದಿಗೆ ಆಸಕ್ತಿ ತೋರಿಸುತ್ತಾರೆ. ಆದರೆ, ಈ ಬಾರಿ ಬೆಲೆ ಕುಸಿತದಿಂದ ಬೆಳೆಗೆ ಖರ್ಚು ಮಾಡಿದ ಹಣವೂ ಬಾರದಂತಾಗಿದೆ ಎನ್ನುವುದು ರೈತರ ನೋವು.

ಹಳದಿ ರೋಗದಿಂದ ಹೆಸರುಕಾಳಿನ ಗಾತ್ರ ಮತ್ತು ಗುಣಮಟ್ಟ ಕುಸಿದಿದೆ. ಕಟಾವಿನ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ತೇವಾಂಶ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ರಫ್ತು ಗುಣಮಟ್ಟದ ಮಾಲು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಬೆಲೆ ಕಡಿಮೆಯಾಗಿದೆ ಎನ್ನುವುದು ವ್ಯಾಪಾರಿಗಳ ಸಮರ್ಥನೆ.

‘ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆಯಲು ಮಾರ್ಗಸೂಚಿ ಪ್ರಕಟಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ. ಲಮಾಣಿ ತಿಳಿಸಿದ್ದಾರೆ.

***

ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆಯಲು ಮಾರ್ಗಸೂಚಿ ಪ್ರಕಟಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಆ.10ರಂದು ಪ್ರಸ್ತಾವ ಸಲ್ಲಿಸಿದ್ದೇವೆ
– ವಿ.ಎಂ.ಲಮಾಣಿ‌, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ

ಮಳಿ ನಂಬಿ ಹೆಸರು ಬಿತ್ತಿದ್ವಿ. ಬಿತ್ತು ಟೈಮ್‌ನ್ಯಾಗ ಮಳಿ ಇತ್ತು. ಆಮ್ಯಾಲೆ ಮಳೀನೇ ಆಗಿಲ್ಲ. ಹೀಂಗಾಗಿ ಹೆಸರ ಪೂರ್ತಿ ಹಾಳಾತ ನೋಡ್ರಿ. ಹಾಕಿದ ರೊಕ್ಕನ ಬರದಂಗ ಆಗೇತಿ.

– ಮಹೇಶ ಪೂಜಾರ, ಗದುಗಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT