ಬುಧವಾರ, ಆಗಸ್ಟ್ 4, 2021
22 °C
ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್‌ ವಿಶ್ಲೇಷಣೆ

ಜಿಡಿಪಿ ವೃದ್ಧಿ | ಆರ್ಥಿಕ ಸುಧಾರಣಾ ಕ್ರಮಗಳ ಪಾತ್ರ ಮುಖ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಆರ್ಥಿಕತೆಯು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಶೇ 6.5 ರಿಂದ ಶೇ 7ರಷ್ಟು ವೃದ್ಧಿ ಸಾಧಿಸಬಹುದು ಎಂದು ಅಮೆರಿಕದ ಕ್ರೆಡಿಟ್‌ ರೇಟಿಂಗ್‌ ಕಂಪನಿ ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಅಂದಾಜಿಸಿದೆ.

ಪ್ರಸಕ್ತ ವರ್ಷ ತೀವ್ರವಾಗಿ ಬಾಧಿತಗೊಳ್ಳಲಿರುವ ಆರ್ಥಿಕತೆಯು ಚೇತರಿಕೆಯ ಹಾದಿಗೆ ಮರಳಲು ಆರ್ಥಿಕ ಸುಧಾರಣಾ ಕ್ರಮಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. 2020–21ರಲ್ಲಿ ಜಿಡಿಪಿ ತೀವ್ರವಾಗಿ ಕುಸಿತ ಕಂಡರೂ, ನಂತರದ ದಿನಗಳಲ್ಲಿ ತನ್ನದೇ ಗುಂಪಿನ ಇತರ ದೇಶಗಳಿಗೆ ಹೋಲಿಸಿದರೆ ಉತ್ತಮ ಸಾಧನೆ ಮಾಡಲಿದೆ. ಭಾರತದ ಸಾಲ ಮರುಪಾವತಿ ಸಾಮರ್ಥ್ಯ ಸುಸ್ಥಿರದಲ್ಲಿ ಇರಲು ಗರಿಷ್ಠ ಮಟ್ಟದ ವೃದ್ಧಿ ದರ ಅಗತ್ಯ ಎಂದು ತಿಳಿಸಿದೆ. ರೇಟಿಂಗ್‌ ಸಂಸ್ಥೆಯು, ಸತತ 13ನೇ ವರ್ಷವೂ ಭಾರತದ ಹೂಡಿಕೆ ದರ್ಜೆಯು ಅತ್ಯಂತ ಮಟ್ಟದಲ್ಲಿ ಇರಿಸಿದ ನಂತರ ಈ ವಿಶ್ಲೇಷಣೆ ಮಾಡಿದೆ.

ಈ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 5ರಷ್ಟು ಕುಸಿತ ಕಾಣಲಿದೆ. ಮುಂದಿನ ವರ್ಷ ಶೇ 8.5ರಷ್ಟು ವೃದ್ಧಿ ದಾಖಲಿಸಲಿದೆ. ಕೋವಿಡ್‌ ಪಿಡುಗು ಆರ್ಥಿಕತೆಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದರೆ ಭಾರತದ ರೇಟಿಂಗ್‌ ತಗ್ಗಿಸುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದೆ.

‘ಕೋವಿಡ್-19 ಬಿಕ್ಕಟ್ಟಿನಿಂದಾಗಿ ಭಾರತವೊಂದೇ ಬಾಧಿತವಾಗಿಲ್ಲ. ನಾವೆಲ್ಲ ಅಸಾಮಾನ್ಯ ಪರಿಸ್ಥಿತಿಯಲ್ಲಿ ಇದ್ದೇವೆ. ಭವಿಷ್ಯದ ರೇಟಿಂಗ್‌ ನಿರ್ಧರಿಸುವಲ್ಲಿ ಚೇತರಿಕೆಯ ಸ್ವರೂಪ ಮತ್ತು ಸಾಮರ್ಥ್ಯವು ಮುಖ್ಯವಾಗಿರಲಿದೆ’ ಎಂದು ಕಂಪನಿಯ ವಿಶ್ಲೇಷಣಾ ವಿಭಾಗದ ನಿರ್ದೇಶಕ ಆ್ಯಂಡ್ರೂ ವುಡ್‌ ಹೇಳಿದ್ದಾರೆ. ಅಂತರ್ಜಾಲ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು