ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸ್ಥಿರಾಸ್ತಿ ಖರೀದಿ ದುಬಾರಿ

Last Updated 5 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಿಸಲು ರಾಜ್ಯ ಸರ್ಕಾರವು ಉದ್ದೇಶಿಸಿರುವುದರಿಂದ ಬೆಂಗಳೂರಿನಲ್ಲಿ ಸ್ಥಿರಾಸ್ತಿ ಖರೀದಿ ವೆಚ್ಚವು ಶೇ 2 ರಿಂದ ಶೇ 3ರಷ್ಟು ಹೆಚ್ಚಾಗಲಿದೆ.

ಮಾರ್ಗಸೂಚಿ ದರಗಳ ಜತೆಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳೂ ಹೆಚ್ಚಳಗೊಳ್ಳಲಿವೆ. ₹ 35 ಲಕ್ಷದ ಸ್ಥಿರಾಸ್ತಿ ಖರೀದಿಸಲು ಖರೀದಿದಾರರು ಹೆಚ್ಚುವರಿಯಾಗಿ ₹ 70 ಸಾವಿರದಿಂದ ₹ 1 ಲಕ್ಷದವರೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮದ ಮೂಲಗಳು ತಿಳಿಸಿವೆ.

‘ಮಾರ್ಗಸೂಚಿ ದರಗಳು ಹೆಚ್ಚಿದಂತೆ ಅದಕ್ಕೆ ಸಂಬಂಧಿಸಿದಂತೆ ನೋಂದಣಿ ಮತ್ತಿತರ ಶುಲ್ಕಗಳೂ ಹೆಚ್ಚಳಗೊಳ್ಳುತ್ತವೆ. ಬಂಡವಾಳ ಗಳಿಕೆ ತೆರಿಗೆಯೂ ಏರಿಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ತಮ್ಮ ಗೃಹ ನಿರ್ಮಾಣ ಯೋಜನೆಗಳ ವೆಚ್ಚವನ್ನು ಕ್ರಮೇಣ ಹೆಚ್ಚಿಸಿವೆ. ಮಾರ್ಗಸೂಚಿ ದರ ಹೆಚ್ಚಿಸುವ ಈ ಅಕಾಲಿಕ ನಿರ್ಧಾರವು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿನ ಖರೀದಿ ಚಟುವಟಿಕೆಗಳನ್ನು ಕುಂಠಿತಗೊಳಿಸಲಿದೆ’ ಎಂದು ಕಾರ್ಲೆ ಗ್ರೂಪ್‌ ಆಫ್‌ ಕಂಪನಿಯ ಸಿಎಫ್‌ಒ ಗುರುರಾಜ್‌ ಭಟ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆರ್‌ಬಿಐನ ಹಣಕಾಸು ನೀತಿಯು ಈಗಾಗಲೇ ನಗದು ಲಭ್ಯತೆ ಕಠಿಣಗೊಳಿಸಿದೆ. ಗೃಹ ಸಾಲಗಳ ಮೇಲಿನ ಬಡ್ಡಿಯೂ ಹೆಚ್ಚಳಗೊಳ್ಳುತ್ತಿದೆ. ಹೀಗಾಗಿ ಅನೇಕರು ಮನೆ ಖರೀದಿ ನಿರ್ಧಾರವನ್ನು ಮುಂದೂಡಬಹುದು. ಕಾದು ನೋಡುವ ತಂತ್ರ ಅನುಸರಿಸಬಹುದು’ ಎಂದು ಹೇಳಿದ್ದಾರೆ.

‘ನೋಟು ರದ್ದತಿ, ರೇರಾ ಜಾರಿಯಂತಹ ಅನೇಕ ಸುಧಾರಣಾ ಕ್ರಮಗಳ ಕಾರಣಕ್ಕೆ ಕುಂಠಿತಗೊಂಡಿದ್ದ ಖರೀದಿ ಚಟುವಟಿಕೆಯು ಇತ್ತೀಚೆಗೆ ಚೇತರಿಕೆಯ ಹಾದಿಗೆ ಮರಳಿತ್ತು. ನಗರದಲ್ಲಿ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸ್ಥಿರಾಸ್ತಿಗಳ ಮಾರಾಟವು ಹೆಚ್ಚಳಗೊಂಡಿತ್ತು. ಇಂತಹ ಸಂದರ್ಭದಲ್ಲಿಯೇ ಮಾರ್ಗಸೂಚಿ ದರಗಳನ್ನು ಶೇ 5 ರಿಂದ ಶೇ 20ರವರೆಗೆ ಪರಿಷ್ಕರಿಸಲು ಮುಂದಾಗಿರುವುದು ರಿಯಲ್‌ ಎಸ್ಟೇಟ್‌ ವಲಯದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸತತ ಆರು ತ್ರೈಮಾಸಿಕಗಳ ಅವಧಿಯಲ್ಲಿ ಕುಂಠಿತ ಮಾರಾಟ ಕಂಡು ಬಂದಿತ್ತು. ಹೊಸ ಗೃಹ ನಿರ್ಮಾಣ ಯೋಜನೆಗಳನ್ನು ಆರಂಭಿಸುವುದರಲ್ಲಿಯೂ ಪ್ರಗತಿ ನಿಧಾನಗೊಂಡಿತ್ತು. ಮಾರ್ಗಸೂಚಿ ದರ ಹೆಚ್ಚಳ ಪ್ರಸ್ತಾವದಿಂದ ಸ್ಥಿರಾಸ್ತಿಗಳು ಇನ್ನಷ್ಟು ತುಟ್ಟಿಯಾಗಲಿವೆ’ ಎಂದು ಜಾಗತಿಕ ಸ್ಥಿರಾಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾದ ಹಿರಿಯ ವ್ಯವಸ್ಥಾಪಕ ಶಾಂತನು ಮಜುಂದಾರ್‌ ಅವರು ಹೇಳಿದ್ದಾರೆ.

‘ರಿಯಲ್ ಎಸ್ಟೇಟ್‌ ಉದ್ದಿಮೆಯು ಒತ್ತಡದಲ್ಲಿ ಇರುವ ಸಂದರ್ಭದಲ್ಲಿ ತೆಗೆದುಕೊಂಡಿರುವ ಇಂತಹ ನಿರ್ಧಾರವು ಸರಿಯಲ್ಲ’ ಎಂದು ಪುರವಂಕರ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಶೀಷ್‌ ಆರ್‌. ಪುರವಂಕರ ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT