ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌; ‘ರೇರಾ’ ನಿಯಮ ಕಠಿಣ

ಹೊಸ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆ ಪ್ರಕಟ
Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಕ್ಷೇತ್ರದ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಫ್ಲ್ಯಾಟ್‌ ಖರೀದಿದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ‘ರೇರಾ’ ನಿಯಮಗಳನ್ನು ಕಠಿಣಗೊಳಿಸಲಾಗಿದೆ.

ಈ ಸಂಬಂಧ ಕರ್ನಾಟಕ ರಿಯಲ್‌ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ಕೆಆರ್‌ಇಆರ್‌ಎ) ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಗೃಹ ನಿರ್ಮಾಣ ಯೋಜನೆಗಳನ್ನು ಅಭಿವೃದ್ಧಿಪಡಿಸುವವರು ತಮ್ಮ ಹೊಸ ಯೋಜನೆಗಳಿಗೆ ಸಂಬಂಧಿಸಿದ ಪತ್ರಿಕಾ ಜಾಹೀರಾತುಗಳಲ್ಲಿ ‘ರೇರಾ’ ನೋಂದಣಿ ಸಂಖ್ಯೆಯನ್ನು ಎದ್ದು ಕಾಣುವ ರೀತಿಯಲ್ಲಿ ಪ್ರಕಟಿಸಬೇಕು. ಭೂ ಮಾಲೀಕರ ಹೆಸರುಗಳನ್ನು ನೋಂದಣಿ ಮಾಡಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.

ನೋಂದಣಿ ಸಂಖ್ಯೆಯನ್ನು ಪತ್ರಿಕಾ ಜಾಹೀರಾತುಗಳ ಮೇಲ್ಭಾಗದ ಬಲ ಮೂಲೆಯಲ್ಲಿ ಮತ್ತು ಹೋರ್ಡಿಂಗ್ಸ್‌ಗಳಲ್ಲಿ ನಮೂದಿಸಬೇಕು. ಎಲೆಕ್ಟ್ರಾನಿಕ್‌ ಮಾಧ್ಯಮ, ಎಫ್‌ಎಂ ಮತ್ತು ಎಸ್‌ಎಂಎಸ್‌ಗಳ ಮೂಲಕ ನೀಡುವ ಮಾಹಿತಿಯಲ್ಲಿಯೂ ಈ ವಿವರ ಉಲ್ಲೇಖಿಸಬೇಕು. ಪತ್ರಿಕಾ ಜಾಹೀರಾತುಗಳಲ್ಲಿ ಪ್ರಾಧಿಕಾರದ ಅಂತರ್ಜಾಲ ವಿಳಾಸವನ್ನೂ (www.rera.karnataka.gov.in) ನಮೂದಿಸಬೇಕು ಎಂದು ‘ಕೆಆರ್‌ಇಆರ್‌ಎ’ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಒಂದು ವೇಳೆ, ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರವನ್ನು 2017ರ ಜುಲೈ 11ರ ಮುಂಚೆಯೇ ಪಡೆದುಕೊಂಡಿದ್ದರೆ ಅದನ್ನೂ ಜಾಹೀರಾತಿನಲ್ಲಿ ಉಲ್ಲೇಖಿಸಬೇಕು. ಗೃಹ ನಿರ್ಮಾಣ ಯೋಜನೆಯ ಸ್ಥಳದಲ್ಲಿಯೂ ‘ಕೆಆರ್‌ಇಆರ್‌ಎ’ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದೂ ಸಲಹೆ ನೀಡಲಾಗಿದೆ.

ಈ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ಪ್ರವರ್ತಕರು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 ಮತ್ತು ಕರ್ನಾಟಕ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು 2017’ರ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಭೂ ಮಾಲೀಕರ ಸಹಭಾಗಿತ್ವದಲ್ಲಿ ರಿಯಲ್‌ ಎಸ್ಟೇಟ್ ಯೋಜನೆ ಕೈಗೆತ್ತಿಕೊಂಡಾಗ ಭೂಮಿಯ ಮಾಲೀಕರು / ಪ್ರವರ್ತಕರ ಹೆಸರುಗಳನ್ನು ಪ್ರಾಧಿಕಾರದಲ್ಲಿ ನೋಂದಣಿ ಮಾಡಬೇಕು ಎಂದೂ ಪ್ರಾಧಿಕಾರವು ಇನ್ನೊಂದು ಸುತ್ತೋಲೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT