ಶನಿವಾರ, ಡಿಸೆಂಬರ್ 14, 2019
24 °C

ಚಿಲ್ಲರೆ ಹಣದುಬ್ಬರ 16 ತಿಂಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚಿಲ್ಲರೆ ಬೆಲೆ ಆಧರಿಸಿದ ಹಣದುಬ್ಬರವು ಅಕ್ಟೋಬರ್‌ ತಿಂಗಳಲ್ಲಿ 16 ತಿಂಗಳ ಗರಿಷ್ಠ ಮಟ್ಟವಾದ ಶೇ 4.62ರಷ್ಟಕ್ಕೆ ಏರಿಕೆಯಾಗಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಯು ಸೆಪ್ಟೆಂಬರ್‌ ತಿಂಗಳ ಶೇ 5.11 ರಿಂದ ಅಕ್ಟೋಬರ್‌ನಲ್ಲಿ ಶೇ 7.89ಕ್ಕೆ ಏರಿಕೆಯಾಗಿರುವುದರಿಂದ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಏರಿಕೆ ಕಂಡಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಿತಕರ ಮಟ್ಟವಾದ ಶೇ 4ಕ್ಕಿಂತ ಹೆಚ್ಚಿಗೆ ಇದೆ.

ಕೇಂದ್ರೀಯ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರಗಳನ್ನು ತಗ್ಗಿಸುವ ನಿರ್ಧಾರಕ್ಕೆ ಬರುವುದರ ಮೇಲೆ ಈ ವಿದ್ಯಮಾನವು ಪ್ರಭಾವ ಬೀರಲಿದೆ.

‘ಮುಂಗಾರ ಮಳೆಯ ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾರಣಕ್ಕೆ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡಿರುವುದರಿಂದ ಹಣದುಬ್ಬರದಲ್ಲಿ ತೀವ್ರ ಹೆಚ್ಚಳವಾಗಿದೆ’ ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಕರೆನ್ಸಿ ಮುಖ್ಯಸ್ಥ ರಾಹುಲ್‌ ಗುಪ್ತಾ ವಿಶ್ಲೇಷಿಸಿದ್ದಾರೆ.

ಅಕ್ಟೋಬರ್‌ನಲ್ಲಿ ತರಕಾರಿಗಳ ಬೆಲೆಯು ಹಿಂದಿನ ತಿಂಗಳ ಶೇ 5.40ಕ್ಕೆ ಹೋಲಿಸಿದರೆ ಶೇ 26.10ರಷ್ಟು ಏರಿಕೆ ಕಂಡಿದೆ. ಹಣ್ಣುಗಳ ಬೆಲೆಯು ಶೇ 0.83 ರಿಂದ ಶೇ 4.08ಕ್ಕೆ ಹೆಚ್ಚಳಗೊಂಡಿದೆ. ದ್ವಿದಳ ಧಾನ್ಯ, ಮಾಂಸ – ಮೀನು ಹಾಗೂ ಮೊಟ್ಟೆ ಬೆಲೆ ಕ್ರಮವಾಗಿ ಶೇ 2.16, ಶೇ 9.75 ಮತ್ತು ಶೇ 6.26ರಂತೆ ಏರಿಕೆ ಕಂಡಿವೆ. ಬೇಳೆಕಾಳು ಬೆಲೆ ಶೇ 11.72ರಷ್ಟು ತುಟ್ಟಿಯಾಗಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ಈ ಮಾಹಿತಿ ಬಿಡುಗಡೆ ಮಾಡಿದೆ.

*
ಚಿಲ್ಲರೆ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಮುಂದುವರೆಯಲಿದ್ದು, ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡುವ ಯೋಜನೆಗಳನ್ನು ಏರುಪೇರು ಮಾಡಲಿದೆ.
-ಅದಿತಿ ನಾಯರ್‌, ‘ಐಸಿಆರ್‌ಎ’ ಅರ್ಥಶಾಸ್ತ್ರಜ್ಞೆ

ಪ್ರತಿಕ್ರಿಯಿಸಿ (+)