ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಲ್ಲರೆ ಹಣದುಬ್ಬರ: ಒಂದು ವರ್ಷದ ಕನಿಷ್ಠ

ತರಕಾರಿ ಬೆಲೆ ಏರಿಕೆ; ತಗ್ಗಿದ ಹಣ್ಣುಗಳ ಬೆಲೆ
Published 12 ಜೂನ್ 2024, 15:41 IST
Last Updated 12 ಜೂನ್ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಿನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ 4.75ಕ್ಕೆ ಇಳಿಕೆಯಾಗಿದೆ. 

ಕೆಲವು ಆಹಾರ ಪದಾರ್ಥಗಳ ಬೆಲೆಯಲ್ಲಿ ಕಡಿಮೆಯಾಗಿರುವುದೇ ಈ ಇಳಿಕೆಗೆ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ವರದಿ ತಿಳಿಸಿದೆ. 

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.83ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಶೇ 4.31ರಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿತ್ತು ಎಂದು ಹೇಳಿದೆ.

ಏಪ್ರಿಲ್‌ನಲ್ಲಿ ಶೇ 8.70ರಷ್ಟಿದ್ದ ಆಹಾರದ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇ 8.69ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದ ಫೆಬ್ರುವರಿಯಿಂದ ಇಳಿಕೆಯ ಪಥದಲ್ಲಿಯೇ ಸಾಗುತ್ತಿದೆ. ಫೆಬ್ರುವರಿಯಲ್ಲಿ ಶೇ 5.1ರಷ್ಟು ದಾಖಲಾಗಿತ್ತು.

ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿಯೇ ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗುರಿಯಾಗಿದೆ.  

ಇತ್ತೀಚೆಗೆ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ 2024–25ನೇ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದರೆ, ಹಣ್ಣುಗಳ ಬೆಲೆಯಲ್ಲಿ ಇಳಿಕೆಯಾಗಿದೆ. 

‘ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಇಂಧನ, ವಿದ್ಯುತ್‌ ಬೆಲೆಯಲ್ಲಿ ಇಳಿಕೆಯಾಗಿದೆ ಅಥವಾ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಈ ಬೆಳವಣಿಗೆಯಿಂದಾಗಿ ಜೂನ್‌ನಲ್ಲಿ ಹಣದುಬ್ಬರವು ಶೇ 5ಕ್ಕಿಂತ ಕಡಿಮೆ ದಾಖಲಾಗುವ ನಿರೀಕ್ಷೆಯಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಶೇ 2.5ರಿಂದ ಶೇ 3.5ಕ್ಕೆ ತಗ್ಗುವ ಸಾಧ್ಯತೆಯಿದೆ’ ಎಂದು ಕ್ರೆಡಿಟ್‌ ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ.

ಆಂಧ್ರಪ್ರದೇಶದ, ಅಸ್ಸಾಂ, ಬಿಹಾರ, ಛತ್ತೀಸಗಢ, ಹರಿಯಾಣ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು ದಾಖಲಾಗಿದೆ.

ಒಡಿಶಾದಲ್ಲಿ ಶೇ 6.25ರಷ್ಟು ಗರಿಷ್ಠ ಮಟ್ಟದಲ್ಲಿದ್ದರೆ, ದೆಹಲಿಯಲ್ಲಿ ಶೇ 1.99ರಷ್ಟು ಕಡಿಮೆ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT